ರವೀಶ್ ಎಚ್‍ಎಸ್
ರಾಜಕಾರಣದ ಪ್ರತಿ ಪದರದಲ್ಲೂ ಅಧಿಕಾರದ ರುಚಿ ಹತ್ತಿದೆ. ಅಧಿಕಾರ ಇಲ್ಲದಿದ್ದಾಗ ನೀರಿನಿಂದ ಹೊರ ಬಿದ್ದ ಮೀನಿನಂತೆ ವಿಲವಿಲ ಎಂದವರು ನೈತಿಕತೆ, ಮೌಲ್ಯಗಳ ಬಗ್ಗೆ ಮಾತನಾಡಿದ್ದು ಇದೆ. ಅದೇ ಅಧಿಕಾರ ಕುರ್ಚಿ ಸಿಕ್ಕ ಬಳಿಕ ಮೌಲ್ಯಗಳ ವರಸೆಯನ್ನೇ ಬದಲಿಸಿದ ರಾಜಕಾರಣಿಗಳ ಪಟ್ಟಿಯೂ ಉದ್ದವಿದೆ. ನೈತಿಕತೆ ಬಗ್ಗೆ ಮಾತನಾಡುವ ಹಕ್ಕು ಶೇಕಡಾ 5ರಷ್ಟು ರಾಜಕಾರಣಿಗಳ ಮಾತ್ರ ಇದೆ. ಆದರೆ ಉಳಿದವರು ಲಜ್ಜೆಗೆಟ್ಟ ಬಣ್ಣ ಬದಲಿಸುವ ಊಸರವಳ್ಳಿ ಜಾತಿಗೆ ಸೇರಿದವರು. ಮೂರು ದಶಕಗಳ ಹಿಂದೆ ರಾಜಕಾರಣದಲ್ಲಿ ಸ್ವಲ್ಪವಾದರೂ ನೈತಿಕ ಗೆರೆ ಇತ್ತು ಎನ್ನುವುದನ್ನು ಕೇಳಿದ್ದೇನೆ. ಈಗ ರೇಖೆ ಇದ್ದರೂ ತುಳಿದು, ಅಳಿಸಿ ಹಾಕಿ ಮುಂದೆ ಸಾಗುವ ಬಣ್ಣಗೇಡು ರಾಜಕಾರಣ. ಸದ್ಯ ನೈತಿಕತೆಯನ್ನು ಒತ್ತಿ ಹೇಳಿದ್ದಕ್ಕೆ ಕಾರಣ ಇದೆ. ಆರೋಪ ಮಾಡಿದ ಇಲಾಖೆಯನ್ನೇ ತಾಂಬೂಲ ಸಮೇತ ಒಬ್ಬ ಆರೋಪಿ ಕೈಗೆ ಕೊಟ್ಟರೆ ಏನಾಗಬಹುದು ಅನ್ನುವುದನ್ನು ಊಹಿಸುವುದು ಕಷ್ಟವೇನಲ್ಲ. ಆ ಆರೋಪ ಮಾಡಿರುವ ಇಲಾಖೆ ಅರಣ್ಯ ಇಲಾಖೆ. ಆ ಆರೋಪಿ ಸ್ಥಾನದಲ್ಲಿ ಇರುವವರು ಸಚಿವ ಆನಂದ್ ಸಿಂಗ್.
Advertisement
ಅಕ್ರಮ ಗಣಿ ಬಿರುಗಾಳಿಯ ಧೂಳಿನಿಂದಲೇ ಯಡಿಯೂರಪ್ಪ ಸರ್ಕಾರ ಮಕಾಡೆ ಮಲಗಿ ಬಿಟ್ಟಿತ್ತು. ಅದಿರಿನ ಅಂದರ್ ಬಾಹರ್‌ಗೆ ಅದುರಿಹೋಗಿದ್ದರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಅಂತಹ ಆರದ ಗಾಯ ಮಾಡಿಕೊಂಡ ಯಡಿಯೂರಪ್ಪಗೆ ಸ್ವಲ್ಪಮಟ್ಟಿಗಾದರೂ ನೈತಿಕ ಗೆರೆ ಕಾಣಲಿಲ್ಲವಾ..? ಕಾಣುತ್ತಿಲ್ಲವಾ..? ಎಂಬ ಪ್ರಶ್ನೆ. ಬಹಳಷ್ಟು ರಾಜಕಾರಣಿಗಳ ಮೇಲೆ ಆರೋಪಗಳು ಬಂದಿವೆ. ಅದರಲ್ಲಿ ಎಲ್ಲವೂ ಸಾಬೀತಾಗಿಲ್ಲ. ಅದೇ ರೀತಿ ಎಲ್ಲವೂ ಖುಲಾಸೆಯೂ ಆಗಿಲ್ಲ. 15ಕ್ಕೂ ಹೆಚ್ಚು ಕೇಸ್‍ಗಳೂ ಇದ್ದರೂ ಸಚಿವ ಸ್ಥಾನ ನೀಡುವಾಗ, ಪ್ರಮಾಣವಚನ ತೆಗೆದುಕೊಂಡಾಗ ಆನಂದ್ ಸಿಂಗ್‍ರನ್ನ ಯಾರೂ ವಿರೋಧಿಸಿಲ್ಲ. ಅದನ್ನು ವಿರೋಧಿಸುವಷ್ಟು ನೈತಿಕತೆಯನ್ನ ಯಾವ ರಾಜಕಾರಣಿಯೂ, ಯಾವ ಪಕ್ಷವೂ ಉಳಿಸಿಕೊಂಡಿಲ್ಲ. ಆದರೆ ಒಂದು ವ್ಯಾಪ್ತಿಯೊಳಗೆ ಆರೋಪಕ್ಕೆ ಒಳಗಾದವರು ಅದೇ ವ್ಯಾಪ್ತಿಯನ್ನ ಅಧಿಕಾರದ ತೆಕ್ಕೆಗೆ ತೆಗೆದುಕೊಳ್ಳುವುದು ನೈತಿಕತೆಯೇ ಅನ್ನೋ ಪ್ರಶ್ನೆ. ಇದಕ್ಕಾದರೂ ಮುಖ್ಯಮಂತ್ರಿಗಳು ಉತ್ತರಿಸಬೇಕು. ಮುಖ್ಯಮಂತ್ರಿ ಅಷ್ಟೇ ಅಲ್ಲ ಆರೋಪಿ ಸ್ಥಾನದಲ್ಲಿ ನಿಂತವರಿಗೂ ಸ್ವಲ್ಪವಾದರೂ ಅನ್ನಿಸಿಬಿಡಬೇಕು.
Advertisement
Advertisement
ಅಂದಹಾಗೆ ಈಗಿನ ರಾಜಕಾರಣಿಗಳಿಗೆ ನಮ್ಮ ರಾಜ್ಯದ ರಾಜಕಾರಣದ ಇತಿಹಾಸ ಪೂರ್ಣವಾಗಿ ಗೊತ್ತಾ ಎಂಬ ಪ್ರಶ್ನೆಗೆ ಗೊತ್ತಿರಲ್ಲ ಅಂತಾ ದೊಡ್ಡ ಧ್ವನಿಯಲ್ಲಿ ಹೇಳಬಹುದು. ಈ ಹಿಂದೆ ನಡೆದಿರುವ ಎರಡ್ಮೂರು ಪ್ರಕರಣಗಳನ್ನಾದರೂ ಅವರು ತಿಳಿದುಕೊಳ್ಳಬೇಕು. ತಿಳಿದವರು ನೆನಪಿಸಿಕೊಳ್ಳಬೇಕು. ಅದು 1952ರಲ್ಲಿ ಮೈಸೂರು ರಾಜ್ಯದ ಅಧಿಕಾರ ಸೂತ್ರ ಹಿಡಿದಿದ್ದ ಪ್ರಪ್ರಥಮ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ. ಕೆಂಗಲ್ ಹನುಮಂತಯ್ಯ ಅವರ ಸಂಪುಟದಲ್ಲಿ ಸ್ವಾತಂತ್ರ ಹೋರಾಟಗಾರ ಟಿ.ಸಿದ್ದಲಿಂಗಯ್ಯ ಕೈಗಾರಿಕಾ ಮತ್ತು ವಿದ್ಯುತ್ ಖಾತೆ ಸಚಿವರಾಗಿದ್ದರು. ಆಗ ಸಿದ್ದಲಿಂಗಯ್ಯ ಅವರ ಮೇಲೆ ತಾಮ್ರದ ತಂತಿ ಸಾಗಾಣಿಕೆ ಗುತ್ತಿಗೆಯನ್ನ ಅವರ ಸಹೋದರನ ಕಂಪನಿಗೆ ಕೊಟ್ಟಿದ್ದು, ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಪ್ರತಿಧ್ವನಿಸಿತ್ತು. ನನ್ನ ಸಹೋದರ ಆರಂಭದಲ್ಲಿ ಕಂಪನಿಯ ಪಾಲುದಾರನಾಗಿದ್ದ, ಗುತ್ತಿಗೆ ನೀಡುವಾಗ ಹೊರ ಬಂದಿದ್ದಾನೆ. ಆದರೂ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಸಿದ್ದಲಿಂಗಯ್ಯ ಘೋಷಣೆ ಮಾಡಿದ್ರು. ಆದರೆ ರಾಜೀನಾಮೆ ಕೊಟ್ಟ ಬಳಿಕವೂ ಮತ್ತೆ ಸಂಪುಟಕ್ಕೆ ಕೆಂಗಲ್ ಹನುಮಂತಯ್ಯ ಆಹ್ವಾನಿಸಿದರೂ ಸಿದ್ದಲಿಂಗಯ್ಯ ಸಂಪುಟ ಸೇರಲು ನಿರಾಕರಿಸಿದ್ದರು.
Advertisement
ಇದರ ಜೊತೆಗೆ ಕೆಂಗಲ್ ಹನುಮಂತಯ್ಯ ಅವರ ರಾಜೀನಾಮೆ ಘಟನೆಯನ್ನು ಈಗಿನ ರಾಜಕಾರಣಿಗಳು ನೆನಪಿಸಿಕೊಳ್ಳಬೇಕು. ವಿಧಾನಸೌಧದ ನಿರ್ಮಾಣ ವೆಚ್ಚ ಹೆಚ್ಚಳ ಆಗಿದ್ದಕ್ಕೆ ಕೆಂಗಲ್ ಹನುಂತಯ್ಯ ಅವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ನಾಗಪುರದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಿತು. ತನಿಖಾ ಸಂಸ್ಥೆ ತಪ್ಪಿತಸ್ಥರು ಎಂದು ಹೇಳಿತ್ತು. ವಿಧಾನಸಭೆಯಲ್ಲಿ ಕೆಂಗಲ್ ಹನುಮಂತಯ್ಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆಯಿತು. ಆರೋಪದಿಂದ ಬೇಸತ್ತ ಕೆಂಗಲ್ ಹನುಮಂತಯ್ಯ ರಾಜೀನಾಮೆ ನೀಡಿದ್ರು. ತಾವೇ ಕಟ್ಟಿಸಿದ ವಿಧಾನಸೌಧದಲ್ಲಿ ಕೂರಲು ಆಗಲಿಲ್ಲ ಅಂದರೆ, ಆಗಿನ ರಾಜಕಾರಣದಲ್ಲಿ ನೈತಿಕತೆ ಎಷ್ಟಿತ್ತು ಅನ್ನುವುದನ್ನ ಊಹಿಸಿಕೊಳ್ಳಿ. ಮಧುಗಿರಿ ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ನಿಜಲಿಂಗಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ರಾಮರಾವ್ ರಾಜೀನಾಮೆ ಪ್ರಕರಣ, ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಮಕೃಷ್ಣ ಹೆಗಡೆ ರಾಜೀನಾಮೆ ಪ್ರಕರಣಗಳು ನಮ್ಮ ರಾಜ್ಯದಲ್ಲಿ ನಡೆದು ಹೋಗಿವೆ. ಈ ಎಲ್ಲ ವಿಚಾರಗಳು ಮಾಗಿದ ರಾಜಕಾರಣಿ ಯಡಿಯೂರಪ್ಪ ಅವರಿಗೆ ತಿಳಿದಿದೆ. ಆದರೆ ಆರೋಪ ಮಾಡಿರುವ ಅರಣ್ಯ ಇಲಾಖೆಯ ಖಾತೆಯನ್ನು ಸ್ವೀಕರಿಸಿ ಅಧಿಕಾರವಹಿಸಿಕೊಂಡ ಸಂಪುಟ ದರ್ಜೆ ಸಚಿವ ಆನಂದ ಸಿಂಗ್‍ಗೆ ಗೊತ್ತಿದೆ ಅಂತಾ ನಾನಂತೂ ಭಾವಿಸಿಲ್ಲ.
ಇಷ್ಟೆಲ್ಲ ರಾಜಕಾರಣವನ್ನ ಅರೆದು ಕುಡಿದಿರುವ ಯಡಿಯೂರಪ್ಪ ನೈತಿಕತೆಯ ಗೆರೆಯನ್ನ ಕಂಡರೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸಿದ್ದಾರೆ. ಆ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆಗೆ ಸಾಕಷ್ಟು ಸಮಯವನ್ನ ತೆಗೆದುಕೊಂಡ್ರು. ಹೈಕಮಾಂಡ್ ಮುದ್ರೆಯೊಂದಿಗೆ ಖಾತೆ ಹಂಚಿಕೆ ಆಗುತ್ತೆ ಎಂಬೆಲ್ಲ ಕುತೂಹಲಕ್ಕೆ ಯಡಿಯೂರಪ್ಪ ಅಚ್ಚರಿ ತೆರೆ ಎಳೆದರು. ಖಾತೆ ಹಂಚಿಕೆಯನ್ನ ನಾನೇ ಮಾಡಿದ್ದೇನೆ ಅಂತಾ ಸಾರುವ ಕೆಲಸವೂ ನಡೆಯಿತು. ಆಗ ಯಾವುದೇ ವಿವಾದವಿಲ್ಲದೆ ಖಾತೆ ಹಂಚಿಕೆ ಮಾಡಿ ಜಾಣತನ ಪ್ರದರ್ಶಿಸಿದ ಯಡಿಯೂರಪ್ಪ ಅಂತಾ ಹೊಗಳಿಸಿಕೊಂಡರು. ಆದ್ರೆ ಬಿ.ಸಿ.ಪಾಟೀಲ್‍ಗೆ ಕೃಷಿ ಖಾತೆಯನ್ನ ಬದಲಾಯಿಸಲು ಹೋಗಿ ಆನಂದ ಸಿಂಗ್‍ಗೆ ಅರಣ್ಯ ಕೊಟ್ಟು ಯಡಿಯೂರಪ್ಪ ಕೋಲು ಕೊಟ್ಟು ಹೊಡೆಸಿಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ವಿವಾದ ಸದ್ದು ಮಾಡುತ್ತಿದೆ. ಕಳ್ಳನ ಕೈಗೆ ಕೀಲಿಕೈ ಕೊಟ್ಟಿದ್ದಾರೆ ಅಂತಾ ಕಾಂಗ್ರೆಸ್ ಟೀಕಿಸುತ್ತಿದೆ. ಆನಂದ ಸಿಂಗ್ ಅವರಂತೂ ನೇರ ಆರೋಪ-ಗುಂಪು ಆರೋಪಗಳೆಂದು ತಕ್ಕಡಿಯಲ್ಲಿ ಹಾಕಿ ನಿಂತಿದ್ದಾರೆ. ವಿವಾದ ಪೆಟ್ಟು ತಿಂದ ಮೇಲಾದರೂ ಬದಲಾಗುತ್ತಾರಾ ಯಡಿಯೂರಪ್ಪ..? ಆರೋಪ ಮಾಡಿದವರ ಮೇಲೆ ಅಧಿಕಾರ ನಡೆಸುವುದು ಸಲ್ಲದು ಎಂದು ಆನಂದ ಸಿಂಗ್ ಖಾತೆ ಬಿಟ್ಟು ಹೊರಬರುತ್ತಾರಾ..? ಈ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಲಿದೆ.
ಹೂಚೆಂಡು: ವಿಧಾನಸೌಧದಲ್ಲಿ ಆಗಾಗ್ಗೆ ಗಾಳಿಪಟಗಳು ಹಾರಾಡುತ್ತಿರುತ್ತವೆ. ಖಾತೆ ಹಂಚಿಕೆ ಕುತೂಹಲದ ದಿನಗಳಲ್ಲಿ ವಿಧಾನಸೌಧದಲ್ಲಿ ಒಂದಷ್ಟು ಗಾಳಿಪಟಗಳು ಹಾರಾಡುತ್ತಿದ್ದವು. ಒಂದು ಗಾಳಿಪಟ ಹಾರಾಟ ಮಾತ್ರ ಅಚ್ಚರಿ ಮೂಡಿಸಿತ್ತು. ಆನಂದ ಸಿಂಗ್‍ಗೆ ಗಣಿ ಮತ್ತು ಭೂ ವಿಜ್ಞಾನ ಖಾತೆ ಕೊಡುತ್ತಾರೆ ಅನ್ನೋದು ಆ ಗಾಳಿಪಟದ ವಿಶೇಷ ಆಗಿತ್ತು. ಆ ಹಾರಾಟ ನೋಡಿದವರು ಮುಂದೇನು ಕೇಡುಗಾಲ ಬರುತ್ತೋ ಅಂತಾ ಮುಸಿಮುಸಿ ನಗುತ್ತಿದ್ದರು.