ಪಕ್ಷದ ಶಾಸಕರ ಮೇಲೆ ಸಿಎಂಗೆ ಗುಮಾನಿ? ಶಾಸಕರ ಚಲನವಲನ ಬಗ್ಗೆ ಗುಪ್ತಚರ ಕಣ್ಣು

Public TV
3 Min Read
BSY 3

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಬಂದು ಬರೋಬ್ಬರಿ ಆರು ತಿಂಗಳು ತುಂಬಿವೆ. ಆದರೆ ಆರು ತಿಂಗಳ ನಂತರ ಸರ್ಕಾರ, ಪಕ್ಷ, ಸಚಿವರು, ಶಾಸಕರು, ವಲಸಿಗರು ಹೀಗೆ ಎಲ್ಲರ ಎಲ್ಲದರ ವರಸೆಗಳು ನಿಧಾನಕ್ಕೆ ಬದಲಾಗತೊಡಗಿವೆ. ಆರು ತಿಂಗಳ ಹಿಂದಿನ ಬಿಜೆಪಿಗೂ ಈಗಿನ ಬಿಜೆಪಿಗೂ ನಡುವೆ ಬಹಳಷ್ಟು ಬದಲಾವಣೆಗಳು ಆಗಿವೆ, ಆಗತೊಡಗಿವೆ. ಯಡಿಯೂರಪ್ಪ ನಾಯಕತ್ವದಲ್ಲಿ ನಾವೆಲ್ಲ ಮುಂದೆ ಹೋಗ್ತೀವಿ, ಉತ್ತಮ ಆಡಳಿತ ಕೊಡ್ತೀವಿ, ಪ್ರಸಕ್ತ ಸರ್ಕಾರದ ಈ ಅವಧಿ ಪೂರೈಸಿ ಮುಂದಿನ ಬಾರಿಗೂ ಬಿಜೆಪಿಯೇ ಬರೋ ಹಾಗೆ ಮಾಡ್ತೀವಿ ಅಂದವರ ಮನಸ್ಥಿತಿ- ಹೇಳಿಕೆಗಳು, ನಿಲುವು- ನಡೆಗಳು ಬಣ್ಣ ಬದಲಾಯಿಸತೊಡಗಿವೆ. ಈಗ ಸರ್ಕಾರ ಮತ್ತು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಇತ್ತೀಚಿನ ವಿದ್ಯಮಾನಗಳಿಂದ ಸಾಬೀತಾಗಿದೆ. ಖುದ್ದು ಈಗಲೂ ಪಕ್ಷದ ಮೇರು ನಾಯಕ, ಸರ್ಕಾರದಲ್ಲೂ ಹಿಡಿತ ಇಟ್ಟುಕೊಂಡಿರುವ ಸಿಎಂ ಯಡಿಯೂರಪ್ಪ ಅವರಿಗೆ ಖುದ್ದು ಪಕ್ಷದ ಶಾಸಕರ ಮೇಲೆಯೇ ನಂಬಿಕೆ ಹೋಗತೊಡಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಯಡಿಯೂರಪ್ಪ ಅವರಿಗೆ ಶಾಸಕರ ನಡವಳಿಕೆಗಳ ಮೇಲೆ ಅದಾಗಲೇ ಗುಮಾನಿ ಶುರುವಾಗಿದೆ.

BSY Shettar Bommai

ಇತ್ತೀಚೆಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಬಿಜೆಪಿ ಶಾಸಕರು ಸಭೆ ನಡೆಸಿದ್ದರು. ಆ ಸಭೆಯ ಉದ್ದೇಶ ಬಳಿಕ ಅದು ಮಾಧ್ಯಮಗಳಲ್ಲಿ ವರದಿಯಾದ ರೀತಿ ಏನೇ ಇರಬಹುದು. ಆದರೆ ಹೀಗೆ ತಮ್ಮ ಗಮನಕ್ಕೆ ಬರದೇ ಶಾಸಕರು ಗುಪ್ತ ಸಭೆ ಮಾಡಿದ್ದಕ್ಕೆ ಯಡಿಯೂರಪ್ಪ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಶೆಟ್ಟರ್ ನಿವಾಸದ ಸಭೆಯ ಬೆನ್ನಲ್ಲೇ ಪಂಚಮಸಾಲಿ ಶಾಸಕರು ಸಹ ಸ್ವಾಮೀಜಿಗಳ ಜೊತೆ ಸಭೆ ನಡೆಸಿರುವುದು ಯಡಿಯೂರಪ್ಪ ಅವರಲ್ಲಿ ಅಸಮಾಧಾನ ಹಟ್ಟಿಸಿದೆ ಎಂದು ಅವರ ಆಪ್ತ ವರ್ಗ ಹೇಳಿಕೊಂಡಿದೆ. ಇದರ ಜೊತೆ ಬೇರೆ ಬೇರೆ ಭಿನ್ನಮತಗಳು, ರಹಸ್ಯ ಚಲನವಲನಗಳು ನಡೆಯುತ್ತಿರುವುದು ಯಡಿಯೂರಪ್ಪ ಅವರ ಗಮನಕ್ಕೆ ಬಂದಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಹಲವು ಶಾಸಕರ ಚಲನವಲನಗಳ ಮಾಹಿತಿ ಪಡೆಯಲು ಗುಪ್ತಚರ ದಳವನ್ನು ಛೂ ಬಿಟ್ಟಿದ್ದಾರೆ ಎನ್ನಲಾಗಿದೆ.

BJP FLAG

ಶೆಟ್ಟರ್ ನಿವಾಸದ ಸಭೆ ಬಳಿಕ ಎಚ್ಚೆತ್ತುಕೊಂಡ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಗುಪ್ತಚರ ಇಲಾಖೆಗೆ ಸಿಎಂ ಹೊಸ ಟಾಸ್ಕ್ ನೀಡಿದ್ದಾರೆ. ಸಿಎಂ ಗುಪ್ತಚರ ಇಲಾಖೆಗೆ ನೀಡಿದ ಟಾಸ್ಕ್ ನಿಂದಾಗಿ ಯಾರೇ ಪ್ರತ್ಯೇಕ ಸಭೆ ನಡೆಸಿದ್ರು ತಕ್ಷಣ ಮಾಹಿತಿ ಸಿಎಂಗೆ ರವಾನೆ ಆಗಲಿದೆ ಎನ್ನಲಾಗಿದೆ.

ಸಂಜೆ ಆಗ್ತಿದ್ದಂತೆ ಕಾರ್ಯಪ್ರವೃತ್ತರಾಗುವ ಆ ಇಂಟಲಿಜೆನ್ಸ್ ತಂಡ ಬೆಂಗಳೂರಿನ ಪಂಚತಾರಾ ಹೋಟೆಲ್ ಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ ಎನ್ನಲಾಗಿದೆ. ಗುಪ್ತಚರ ಇಲಾಖೆಗೆ ಬೆಂಗಳೂರಿನ ಎಲ್ಲ ಪಂಚತಾರಾ ಹೋಟೆಲುಗಳಿಗೆ ರೌಂಡ್ಸ್ ಹೊಡೆಯಲು ಸಿಎಂ ಗುಪ್ತಚರ ಇಲಾಖೆಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಸಿಎಂ ಸೂಚನೆ ಮೇರೆಗೆ ಪಂಚತಾರಾ ಹೋಟೆಲ್ ಗಳಿಗೆ ಗುಪ್ತಚರ ಇಲಾಖೆ ಅಧಿಕಾರಿಗಳು ರೌಂಡ್ಸ್ ಹೊಡೆಯುತ್ತಿದ್ದಾರೆ ಎನ್ನಲಾಗಿದೆ.

BJP FLAG 1 copy

ಶಾಸಕರು ಪ್ರತ್ಯೇಕ ಸಭೆ ನಡೆಸುತ್ತಿರುವ ಮಾಹಿತಿ ಸಿಕ್ಕರೆ ತಕ್ಷಣ ಸಿಎಂಗೆ ಮಾಹಿತಿ ನೀಡಲಿದೆಯಂತೆ ಗುಪ್ತಚರ ಇಲಾಖೆಯ ಈ ತಂಡ. ಪ್ರತ್ಯೇಕ ಸಭೆಯಲ್ಲಿ ಯಾರೆಲ್ಲ ಇದ್ದಾರೆ, ಸಭೆಯ ಅಜೆಂಡಾ ಏನು, ಎಷ್ಟು ಸಮಯ ಸಭೆ ನಡೆಸಿದ್ರು, ಎಲ್ಲಿ ಸಭೆ ನಡೆಸಿದರು ಎಂಬಿತ್ಯಾದಿ ಮಾಹಿತಿ ತಕ್ಷಣ ಸಿಎಂಗೆ ರವಾನೆ ಆಗಲಿದೆಯಂತೆ. ಸಂಜೆಯಾಗ್ತಿದ್ದಂತೆ ಬೆಂಗಳೂರಿನಲ್ಲಿ ಯಾರೆಲ್ಲ ಬಿಜೆಪಿ ಶಾಸಕರಿದ್ದಾರೆ, ಲೋಕೇಶನ್ ಎಲ್ಲಿ, ಮೀಟಿಂಗ್ ಏನಾದ್ರು ಮಾಡ್ತಿದ್ದಾರಾ ಅಂತಲೂ ಈ ತಂಡ ಪತ್ತೆ ಹಚ್ಚುತ್ತಿದೆ ಎನ್ನಲಾಗಿದೆ. ಗುಪ್ತಚರ ಇಲಾಖೆಯ ಈ ತಂಡ ತಡರಾತ್ರಿವರೆಗೂ ಪಂಚತಾರ ಹೋಟೆಲ್ ಗಳ ರೌಂಡ್ಸ್ ಹೊಡೆಯುತ್ತಿದೆ ಎನ್ನಲಾಗಿದೆ. ಆ ಮೂಲಕ ಸರ್ಕಾರ ಉಳಿಸಿ ಉಳಿದ ಅವಧಿವರೆಗೂ ಎದುರಾಗುವ ಸಮಸ್ಯೆಗಳನ್ನು ಬರದಂತೆ ತಡೆಯಲು ಸಿಎಂ ಯಡಿಯೂರಪ್ಪ ಈ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *