ರಾಯಚೂರು: ನನ್ನಲ್ಲಿ ಯಾವುದೇ ರೀತಿಯಲ್ಲಿ ಬದಲಾವಣೆ ಆಗಿಲ್ಲ. ಜನಸಾಮಾನ್ಯರನ್ನು ನೋಡಬೇಕಾದರೆ ಅತ್ಯಂತ ತಾಳ್ಮೆಯಿಂದ ನೋಡುತ್ತೇನೆ. ನನಗೆ ಯಾವುದೇ ರೀತಿಯ ಒತ್ತಡಗಳಿಲ್ಲ. ನಾನು ಎಲ್ಲಿ ಬದಲಾಗಿದ್ದೇನೆ ಅಂದರೆ 2006ರಲ್ಲಿ ಸ್ವಲ್ಪ ಆಡಳಿತದಲ್ಲಿ ಅನುಭವದ ಕೊರತೆ ಇತ್ತು. ಆದರೆ ಆ ಅನುಭವದಿಂದ ಈಗ ಅನುಕೂಲಗಳಾಗಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಳೆದ 10 ವರ್ಷದ ನನ್ನ ರಾಜಕಾರಣನದಲ್ಲಿದ್ದ ಅನುಭವದ ಕೊರತೆಗಳು ಸರಿಯಾಗಿವೆ. ಈಗ ಎಲ್ಲಿ ಸಮಸ್ಯೆಗಳಿವೆಯೋ ಅಲ್ಲಿ ತಕ್ಷಣ ಯಾವ ರೀತಿ ಕೆಲಸ ನಿರ್ವಹಣೆಯಾಗಬೇಕು ಎಂಬ ತಿಳುವಳಿಕೆಯನ್ನು ನಾಡಿನ ಜನತೆಯೇ ಕೊಟ್ಟಿದ್ದಾರೆ. ಆದ್ದರಿಂದ ನನ್ನಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
Advertisement
Advertisement
ರೇಗಿದ್ದು ನಿಜ:
ನಗರದಲ್ಲಿ ಬಸ್ ಪ್ರಯಾಣ ಪ್ರಾರಂಭ ಮಾಡಿದಾಗಲೇ ಹಲವು ಸಂಘಟನೆಗಳು ಬಂದವು. ಅವರೆಲ್ಲರನ್ನೂ ಭೇಟಿಯಾಗಿ ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಂಡು ಎಲ್ಲ ಮಾಹಿತಿ ಪಡೆದು ಅವರಿಗೆ ಭರವಸೆ ನೀಡಿದ್ದೇನೆ. ನಾನು ಹೊರಟಾಗ ಉದ್ದೇಶಪೂರ್ವಕವಾಗಿ ಗುಂಪೊಂದು ವೈಟಿಪಿಎಸ್ ವಿಷಯದಲ್ಲಿ ಪ್ರತಿಭಟನೆ ಮಾಡಿತ್ತು. ನಾನು ಅವರ ಬಳಿ ಹೋಗಲು ಬಸ್ಸಿನಿಂದ ಇಳಿಯಲು ತಯಾರಾಗಿದ್ದೆನು. ಆದರೆ ನಮ್ಮ ಮಂತ್ರಿಗಳು ಬಿಟ್ಟಿಲ್ಲ. ಒಂದು ಕಡೆ ಸಮಯದ ಅಭಾವವಿದೆ ಎಂದರು.
Advertisement
Advertisement
ಬೆಳಗ್ಗೆ ವೈಟಿಪಿಎಸ್ ಮುಖಂಡನ ಜೊತೆ ಮಾತುಕತೆ ನಡೆಸಿದ್ದೆ. ನಮ್ಮ ಕಾಲದಲ್ಲಾದ ಸಮಸ್ಯೆ ಅಲ್ಲ ಇದು. ಈ ಹಿಂದೆ ಸರ್ಕಾರ ತೆಗೆದುಕೊಂಡ ನಿಲುವು ಹಾಗೂ ಭರವಸೆಯಲ್ಲಿ ಇನ್ನು ಕಲ ಯುವಕರಿಗೆ ಉದ್ಯೋಗ ದೊರೆತಿಲ್ಲ. ಈ ಬಗ್ಗೆ ಈಗಾಗಲೇ ನಾನು ಸಭೆಯನ್ನೂ ಕರೆದಿದ್ದೇನೆ. ಇಂದು ಮುಖಂಡನಿಗೂ ಹೇಳಿದ್ದೆ. ಇನ್ನೊಂದು ಸಭೆ ಮಾಡಿ ಏನಾದ್ರು ಮಾಡುತ್ತೇನೆ. ಯಾಕಂದರೆ ಇಂದು ಉದ್ಯೋಗದ ವಿಷಯದಲ್ಲಿ ಹಲವಾರು ಸಮಸ್ಯೆಗಳು ಇವೆ. ಯಾರಿಗೆ ಉದ್ಯೋಗ ದೊರಕಿಲ್ಲವೋ ಅದನ್ನು ಮಾನವೀಯತೆಯ ದೃಷ್ಟಿಯಿಂದ ಅಧಿಕಾರಿಗಳನ್ನು ಒಪ್ಪಿಸಿ ಸರಿಪಡಿಸಿ ಕೊಡುವುದಾಗಿ ಹೇಳಿದ್ದೆ ಎಂದು ತಿಳಿಸಿದರು.
ಇದಾದ ಬಳಿಕ ಮುಖಂಡ ಹೊರಗಡೆ ಬಂದು 100 ಜನರನ್ನು ಕರೆದುಕೊಂಡು ಬಂದು ರಸ್ತೆ ಬ್ಲಾಕ್ ಮಾಡಿದ್ದರು. ಇದು ನನಗೆ ನನ್ನ ಸಮಯ ವ್ಯರ್ಥ ಮಾಡುವಂತೆ ಆಯಿತು. ಅದಕ್ಕಾಗಿ ನಾನು ಸ್ವಲ್ಪ ರೇಗಿದ್ದು ನಿಜ. ಗೌರವಯುತವಾಗಿ ನಡೆದುಕೊಂಡರೆ ನಿಮ್ಮ ಕೆಲಸಗಳು ಆಗುತ್ತವೆ ಎಂದರು.
ಅನಾರೋಗ್ಯದಿಂದ ತಡ: ಆರೋಗ್ಯದ ದೃಷ್ಟಿಯಿಂದ ಈ ಬಾರಿ ಗ್ರಾಮವಾಸ್ತವ್ಯ ತಡ ಮಾಡಿದ್ದೇನೆ. ಯಾಕಂದ್ರೆ 2017ರ ಸೆಪ್ಟೆಂಬರ್ ತಿಂಗಳಲ್ಲಿ 2ನೇ ಬಾರಿ ಹೃದಯದ ಚಿಕಿತ್ಸೆಗೆ ಒಳಗಾದೆ. ಇದಾದ ಬಳಿಕ ಒಂದು ತಿಂಗಳ ಅಂತರದಲ್ಲೇ ಪಕ್ಷದ ಸಂಘಟನೆಯ ಕಡೆ ಗಮನ ಹರಿಸಿದೆ. ಚುನಾವಣೆಯಲ್ಲಿ ನಾನೇ ಏಕಾಂಗಿಯಾಗಿ ಹೋರಾಟ ಮಾಡುವ ಪರಿಸ್ಥಿತಿ ಇದ್ದುದರಿಂದ ವಿರಾಮ ಇರಲಿಲ್ಲ. ಕಾಂಗ್ರೆಸ್ ನಾಯಕರು ನನ್ನ ಮೇಲೆ ಜವಾಬ್ದಾರಿ ಕೊಟ್ಟಾಗ ಒತ್ತಡಕ್ಕೆ ಒಳಗಾಗಿದ್ದೆ. ಆರೋಗ್ಯದ ಪರಿಸ್ಥಿತಿಯಲ್ಲಿ ವೈದ್ಯರ ಸಲಹೆಯ ಮೇರೆಗೆ ಗ್ರಾಮ ವಾಸ್ತವ್ಯವನ್ನು ಮುಂದೂಡಿದ್ದೆ ಎಂದರು.
ಸಾವಿರಾರು ಸಮಸ್ಯೆಗಳಿವೆ. ಯಾದಗಿರಿಯಂತೆ ರಾಯಚೂರಿನಲ್ಲಿಯೂ ಸಾಕಷ್ಟು ಮನವಿಗಳು ಬಂದಿವೆ. ಹಣದ ಕೊರತೆಯಿಲ್ಲ. ರಾಜ್ಯದಲ್ಲಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದ್ದೇವೆ. ಹೀಗಾಗಿ ಅಧಿಕಾರಿಗಳು ವೇಗವಾಗಿ ಕೆಲಸ ಮಾಡಿದರೆ, ಹಣವೂ ಬೇಗ ಬಿಡುಗಡೆಯಾಗುತ್ತದೆ ಎಂದರು.