Connect with us

ಮುಖ್ಯಮಂತ್ರಿಗಳೇ ನಿದ್ದೆಯಿಂದ ಎದ್ದೇಳಿ – ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಮುಖ್ಯಮಂತ್ರಿಗಳೇ ನಿದ್ದೆಯಿಂದ ಎದ್ದೇಳಿ – ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಬೆಂಗಳೂರು: ಗೋವಾ ಜಲಸಂಪನ್ಮೂಲ ಸಚಿವ ಅವಹೇಳನಕಾರಿ ಹೇಳಿಕೆ ಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಸಂಸದರು, ಸಿಎಂ ಸಿದ್ದರಾಮಯ್ಯ ಸರ್.. ನಿದ್ದೆಯಿಂದ ಎದ್ದೇಳಿ.. ನಿಮ್ಮ ನಿದ್ದೆ ರಾಜ್ಯದ ಹಿತಾಸಕ್ತಿಗೆ ಮಾರಕವಾಗುತ್ತಿದೆ. ನೀವು ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡೊವರೆಗೂ ಆದ್ರೂ ಎಚ್ಚರದಿಂದಿರಿ. ಮೇ ತಿಂಗಳ ಮೊದಲ ವಾರದವರೆಗೂ ಆದ್ರೂ ನಿದ್ದೆಬಿಟ್ಟು ಎಚ್ಚರದಿಂದ ಕಾರ್ಯನಿರ್ವಹಿಸಿ ಅಂತ ಹೇಳಿದ್ದಾರೆ.

ನಮ್ಮ ಜಲಸಂಪನ್ಮೂಲ ಸಚಿವರು, ಎಂಜಿನಿಯರ್‍ಗಳು ಎಂದಾದ್ರೂ ಮೆಟ್ಟೂರು ಜಲಾಶಯ ಪರಿಶೀಲಿಸುವ ಧೈರ್ಯ ತೋರಿದ್ದಾರಾ? ಸೂಕ್ಷ್ಮ ಪ್ರದೇಶ ಆಗಿರುವ ಕಣಕುಂಬಿ ಪ್ರದೇಶಕ್ಕೆ ಗೋವಾ ಸಚಿವರನ್ನು ಹೋಗಲು ನೀವು ಹೇಗೆ ಬಿಟ್ರಿ? ಅಂತ ಸರಣಿ ಟ್ವೀಟ್‍ಗಳ ಮೂಲಕ ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.


ಈ ಮೂಲಕ ಸಂಸದರು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ರಾಜ್ಯಕ್ಕೆ ಹಿನ್ನೆಡೆಯಾಗುವ ಆತಂಕ ವ್ಯಕ್ತಪಡಿಸಿದ್ರು.

ಗೋವಾ ಸಚಿವರು ಏನಂದಿದ್ದರು?: ಕನ್ನಡಿಗರನ್ನು ಹರಾಮಿಗಳು ಎಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಅವರು ಬೆಳಗಾವಿಯ ಕಣಕುಂಬಿ ಕಳಸಾ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಸಚಿವರ ಈ ಹೇಳಿಕೆಯನ್ನು ಬಿಎಸ್ ಯಡಿಯೂರಪ್ಪ ಹಾಗೂ ಪ್ರತಾಪ್ ಸಿಂಹ ಈಗಾಗಲೇ ಖಂಡಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಪರಿಕ್ಕರ್ ಜೀ ಅವರೇ ನಿಮ್ಮ ಸರ್ಕಾರದ ಉದಾರತೆ ಬಗ್ಗೆ ನಮಗೆ ಗೌರವ ಇದೆ. ಕಾಂಗ್ರೆಸ್‍ನ ಕೊಳಕು ರಾಜಕಾರಣದ ಹೊರತಾಗಿ ಕುಡಿಯುವ ನೀರು ಕೊಡುವ ವಿಷಯದ ನಿಮ್ಮ ನಿಲುವಿಗೆ ಗೌರವ ಇದೆ. ಆದ್ರೆ ಪದಗಳು ಉಚಿತವಾಗಿ ಸಿಗುತ್ತವೆ ಅಂತ ಮಾತನಾಡಬಾರದು. ಆ ಪದಗಳನ್ನ ಬಳಸುವಾಗ ಎಚ್ಚರವಿರಬೇಕು. ನಿಮ್ಮ ಸಚಿವ ವಿನೋದ್ ಪಾಲೇಕರ್ ಗೆ ಸರಿಯಾದ ಭಾಷೆ ಬಳಸಲು ಹೇಳಿ. ಇಲ್ಲವಾದರೆ ಅವರು ಇನ್ನೊಮ್ಮೆ ಕರ್ನಾಟಕಕ್ಕೆ ಕಾಲಿಟ್ಟರೆ ನಾವೇ ಪಾಠ ಕಲಿಸಬೇಕಾಗುತ್ತೆ ಅಂತ ಪ್ರತಾಪ್ ಸಿಂಹ ಟ್ವಿಟರ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಕನ್ನಡರ ವಿರುದ್ಧದ ಹೇಳಿಕೆಗೆ ಗೋವಾ ಬಿಜೆಪಿ ವಿರುದ್ಧವೇ ಧ್ವನಿ ಎತ್ತಿದ ಪ್ರತಾಪ್ ಸಿಂಹ ಅವರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೆ ಟ್ಯಾಗ್ ಮಾಡಿ ಟ್ವಿಟ್ ಮಾಡಿದ್ದರು.

Advertisement
Advertisement