ಬೀದರ್: ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ನನ್ನ ಪ್ರತ್ಯುತ್ತರ ಎಂದು ಗ್ರಾಮ ವಾಸ್ತವ್ಯದ ಬಗ್ಗೆ ಕೇಳಿಬಂದ ವಿಪಕ್ಷಗಳ ಟೀಕೆಗಳಿಗೆ ಸಿಎಂ ಅವರು ಕುವೆಂಪು ಅವರ ಸ್ಲೋಗನ್ ಮೂಲಕ ಟಾಂಗ್ ನೀಡಿದರು.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಯಾದಗಿರಿ ಜಿಲ್ಲೆಯ ಚಂಡರಕಿ ಶಾಲೆಯಲ್ಲಿ ಮಲಗಿದ್ದಾಗ ಕುವೆಂಪುರವರ ಸ್ಲೋಗನ್ ಓದಿದ್ದೆ. ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ ಎಂದು ಬರೆದಿತ್ತು. ಹೀಗಾಗಿ ಟೀಕೆ ಮಾಡುವವರಿಗೆ ಉತ್ತರ ನೀಡದಿರುವುದೇ ಸೂಕ್ತ ಎಂಬುದು ನನ್ನ ಅಭಿಪ್ರಾಯ ಎನ್ನುವ ಮೂಲಕ ವಿಪಕ್ಷಗಳಿಗೆ ತಿರುಗೇಟು ನೀಡಿದರು.
Advertisement
Advertisement
ಗ್ರಾಮವಾಸ್ತವ್ಯದ ಕ್ರೆಡಿಟ್ ಜೆಡಿಎಸ್‍ಗೆ ಬರುತ್ತಿದೆ ಎನ್ನುವುದು ತಪ್ಪು. ಇದು ಸಮ್ಮಿಶ್ರ ಸರ್ಕಾರದ ಕ್ರೆಡಿಟಾಗಿದ್ದು ಗುರುವಾರದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲೆಯ ಮೂವರು ಮಂತ್ರಿಗಳು ಬಂದಿದ್ದರು. ಹಾಗಾಗಿ ಒಟ್ಟಾರೆ ಇದು ಸಮ್ಮಿಶ್ರ ಸರ್ಕಾರದ ಕ್ರೆಡಿಟ್ ಎಂದು ಸಿಎಂ ಸ್ಪಷ್ಟನೆ ನೀಡಿದರು.
Advertisement
ವಿದೇಶ ಪ್ರವಾಸ ವಿಚಾರ ಮಾತನಾಡಿದ ಸಿಎಂ, ಆದಿಚುಂಚನಗಿರಿಯ ಶ್ರೀಗಳು ನ್ಯೂಜೆರ್ಸಿಯಲ್ಲಿ ಮಠವೊಂದನ್ನ ಕಟ್ಟಿಸುತ್ತಿದ್ದಾರೆ. ಅದರ ಶಂಕುಸ್ಥಾಪನೆಗಾಗಿ ನಾನು ಬರಲೇಬೇಕೆಂದು ಶ್ರೀಗಳು ಒತ್ತಾಯ ಮಾಡುತ್ತಿದ್ದಾರೆ. ನಾನೇನೂ ಸರ್ಕಾರದ ವೆಚ್ಚದಲ್ಲಿ ಹೋಗುತ್ತಿಲ್ಲ, ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.