ಕೋಲಾರ: ಕುಮಾರಸ್ವಾಮಿ ಮುಖ್ಯಮಂತ್ರಿಯನ್ನಾಗಿ ನೋಡುವುದೇ ನನ್ನ ಕೊನೆಯಾಸೆ, ಇದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮಾತು ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
ಜಿಲ್ಲೆಯಲ್ಲಿ ಇಂದು ನಡೆದ ಸಾಧನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಜಾತ್ಯಾತೀತ ಎನ್ನುವ ಜೆಡಿಎಸ್ ಪಕ್ಷದ ನಾಯಕರಿಗೆ ದಲಿತರು ಹಾಗೂ ಅಲ್ಪಸಂಖ್ಯಾತರ ನೆನಪಾಗಿಲ್ಲ. ಕೋಮುವಾದಿ ಶಕ್ತಿಗಳೊಂದಿಗೆ ಸೇರಿ ಸರ್ಕಾರ ಮಾಡುತ್ತಾರೆ ಎಂದು ಆರೋಪಿದರು.
ಕುಮಾರಸ್ವಾಮಿ ಸಿಎಂ ಆದರೆ ಬಯಲು ಜಿಲ್ಲೆಗಳಿಗೆ ನೀರು ತರಲು ಆರಂಭಿಸಿರುವ ಎತ್ತಿನ ಹೊಳೆ ಯೋಜನೆಯನ್ನು ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ. ಜವಾಬ್ದಾರಿಯುತ ರಾಜಕಾರಣಿ ಇಂತಹ ಹೇಳಿಕೆಗಳನ್ನ ಕೊಡಬಾರದು. ನಾವು ನೀರು ಕೊಡುವ ಪ್ರಯತ್ನ ಮಾಡುತ್ತಿದ್ದರೆ, ಹೀಗೆ ಹೇಳಿಕೆ ಕೊಡುವುದು ಜನಪರ ಕಾಳಜಿಯಲ್ಲ. ಆದರೆ ನಮ್ಮ ಸರ್ಕಾರ ಜನರಿಗೆ ಕುಡಿರುವ ನೀರು ಹಾಗೂ ಕೆರೆಗಳನ್ನು ತುಂಬಿಸಿ, ಈ ಭಾಗದ ಅಂತರ್ಜಲ ಹೆಚ್ಚು ಮಾಡಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಸುಮಾರು 13 ಸಾವಿರ ಕೋಟಿ ರೂ. ಖರ್ಚು ಮಾಡಿ ಅನುಷ್ಠಾನಗೊಳಿಸುತ್ತಿದ್ದೇವೆ ಎಂದರು.
ಈ ಯೋಜನೆಯಿಂದ ಸುಮಾರು 24 ಟಿಎಂಸಿ ನೀರು ಲಭ್ಯವಾಗಲಿದ್ದು, ಕುಮಾರಸ್ವಾಮಿ ಅವರು ಈ ಭಾಗದ ಜನರಿಗೆ ನೀರು ಸಿಗಬಾರದು ಎಂಬ ಅಭಿಪ್ರಾಯದಿಂದ ಯೋಜನೆ ನಿಲ್ಲಿಸುವ ಮಾತನಾಡಿದ್ದಾರೆ. ಏನೇ ಆದರು ಎತ್ತಿನಹೊಳೆ ಯೋಜನೆ ಮೂಲಕ ಈ ಭಾಗದ ಜನರಿಗೆ ನೀರು ಕೊಡುತ್ತೇವೆ ಎಂದರು.
ರೈತರ ಹೆಸರಲ್ಲಿ ಪ್ರಮಾಣವಚನ ಮಾಡಿದ ಯಡಿಯೂರಪ್ಪ, ರೈತರಿಗಾಗಿ ಏನು ಮಾಡಿಲ್ಲ, ಬದಲಾಗಿ ಗೋಲಿಬಾರ್ ಮಾಡಿಸಿದ್ದೇ ಅವರ ರೈತಪರ ಕಾಳಜಿ. ಭಾಷಣದುದ್ದಕ್ಕೂ ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನ ಹೀಯಾಳಿಸಿದ ಅವರು, ಪರಿವರ್ತನೆಯಾಗಬೇಕಾಗಿರುವುದು ಬಿಜೆಪಿ ನಾಯಕರು, ಮಿಷನ್ 150, ಈಗ ಮಿಷನ್ 50 ಆಗಿದೆ ಎಂದು ವ್ಯಂಗ್ಯವಾಡಿದರು.