ಬಾಗಲಕೋಟೆ: ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮುಧೋಳದಲ್ಲಿ ಇಂದು ರೈತರ ವಿರುದ್ಧ ಗರಂ ಆಗಿದ್ದರು. ಇದರ ಬೆನ್ನಲ್ಲೇ ಬಾಗಲಕೋಟೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ವಿರುದ್ಧವೂ ಸಿಡಿಮಿಡಿಗೊಂಡಿದ್ದಾರೆ.
ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳಿಂದ ಸಿಎಂ ಪರಿಹಾರ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಜಿಲ್ಲಾಧಿಕಾರಿಗಳು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿದ್ದ ಸಂತ್ರಸ್ತರಿಗೆ ಹಣ ನೀಡಲು ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳ ಉತ್ತರಕ್ಕೆ ಅಸಮಾಧಾನಗೊಂಡ ಸಿಎಂ, ಪ್ರವಾಹದಲ್ಲಿ ಮನೆ ಕಳೆದುಕೊಂಡ ಜನರಿಗೆ ಯಾವುದೋ ಒಂದು ಅವಕಾಶದ ಅಡಿ ಪರಿಹಾರ ನೀಡಬೇಕು. ನಿಮ್ಮ ಕಾಯ್ದೆ ತೆಗೆದುಕೊಂಡು ಬೆಂಕಿಗೆ ಹಾಕಿ. ಈಗ ಸಂತ್ರಸ್ತರ ಹಿತವೇ ಮುಖ್ಯ. ಸರ್ಕಾರಿ ಸ್ಥಳದಲ್ಲಿ ಮನೆ ನಿರ್ಮಿಸಿದ್ದರೂ ಯಾವುದಾದರೊಂದು ಮಾರ್ಗ ಹುಡುಕಿ ಪರಿಹಾರ ಕೊಡಿ ಎಂದು ಸೂಚಿಸಿದರು.
Advertisement
Advertisement
ಇದಕ್ಕೂ ಮುನ್ನ ಮುಧೋಳದ ಪ್ರವಾಸಿ ಮಂದಿರಕ್ಕೆ ತೆರಳಿದ ಸಿಎಂ, ಸಂತ್ರಸ್ತರ ಅಹವಾಲು ಸ್ವೀಕರಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಎಂ ಮಾತನಾಡುವಾಗ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ನೆರೆ ಸಂತ್ರಸ್ತರು ಘೋಷಣೆ ಕೂಗಲು ಆರಂಭಿಸಿದರು. ಈ ಮಧ್ಯೆ ರೈತರೊಬ್ಬರು ಪದೇ ಪದೇ ತಮ್ಮ ಸಮಸ್ಯೆ ಹೇಳಲು ಮುಂದಾದರು. ಈ ಎಲ್ಲ ಬೆಳವಣಿಗೆಯು ಸಿಎಂ ಯಡಿಯೂರಪ್ಪ ಅವರಿಗೆ ಕಿರಿಕಿರಿ ಉಂಟಾಯಿತು. ಇದರಿಂದ ತಾಳ್ಮೆ ಕಳೆದುಕೊಂಡ ಸಿಎಂ ‘ನಾನು ಮಾತನಾಡೋವರೆಗೂ ಸುಮ್ಮನೆ ಇರು. ಇಲ್ಲಾ ತಗೋ ಮೈಕ್ ನೀನೇ ಮಾತನಾಡು’ ಎಂದು ಗುಡುಗಿದರು.