Bengaluru CityDistrictsKarnatakaLatestMain Post

ಯಲಹಂಕದಲ್ಲಿ ಹಾನಿಗೊಳಗಾದ ಮನೆಗಳಿಗೆ 10 ಸಾವಿರ ಪರಿಹಾರ: ಸಿಎಂ ಬೊಮ್ಮಾಯಿ

ಬೆಂಗಳೂರು: ಅಮಾನಿಕೆರೆ ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ 10 ಸಾವಿರ, ಪೂರ್ಣ ಪ್ರಮಾಣದಲ್ಲಿ ಮನೆಗೆ ಹಾನಿಯಾಗಿದ್ದರೆ 5 ಲಕ್ಷ ಮತ್ತು ಸಣ್ಣ ಪ್ರಮಾಣದಲ್ಲಿ ಮನೆಗಳಿಗೆ ಹಾನಿಯಾಗಿದ್ದರೆ 1 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಅಮಾನಿಕೆರೆ ಪ್ರವಾಹದಿಂದ ಯಲಹಂಕದಲ್ಲಿರುವ ಕೇಂದ್ರೀಯ ವಿಹಾರ ಅಪಾರ್ಟ್‍ಮೆಂಟ್ ಜಲಾವೃತಗೊಂಡಿರುವ ಹಿನ್ನೆಲೆ ಇಂದು ಬಸವರಾಜ ಬೊಮ್ಮಾಯಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಯಲಹಂಕ ಭಾಗದಲ್ಲಿ ಅತಿಹೆಚ್ಚು ಮಳೆಯಾಗಿ ಕೆರೆಯ ಕೋಡಿ ಒಡೆದು ಹಲವು ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. 603 ಜನ ಇರುವ ಅಪಾರ್ಟ್‍ಮೆಂಟ್‍ನಲ್ಲಿ ನೀರು ನಿಂತು ತೊಂದರೆಯಾಗಿದೆ. ಸದ್ಯ ಶಾಸಕರು ತಕ್ಷಣ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಜನರಿಗೆ ಸಹಾಯ ಮಾಡಿದ್ದಾರೆ. ಇದಕ್ಕೆ ವ್ಯವಸ್ಥಿತವಾದ ಪರಿಹಾರ ಕೊಡುವ ಚಿಂತನೆ ನಡೆಸುತ್ತೇವೆ ಎಂದರು. ಇದನ್ನೂ ಓದಿ: ಮೋದಿ ನಂಗೆ ಫೋನ್ ಮಾಡಿದ್ರು: ಸಿಎಂ ಬೊಮ್ಮಾಯಿ

ಇಲ್ಲಿ ಮುಖ್ಯವಾಗಿ 11 ಕೆರೆ ಇದೆ. ಈ ಬಾರಿ ಕರ್ನಾಟಕದ ಎಲ್ಲಾ ಕಡೆ ಮಳೆಯಾಗಿದ್ದು, ಯಲಹಂಕ ಭಾಗದಲ್ಲಿಯೂ ಮಳೆಯಾಗಿದೆ. ಹೀಗಾಗಿ ಎಲ್ಲಾ ಕೆರೆ ತುಂಬಿ ಯಹಲಹಂಕ ಕೆರೆಗೆ ಬಂದಿದೆ. ಇಲ್ಲಿ ಎರಡು ಕೋಡಿಗಳಿದ್ದು, ಅವೆರಡು ತುಂಬಿ ಹರಿದಿವೆ. ರಾಜಕಾಲುವೆ ಕೂಡ ಸಾಕಾಗುತ್ತಿಲ್ಲ. ರಾಜಕಾಲುವೆ ಅಳತೆ ಕಡಿಮೆ ಇದ್ದು, ಹೊರ ಹರಿವು ಜಾಸ್ತಿ ಇದೆ. ಹೀಗಾಗಿ ರಾಜಕಾಲುವೆ ಅತಿಕ್ರಮಣ ಆಗಿರುವುದರಿಂದ ಸಮಸ್ಯೆ ಆಗಿದೆ. ರಾಜಕಾಲುವೆ 30 ಫೀಟ್ ಆದರೂ ಇರಬೇಕಿತ್ತು. ಎರಡು ರಾಜಕಾಲುವೆಯನ್ನು ಅಡಚಣೆ ಇಲ್ಲದಂತೆ ಸರಿಪಡಿಸಲು ಹೇಳಿದ್ದೇನೆ. ಇಲ್ಲಿಂದಲೂ ಒಳ ಚರಂಡಿ ವ್ಯವಸ್ಥೆ ಮಾಡುತ್ತೇವೆ. 30 ಅಡಿಗೆ ಹೆಚ್ಚಿಸಲು ಹೇಳಿದ್ದೇನೆ. ಇಡೀ ಬೆಂಗಳೂರಿನಲ್ಲಿ ಈ ಸಮಸ್ಯೆ ಇದೆ. ಈ ವರ್ಷ 50 ಕೀ.ಮೀ ರಾಜಕಾಲುವೆ ಕೆಲಸವಾಗುತ್ತದೆ. ಯಲಹಂಕ ಭಾಗದಲ್ಲಿ 400 ಮನೆಗಳಿಗೆ ಹಾನಿಯಾಗಿದ್ದು, 10 ಕಿ.ಮೀ ರಸ್ತೆ ಒಡೆದಿದೆ. ಅದನ್ನು 100 ಕಿ.ಮೀ ಹೆಚ್ಚಿಸಲು ಚಿಂತನೆ ಮಾಡಿದ್ದೇವೆ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: 30 ವರ್ಷಗಳ ಬಳಿಕ ತುಂಬಿದ ಕೆರೆ – ಡ್ರೋನ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ನೀರು ನುಗ್ಗಿ ಹಾನಿಯಾದ ಮನೆಗಳಿಗೆ 10 ಸಾವಿರ ಪರಿಹಾರ ಮತ್ತು ಪೂರ್ಣ ಪ್ರಮಾಣದಲ್ಲಿ ಮನೆ ಬಿದ್ದಿದ್ದರೆ 5 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮೊದಲ ಕಂತು ಒಂದು ಲಕ್ಷ ಬಿಡುಗಡೆ ಮಾಡುತ್ತೇವೆ. ಮೂಲಭೂತ ಸೌಕರ್ಯಕ್ಕೂ ಪರಿಹಾರ ನೀಡಲಾಗುತ್ತದೆ ಎಂದಿದ್ದಾರೆ. ಬ್ಯಾಟರಾಯನಪುರದಲ್ಲೂ ಮನೆಗಳಿಗೂ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದ್ದರೂ 1 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.

Leave a Reply

Your email address will not be published.

Back to top button