ಬೆಂಗಳೂರು: ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಡವರಿಗಾಗಿ ಹೊಸ ಯೋಜನೆ ತರುತ್ತಿದೆ. ಹೊಸ ಸರ್ಕಾರದ ಮೊದಲ ಯೋಜನೆ ಇದಾಗಿದ್ದು, ಮುಂದಿನ ವರ್ಷವೇ ನೂತನ ಯೋಜನೆ ಜಾರಿಗೆ ಬರುವ ಸಾಧ್ಯತೆಗಳಿವೆ.
ಹೌದು. ಆರ್ಥಿಕವಾಗಿ ಹಿಂದುಳಿದ ಬಡವರಿಗಾಗಿ ಉಚಿತ ಸಾಮೂಹಿಕ ವಿವಾಹ ಯೋಜನೆಯನ್ನು ಬಿಜೆಪಿ ಸರ್ಕಾರ ಜಾರಿಗೆ ತರುತ್ತಿದೆ. ಮುಜರಾಯಿ ಇಲಾಖೆ ನೇತೃತ್ವದಲ್ಲಿ ಪ್ರತಿ ವರ್ಷ 10 ಸಾವಿರ ಉಚಿತ ಸಾಮೂಹಿಕ ಮದುವೆ ಮಾಡಿಸುವ ನೂತನ ಯೋಜನೆ ಇದಾಗಿದ್ದು, ಇದರ ಸಿದ್ಧತೆಯೂ ಆರಂಭವಾಗಿದೆ.
Advertisement
Advertisement
ಮುಜರಾಯಿ ಇಲಾಖೆಯ ಎ ದರ್ಜೆ ನೂರು ದೇವಾಲಯಗಳಲ್ಲಿ ಪ್ರತಿ ವರ್ಷ ಒಂದೊಂದು ದೇವಾಲಯದಲ್ಲಿ 100 ಜೋಡಿಗೆ ಮದುವೆ ಮಾಡಿಸುವ ಗುರಿ ಹೊಂದಲಾಗಿದೆ. ಹೀಗೆ ಪ್ರತಿ ವರ್ಷ 10 ಸಾವಿರ ಜೋಡಿಗೆ ಮದುವೆ ಮಾಡಿಸುವ ಯೋಜನೆ ಇದಾಗಿದೆ. ಯಾವುದೇ ಜಾತಿ-ಭೇದವಿಲ್ಲದೆ, ಎಲ್ಲಾ ವರ್ಗದ ಬಡವರಿಗಾಗಿ ಈ ಯೋಜನೆ ಜಾರಿಗೆ ತರಲಾಗುತ್ತಿದ್ದು, ಹಿಂದು ಸಂಪ್ರದಾಯದಂತೆ ವಿವಾಹ ನಡೆಯಲಿದೆ.
Advertisement
Advertisement
ಒಂದು ಜೋಡಿಗೆ 25-30 ಸಾವಿರ ಖರ್ಚಾಗಲಿದ್ದು, ಪ್ರತಿ ವರ್ಷ 25-30 ಕೋಟಿ ರೂ. ಈ ಯೋಜನೆಗೆ ಖರ್ಚಾಗಲಿದೆ. ಹಾಗೆಯೇ ವಧು-ವರರಿಗೆ ವಸ್ತ್ರ, ಮಾಂಗಲ್ಯ, ಆರ್ಥಿಕ ಸಹಾಯ ಸರ್ಕಾರವೇ ನೀಡಲಿದೆ. ಚಾಮುಂಡೇಶ್ವರಿ, ಕಟೀಲು ದುರ್ಗೆ, ನಂಜನಗೂಡು ನಂಜುಂಡೇಶ್ವರ, ಕುಕ್ಕೆ ಸುಬ್ರಹ್ಮಣ್ಯ, ಮಲೆ ಮಹದೇಶ್ವರ ಸೇರಿದಂತೆ ಎ ದರ್ಜೆಯ 100 ದೇವಾಲಯಗಳಲ್ಲಿ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ನಿರ್ಧಾರ ಮಾಡಲಾಗಿದೆ.
ಪ್ರಾರಂಭಿಕ ಹಂತದಲ್ಲಿ ಸರ್ಕಾರವೇ ಈ ಯೋಜನೆ ನಡೆಸಲಿದೆ. ಮುಂದಿನ ದಿನಗಳಲ್ಲಿ ಇನ್ಫೋಸಿಸ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳನ್ನ ಭಾಗಿಯಾಗಿಸಿಕೊಂಡು ಯೋಜನೆ ಮುಂದುವರಿಸಲು ಇಲಾಖೆ ತೀರ್ಮಾನ ಮಾಡಿದೆ.