ಬೆಳಗಾವಿ: ಸಿಎಂ ಯಡಿಯೂರಪ್ಪ ಅವರಿಗೆ ರಾಜಕೀಯ ಮಾಡಿಕೊಂಡು, ಅಧಿಕಾರ ಅನುಭವಿಸಬೇಕಿದೆ. ಅವರು ಯಾಕೆ ಪ್ರವಾಹ ಸಂತ್ರಸ್ತರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸದ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಂತರಿಕ ಸಮಸ್ಯೆಗಳು ಹೆಚ್ಚಾಗಿವೆ. ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಲು ಸಿಎಂ ಬಳಿ ಸಮಯವಿಲ್ಲ. ಸಿಎಂ ಅವರಿಗೆ ಕೇವಲ ರಾಜಕೀಯ ಮಾಡಬೇಕಿದೆ. ಅಧಿಕಾರ ಅನುಭವಿಸಬೇಕಿದೆ ಅಷ್ಟೇ. ಆದ್ದರಿಂದ ಪ್ರವಾಹದಿಂದ ಜನರ ಬದುಕು ಬೀದಿಗೆ ಬಂದರೂ ಸಿಎಂ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಮಾತಿನ ಚಾಟಿ ಬೀಸಿದರು.
Advertisement
Advertisement
ಒಂದೆಡೆ ಸುಪ್ರೀಂ ಕೋರ್ಟಿನಲ್ಲಿ ಅನರ್ಹ ಶಾಸಕರ ವಿಚಾರಣೆ ಇರುವ ಕಾರಣ ಸಿಎಂ ಟೆನ್ಷನ್‍ನಲ್ಲಿದ್ದಾರೆ. ಇನ್ನೊಂದೆಡೆ ಸರ್ಕಾರಕ್ಕೆ ಏನಾಗುತ್ತೋ ಎಂಬ ಆತಂಕದಿಂದ ಸಿಎಂ ದೆಹಲಿಗೆ ತೆರಳಿದ್ದಾರೆ. ಅನರ್ಹ ಶಾಸಕರೆಲ್ಲರೂ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಟೀಕಿಸಿದರು. ಹಾಗೆಯೇ ಬಿಜೆಪಿ ಶ್ರಮ ಪಟ್ಟು ಅಧಿಕಾರಕ್ಕೆ ಬಂದಿಲ್ಲ. ಹೀಗಾಗಿ ಜನರ ಕಷ್ಟ ಅವರಿಗೆ ಅರಿವಾಗುತ್ತಿಲ್ಲ. ಆದ್ದರಿಂದ ಸರ್ಕಾರದ ಗಮನ ಸೆಳೆಯಲೆಂದೇ ನಾಳೆ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಸುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಬಿಸಿ ಮುಟ್ಟಿಸಲಿದೆ ಎಂದು ಎಚ್ಚರಿಕೆ ನೀಡಿದರು.