ಬೆಂಗಳೂರು: ಕೊರೊನಾ ಹರಡುವಿಕೆ ತಡೆಯಲು ಬೆಂಗಳೂರು ನಗರದ ಜನತೆ ಮನೆಯಿಂದ ಹೊರ ಬರದಂತೆ ನಿರ್ಬಂಧ ಹೇರುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಲವು ತೋರಿಲ್ಲ ಎಂದು ಹೇಳಲಾಗುತ್ತಿದೆ.
ವೈದ್ಯರು, ಪೊಲೀಸ್ ಹಾಗೂ ಪತ್ರಕರ್ತರಿಗೆ ಮಾತ್ರ ಕರ್ತವ್ಯದ ಹಿನ್ನೆಲೆಯಲ್ಲಿ ಮನೆಯಿಂದ ಹೊರ ಬರಲು ಅವಕಾಶ ಕಲ್ಪಿಸಿ, ಬೇರೆ ಬೇರೆ ವೃತ್ತಿ ನಿರತರು ಹಾಗೂ ಸಾಮಾನ್ಯ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದಕ್ಕೆ ನಿರ್ಬಂಧ ಹೇರುವುದು. ದುಡಿಯುವ ವರ್ಗ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಒಂದು ತಿಂಗಳ ವಿಶೇಷ ಪಡಿತರ ವ್ಯವಸ್ಥೆ ಕಲ್ಪಿಸಿ, ಅವರಿಗೆ ನಿತ್ಯದ ಜೀವನೋಪಾಯಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಲು ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ 2ನೇ ಹಂತದಲ್ಲಿ ಹರಡಿದ್ದು, ನಂತರ ನಿಯಂತ್ರಿಸಲು ಸರ್ಕಾರಕ್ಕೆ ಕಷ್ಟವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಈ ರೀತಿಯ ಆಲೋಚನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಸಂಪೂರ್ಣ ಚಟುವಟಿಕೆ ಸ್ಥಗಿತಗೊಳಿಸಲು ನಿರ್ಧರಿಸಿದರೆ, ಸರ್ಕಾರದ ಆದಾಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎನ್ನಲಾಗುತ್ತಿದೆ.