ಬೆಂಗಳೂರು: ನವೆಂಬರ್ 2ಕ್ಕೆ ಅಧಿಕಾರಕ್ಕೆ ಬಂದು 100 ದಿನವಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಶತದಿನದ ಸಂಭ್ರಮ ಆಚರಿಸಲು ಸಿದ್ಧತೆ ನಡೆಸುತ್ತಿದೆ.
ಹೌದು. ಶತದಿನದ ಸಂಭ್ರಮಾಚರಣೆ ಸಂಬಂಧ ಸಿಎಂ ಯಡಿಯೂರಪ್ಪನವರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನೂರು ದಿನದ ಸಾಧನೆ ತಿಳಿಸಲು ಭಾನುವಾರ ತರಹೇವಾರಿ ಪೋಸ್‍ಗಳನ್ನು ನೀಡಿ ಸಿಎಂ ಫೋಟೋಶೂಟ್ ಮಾಡಿಸಿದ್ದಾರೆ.
Advertisement
Advertisement
ಸರ್ಕಾರದ ಈ ಸಂಭ್ರಮಾಚರಣೆಗೆ ಮುಂದಾಗುತ್ತಿರುವುದಕ್ಕೆ ಈಗ ಭಾರೀ ಟೀಕೆ ವ್ಯಕ್ತವಾಗಿದೆ. ಉತ್ತರ ಕರ್ನಾಟಕದಲ್ಲಿ ಇನ್ನೂ ನೆರೆ ಪರಿಹಾರ ಕಾರ್ಯಗಳು ನಿಂತಿಲ್ಲ. ಈ ನಡುವೆ ಮತ್ತೊಮ್ಮೆ ನೆರೆ ಉಂಟಾಗಿದ್ದು ಈ ನೋವಿನಲ್ಲಿ ಸಂಭ್ರಮಾಚರಣೆ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ಎದ್ದಿದೆ.
Advertisement
ನೆರೆ, ಅತಿವೃಷ್ಟಿ ಹಾನಿಯಿಂದ ಜನ ತತ್ತರಿಸುತ್ತಿದ್ದರೆ ಇತ್ತ ಸರ್ಕಾರ ಶತದಿನಗಳ ಸಂಭ್ರಮಾಚರಣೆಗೆ ತಯಾರಿ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದ್ದಿದೆ.
Advertisement
ಮತ್ತೆ ನೆರೆ: ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ ರಾತ್ರಿ ಬರೋಬ್ಬರಿ 3.25 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರದಲ್ಲಿರುವ ಡ್ಯಾಂನಿಂದ ಇಷ್ಟೊಂದು ಪ್ರಮಾಣದಲ್ಲಿ ನೀರು ಬಿಟ್ಟಿರುವ ಕಾರಣ ಕೊಳ್ಳೂರು ಸೇತುವೆ, ಲಿಂಗಸುಗೂರಿನ ಶೀಲಹಳ್ಳಿ ಸೇತುವೆ, ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿದ್ದು ಯಾದಗಿರಿ, ರಾಯಚೂರು ಜಿಲ್ಲೆಗಳ ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಇತ್ತ ಮಳೆಯಬ್ಬರಕ್ಕೆ ಗೋಕಾಕ್ ಫಾಲ್ಸ್ ಬಳಿ ಇರುವ ಗುಡ್ಡ ಮತ್ತೆ ಕುಸಿಯುತ್ತಿದ್ದು, ರಸ್ತೆಗೆ ಬೃಹತ್ ಗಾತ್ರದ ಕಲ್ಲುಗಳು ಉರುಳಿ ಬಿದ್ದಿವೆ. ಬೆಳಗಾವಿ-ಗೋಕಾಕ್ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸವಾರರು ಆತಂಕದಲ್ಲೇ ಓಡಾಡುತ್ತಿದ್ದಾರೆ. ಉರುಳಿ ಬಿದ್ದಿರುವ ಬಂಡೆಗಲ್ಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಬೆಳಗ್ಗೆ 7 ಗಂಟೆಯಿಂದ ಮತ್ತೆ ಆರಂಭವಾಗಿದೆ. ಉರುಳಿರುವ ಎರಡು ಬೃಹತ್ ಬಂಡೆಗಳನ್ನು ಮೊದಲು ಬ್ಲಾಸ್ಟ್ ಮಾಡಿ ಅವುಗಳನ್ನು ಅಲ್ಲಿಂದ ಸಾಗಿಸಲಾಗುತ್ತದೆ. ಎನ್‍ಡಿಆರ್‍ಎಫ್ ಸಿಬ್ಬಂದಿ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ.
ಮಳೆಯ ಅಬ್ಬರಕ್ಕೆ ನಾಡದೇವತೆ ಚಾಮುಂಡಿ ದರ್ಶನಕ್ಕೆ ಹೋಗುವ ಚಾಮುಂಡಿ ಬೆಟ್ಟದಲ್ಲೂ ಭೂ ಕುಸಿತವಾಗಿದೆ. ಚಾಮುಂಡಿ ಬೆಟ್ಟದ ವ್ಯೂವ್ ಪಾಯಿಂಟ್ ಬಳಿಯಲ್ಲಿ ಭೂಮಿ ಕುಸಿದಿದ್ದರಿಂದ ರಸ್ತೆಯೂ ಕುಸಿತವಾಗಿದೆ. ನಂದಿ ವಿಗ್ರಹದ ಕಡೆಗೆ ಸಾಗುವ ಮಾರ್ಗದ ಸನಿಹದಲ್ಲಿಯೇ ಈ ವ್ಯೂವ್ ಪಾಯಿಂಟ್ ಇದೆ. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದಾರೆ.
ತುಂಗಭದ್ರಾ ಜಲಾಶಯದಿಂದ ಮಂಗಳವಾರ ಒಂದೂವರೆ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್‍ನಲ್ಲಿ ಸೇತುವೆ ಮುಳುಗಡೆ ಆಗಿತ್ತು. ಇತ್ತ ಮಳೆ ಇಲ್ಲದೇ ಕಂಗೆಟ್ಟಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ವರುಣ ರೌದ್ರಾವತಾರ ತಾಳಿದ್ದಾನೆ. ಹೊಸದುರ್ಗ ತಾಲೂಕಿನ ಕೆಲ್ಲೋಡುವಿನಲ್ಲಿ ವೇದಾವತಿ ನದಿ ಪ್ರವಾಹಕ್ಕೆ ತೆಂಗಿನ ಮರಗಳೇ ಉರುಳಿ ಬಿದ್ದಿದ್ದು, ಕೆಲ್ಲೋಡು ಸೇತುವೆ ಬಳಿ ಮಣ್ಣು ಕುಸಿದಿದೆ.
ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಹೀಗಾಗಿ ಸದ್ಯಕ್ಕೆ ನೆರೆಯಬ್ಬರ ತಗ್ಗುವ ಲಕ್ಷಣಗಳಿಲ್ಲ. ಬೆಳಗಾವಿ, ಧಾರವಾಡ, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಕಿತ್ತಳೆ ಬಣ್ಣದ ಎಚ್ಚರಿಕೆ ನೀಡಲಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಬೆಂಗಳೂರಲ್ಲಿ ಶುಕ್ರವಾರದ ಬೆಳಗ್ಗಿನವರೆಗೂ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಇಲ್ಲಿವರೆಗೆ ಕರ್ನಾಟಕದಲ್ಲಿ ಪ್ರವಾಹಕ್ಕೆ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.