ಬೆಂಗಳೂರು: ಕೆ.ಆರ್ ಪೇಟೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ನನಗೆ ತುಂಬಾ ಖುಷಿಯಾಗಿದೆ. ಗೆಲುವು ಸಾಧಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಭರವಸೆ ಕೊಟ್ಟಂತೆ ಸಚಿವ ಸ್ಥಾನ ನೀಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಗೆಲುವಿನ ಸಂತೋಷ ಹಂಚಿಕೊಂಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈವರೆಗೆ ಮಂಡ್ಯದಲ್ಲಿ ಬಿಜೆಪಿ ಗೆದ್ದಿರಲಿಲ್ಲ. ಆದರೆ ಈ ಬಾರಿ ನಾರಾಯಣಗೌಡರು ಕೆ.ಆರ್ ಪೇಟೆಯಿಂದ ಗೆಲುವು ಸಾಧಿಸಿದ್ದಾರೆ. ನನ್ನ ಹುಟ್ಟೂರಲ್ಲಿ ಕಮಲ ಅರಳಿದ್ದು ನನಗೆ ತುಂಬಾ ಖುಷಿಯಾಗಿದೆ. ಅಲ್ಲದೆ ಸಂಘಟಿತವಾಗಿ ಈ ಗೆಲುವು ಸಾಧಿಸಲು ಕೆಲಸ ಮಾಡಿದ ನಮ್ಮ ಕಾರ್ಯಕರ್ತರಿಗೆ, ರಾಜ್ಯಾಧ್ಯಕ್ಷರಿಗೆ ಎಲ್ಲಾ ಬೆಂಬಲಿಗರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
Advertisement
Advertisement
15ರಲ್ಲಿ 12 ಕ್ಷೇತ್ರಗಳಲ್ಲಿ ಬಹಳ ದೊಡ್ಡ ಅಂತರದಲ್ಲಿ ಗೆಲ್ಲುವಂತೆ ಮತದಾರರು ಆಶೀರ್ವಾದ ಮಾಡಿದ್ದಾರೆ. ನಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಹಗಲು, ರಾತ್ರಿ ಕೆಲಸ ಮಾಡಿದ್ದಾರೆ. ಕಾರ್ಯಕರ್ತರು, ಮುಖಂಡರು ಕೆಲಸ ಮಾಡಿದ್ದಾರೆ ಅವರೆಲ್ಲರ ಪರಿಶ್ರಮದಿಂದ ಇಂದು ನಾವು 15ರಲ್ಲಿ 12 ಸೀಟು ಗೆದ್ದಿದ್ದೇವೆ ಎಂದು ಹೇಳಿದರು.
Advertisement
ಮುಂದೆ ಬಹಳ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಅಸ್ತಿರತೆ ಇದೆ ಎಂದು ಗೊಂದಲ ಉಂಟುಮಾಡುವ ಪ್ರಯತ್ನವನ್ನು ಪ್ರತಿಪಕ್ಷಗಳು ಮಾಡುತ್ತಿದ್ದವು. ಅವರಿಗೆ ನಾನು ವಿನಂತಿ ಮಾಡುತ್ತೇನೆ, ಇನ್ನಾದರೂ ಮೂರುವರೆ ವರ್ಷ ನಮಗೆ ಸಹಕರಿಸಿ, ಅಭಿವೃದ್ಧಿ ಪರ ಸರ್ಕಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರಲ್ಲಿ ಮನವಿ ಮಾಡಿದರು.
Advertisement
ಈ ಸಂದರ್ಭದಲ್ಲಿ ನಾನು ಕಾಂಗ್ರೆಸ್, ಜೆಡಿಎಸ್ ಬಗ್ಗೆ ಟೀಕೆ, ಟಿಪ್ಪಣಿ ಮಾಡಲು ಇಷ್ಟಪಡಲ್ಲ. ಮತದಾರ ತನ್ನ ಅಭಿಪ್ರಾಯ ವ್ಯಕ್ತಪಡಿಸಾಗಿದೆ. ಫಲಿತಾಂಶ ಬಂದಾಗಿದೆ. ರಾಜ್ಯದ ಅಭಿವೃದ್ಧಿ ಕಡೆ ಗಮನಕೊಡುವುದು ಮಾತ್ರ ಇನ್ನು ಉಳಿದಿದೆ. ನಾನಂತು ಈ ಮೂರುವರೆ ವರ್ಷ ಸಚಿವರು, ಶಾಸಕರ ಬೆಂಬಲದಿಂದ ಒಳ್ಳೆಯ ಆಡಳಿತ ನಡೆಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ಬಿಜೆಪಿ 150 ಸೀಟು ಗೆಲ್ಲುವ ರೀತಿ ಕೆಲಸ ಮಾಡುತ್ತೇನೆ. ಈ ಮೂಲಕ ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಈಗಾಗಲೇ ಲೋಕಸಭೆಯಲ್ಲಿ 25 ಸ್ಥಾನವನ್ನು ಗೆದ್ದಿದ್ದೇವೆ. ಅಲ್ಲದೆ ಉಪಚುನಾವಣೆ ಗೆಲುವು ಕೂಡ ನಮ್ಮ ನಾಯರಿಕೆ ಖುಷಿತಂದಿದೆ ಎಂದು ನಾನು ಭಾವಿಸಿದ್ದೇನೆ. ಇನ್ನು ಮೂನಾಲ್ಕು ದಿನಗಳಲ್ಲಿ ದೆಹಲಿಗೆ ಹೋಗಿ ಇಲ್ಲಿನ ವಿವರಗಳನ್ನು ಅವರಿಗೆ ಮೋದಿ, ಶಾ ಅವರಿಗೆ ತಿಳಿಸುತ್ತೇನೆ. ನಮಗಾಗಿ ರಾಜಿನಾಮೆ ಕೊಟ್ಟವರಿಗೆ ನಾವೇನು ಭರವಸೆ ನೀಡಿದ್ದೇವೆ ಅದರಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಗೆಲುವು ಸಾಧಿಸಿದ ಎಲ್ಲಾ ನನ್ನ ಸ್ನೇಹಿತರಿಗೆ ಸಚಿವ ಸ್ಥಾನವನ್ನು ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಏನೆಲ್ಲಾ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಬಗ್ಗೆ ಕೇಂದ್ರಕ್ಕೂ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇವೆ ಎಂದರು.