ಬೆಂಗಳೂರು: ಈ ತಿಂಗಳಾಂತ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ನಡೆಯುವುದು ಬಹತೇಕ ಪಕ್ಕಾ ಆಗಿದೆ. ಆದರೆ ನಡೆಯೋದು ವಿಸ್ತರಣೆಯೋ ಅಥವಾ ಪುನಾರಚನೆಯೋ ಅನ್ನುವ ಗೊಂದಲವೂ ಮುಂದುವರಿದಿದೆ. ಸಂಪುಟ ವಿಸ್ತರಣೆ ರೇಸ್‍ನಲ್ಲಿ ಉಳಿಯೋರು ಯಾರು, ಅಳಿಯೊರು ಯಾರು ಅನ್ನೋ ಪ್ರಶ್ನೆಯೂ ಮೂಡಿದೆ.
ಇಷ್ಟಕ್ಕೆಲ್ಲ ಕಾರಣ, ಪಕ್ಷದಲ್ಲಿ ಶುರುವಾಗಿರುವ ಮೂಲ-ವಲಸಿಗರ ನಡುವಿನ ಗುಪ್ತ ಜಟಾಪಟಿ. ಋಣ ಸಂದಾಯ ತೀರಿಸೋರು ಮತ್ತು ಋಣ ಸಂದಾಯ ಕೇಳಿದವರು ಎರಡೂ ಗುಂಪುಗಳು ಈಗ ಜಿದ್ದಿಗೆ ಬಿದ್ದವರಂತೆ ವರ್ತಿಸುತ್ತಿದ್ದಾರೆ. ಹೌದು, ಬಿಜೆಪಿಯಲ್ಲಿ ಸ್ಥಾನ ಸಂಘರ್ಷ ಶುರುವಾಗಿದೆ. ಸಂಪುಟ ವಿಸ್ತರಣೆಯಾ, ಸಂಪುಟ ಪುನಾರಚನೆಯಾ ಅನ್ನೋದೇ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಗೊಂದಲವೇ ಈಗ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಹಾಲಿ ಸಚಿವರು ಮತ್ತು ಮಿತ್ರಮಂಡಳಿ ನಡುವೆ ಪಕ್ಷದ ವೇದಿಕೆಯಲ್ಲೇ ಸಂಘರ್ಷ ನಡೆಯುತ್ತಿದೆ.
Advertisement
Advertisement
ಸಂಪುಟ ವಿಸ್ತರಣೆಯಾ ಅಥವಾ ಪುನಾರಚನೆಯಾ ಎಂಬ ಆತಂಕದಲ್ಲಿ ಹಾಲಿ ಸಚಿವರು ಮತ್ತು ಮಿತ್ರಮಂಡಳಿ ಶಾಸಕರು ಪರಸ್ಪರ ಒಗ್ಗಟ್ಟು ಕಾಯ್ದುಕೊಂಡಿದ್ದಾರೆ. ಸಂಪುಟ ಪುನಾರಚನೆ ಬೇಡವೇ ಬೇಡ ಅಂತ ಹಾಲಿ ಸಚಿವರು ಪಟ್ಟು ಹಿಡಿದಿದ್ದಾರೆ. ಮಿತ್ರಮಂಡಳಿಗೆ ಏನಾದ್ರೂ ಕೊಟ್ಕೊಳ್ಳಿ, ನಮ್ಮನ್ನು ಮಾತ್ರ ಮುಟ್ಟಬೇಡಿ. ನಮ್ಮ ತಂಟೆಗೆ ಬರಬೇಡಿ, ನಮ್ಮ ಖಾತೆಗೆ ಕೈ ಹಾಕಬೇಡಿ ಎಂದು ಹಾಲಿ ಸಚಿವರು ಯಡಿಯೂರಪ್ಪ ಎದುರು ಬೇಡಿಕೆ ಇಟ್ಟಿದ್ದಾರಂತೆ. ಪುನಾರಚನೆ ನೆಪದಲ್ಲಿ ತಮ್ಮ ಖಾತೆ ಹೋಗುವ ಆತಂಕದಲ್ಲಿರುವ ಈ ಸಚಿವರು ಇಷ್ಟು ಕಾಲ ತಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿದ್ದಾರೆ ಎನ್ನಲಾಗಿದೆ. ಒಗ್ಗಟ್ಟಿನಿಂದ ಸಂಪುಟ ಪುನಾರಚನೆಗೆ ಎಲ್ಲ ಸಚಿವರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಇತ್ತ ಮಿತ್ರಮಂಡಳಿ ಶಾಸಕರೇನೂ ಕಮ್ಮಿಯಿಲ್ಲ. ಹಾಲಿ ಸಚಿವರ ಬಳಿ ಇರುವ ಪ್ರಭಾವಿ ಖಾತೆಗಳನ್ನ ನಮಗೆ ಕೊಡಿಸಿ ಅಂತ ಮಿತ್ರಮಂಡಳಿ ಸದಸ್ಯರು ಹೇಳುತ್ತಿದ್ದಾರೆ. ನಮ್ಮಿಂದ ಸರ್ಕಾರ ಬಂತು, ಸಿಎಂ, ಡಿಸಿಎಂ, ಮಿನಿಸ್ಟರ್ ಆದ್ರಿ. ಈಗ ನಾವು ಕೇಳಿದ ಖಾತೆ ಕೊಡಲ್ಲ ಅಂದ್ರೆ ಹೇಗೆ? ಸಂಪುಟ ವಿಸ್ತರಣೆ ಬೇಡ ಪುನಾರಚನೆ ಮಾಡಿ ಅಂತ ಮಿತ್ರಮಂಡಳಿ ತಂಡದವರು ಹೇಳುತ್ತಿದ್ದಾರಂತೆ. ಕೊಟ್ಟ ಮಾತು ಉಳಿಸಿಕೊಳ್ಳಿ ಅಂತ ಮಿತ್ರಮಂಡಳಿಯವರು ಯಡಿಯೂರಪ್ಪ ಬೆನ್ನು ಬಿದ್ದಿದ್ದಾರಂತೆ. ಇವರಿಬ್ಬರ ಕಿತ್ತಾಟದಲ್ಲಿ ಯಡಿಯೂರಪ್ಪ ಪಾಡು ಯಾರ ಬಳಿಯೂ ಹೇಳಿಕೊಳ್ಳದಂತಾಗಿದೆ.