ಬೆಂಗಳೂರು: ಶ್ವಾಸಕೋಶದ ಸಮಸ್ಯೆಯಿಂದ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಯಲ್ಲಿ ಪಾರ್ವತಿ ಸಿದ್ದರಾಮಯ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಳೆ ಸಂಜೆ ವರೆಗೆ ಆಸ್ಪತ್ರೆಯಲ್ಲೇ ಇರಲು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ, ಸಿಎಂ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಚಾರ ತಿಳಿದು ಅಪೋಲೋ ಆಸ್ಪತ್ರೆಗೆ ಶಾಸಕ ಶಿವಲಿಂಗೇಗೌಡ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ತಾಯಿ ಜೊತೆ ಪುತ್ರ ಯತೀಂದ್ರ ಸಿದ್ದರಾಮಯ್ಯ ಇದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿವಲಿಂಗೇಗೌಡ, ಸಿಎಂ ಪತ್ನಿ ಅವರ ಆರೋಗ್ಯ ವಿಚಾರಿಸಲು ಬಂದೆ. ಯಾರನ್ನೂ ನೋಡಲು ಬಿಡ್ತಿಲ್ಲ. ಯತೀಂದ್ರ ಅವರನ್ನ ಮಾತಾಡಿಸಿದೆ. ಆರೋಗ್ಯವಾಗಿದ್ದಾರೆ ಏನೂ ಸಮಸ್ಯೆಯಿಲ್ಲ, ಚಿಕಿತ್ಸೆ ನೀಡಲಾಗುತ್ತಿದೆ ಎಂದರೆಂದು ತಿಳಿಸಿದ್ದಾರೆ.
ತಾಯಿಯವರ ಆರೋಗ್ಯ ಸ್ಥಿರವಾಗಿದೆ. ಉಸಿರಾಟದ ಸಮಸ್ಯೆಯಿಂದ ಅಡ್ಮಿಟ್ ಮಾಡಿದ್ವಿ. ಲಂಗ್ಸ್ ಅಲ್ಲಿ ನೀರು ತುಂಬಿಕೊಂಡಿತ್ತು. ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಆತಂಕ ಪಡುವಂತದ್ದೇನಿಲ್ಲ. ತಂದೆಯವರು ಸಹ ದೆಹಲಿಯಿಂದ ವಾಪಸ್ ಆದ ನಂತರ ಬರ್ತಾರೆ ಎಂದು ಯತೀಂದ್ರ ತಿಳಿಸಿರುವುದಾಗಿ ಶಾಸಕರು ಹೇಳಿದರು.

