Connect with us

Chikkaballapur

ಪಂಚೆ ಹರೀತು, ಬೆಂಗಾವಲು ವಾಹನ ಆಕ್ಸಿಡೆಂಟಾಯ್ತು, ಹೆಲಿಕಾಪ್ಟರ್ ಹಾರಾಟಕ್ಕೆ ಕುತ್ತು ಬಂತು – ಇವತ್ತು ಸಿಎಂ ಟೈಂ ಚೆನ್ನಾಗಿರ್ಲಿಲ್ಲ..!

Published

on

ಚಿಕ್ಕಬಳ್ಳಾಪುರ: ಅದ್ಯಾಕೋ ಗೊತ್ತಿಲ್ಲ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೈಂ ಚೆನ್ನಾಗಿಲ್ಲ ಅನಿಸತ್ತೆ. ಮೈಸೂರಿನಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಪಂಚೆ ಹರಿದಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೇವಸ್ಥಾನ ಉದ್ಘಾಟನೆ ಬಳಿಕ ಹವಮಾನ ವೈಪರೀತ್ಯದಿಂದಾಗಿ ಸಿಎಂ ಹೆಲಿಕಾಪ್ಟರ್ ಪ್ರಯಾಣ ರದ್ದಾಯ್ತು. ಇದಾದ ಬಳಿಕ ಬೆಂಗಳೂರಿಗೆ ರಸ್ತೆ ಮಾರ್ಗದಲ್ಲಿ ಹೊರಟಿದ್ದ ಸಿಎಂ ಬೆಂಗಾವಲು ವಾಹನಗಳು ಅಪಘಾತಕ್ಕೀಡಾಯಿತು.

ಚಿಕ್ಕಬಳ್ಳಾಪುರದಲ್ಲಿ ಏನೇನಾಯ್ತು?: ಮೈಸೂರಿನಿಂದ ಸಿಎಂ ನೇರವಾಗಿ ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ರು. ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದ ನೂತನ ಬಿರೇಶ್ವರ ಸ್ವಾಮಿ ದೇಗುಲದ ಉದ್ಘಾಟನೆಗೆಂದು ಜಿಲ್ಲೆಗೆ ಆಗಮಿಸಿದ್ದ ವೇಳೆ ಅಲ್ಲಿ ಅವರ ಪಂಚೆ ಹರಿದು ಇರುಸು ಮುರುಸು ಉಂಟಾಗಿತ್ತು. ದೇಗುಲ ಉದ್ಘಾಟನೆ ಕಾರ್ಯಕ್ರಮ ಮುಗಿಸಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕವೇ ಮರಳಿ ಬೆಂಗಳೂರಿಗೆ ತೆರಳಲು ಪ್ರವಾಸ ನಿಗದಿಯಾಗಿತ್ತು. ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಸಿಎಂ ಚಿಕ್ಕಬಳ್ಳಾಪುರದಿಂದ ಕಾರಿನಲ್ಲೇ ಬೆಂಗಳೂರಿನತ್ತ ಪ್ರಯಾಣ ಬೆಳೆಸುವಂತಾಯಿತು.

ಆದರೆ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಸಿಎಂ ಕಾರಿನ ಹಿಂಭಾಗದಲ್ಲಿ ಸಂಚರಿಸುತ್ತಿದ್ದ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಚಿಕ್ಕಬಳ್ಳಾಪುರ ತಾಲೂಕು ಸಬ್ಬೇನಹಳ್ಳಿ ಗ್ರಾಮದ ಬಳಿ ಆಂಬ್ಯುಲೆನ್ಸ್, ಶಾಸಕರ ಕಾರು ಹಾಗೂ ಮತ್ತೊಂದು ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಸಿಎಂ ಕಾರ್ಯಕ್ರಮಕ್ಕೆ ನಿಯೋಜನೆ ಮಾಡಲಾಗಿದ್ದ ಆಂಬ್ಯುಲೆನ್ಸ್ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ. ಸುಧಾಕರ್ ಅವರಿಗೆ ಸೇರಿದ್ದ ಕಾರು ಜಖಂಗೊಂಡಿದೆ. ಇದರಿಂದ ಶಾಸಕರ ಕಾರು ಸ್ಟಾರ್ಟ್ ಆಗದೇ ಸ್ಥಳದಲ್ಲೇ ಕೆಟ್ಟು ನಿಂತಿತ್ತು. ಆದ್ರೆ ಈ ಅಪಘಾತದ ವೇಳೆ ಸುಧಾಕರ್ ಕಾರಿನಲ್ಲಿ ಇರಲಿಲ್ಲ. ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಇಂದು ಚಿಕ್ಕಬಳ್ಳಾಪುರಕ್ಕೆ ಭೇಟಿ ಕೊಟ್ಟ ಬಳಿಕ ಒಂದಲ್ಲಾ ಒಂದು ಅವಘಡ ಅವರಿಗೆ ಎದುರಾಗುತ್ತಿದೆ. ಕಳೆದ ವಾರವಷ್ಟೇ ಸಿಎಂ ಸಿದ್ದರಾಮಯ್ಯ ಮೀನೂಟ ತಿಂದು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೆ ತನ್ನ ಈ ನಡೆಯನ್ನು ಸಿಎಂ ಸಿದ್ದರಾಮಯ್ಯ ಅವರು ಸಮರ್ಥಿಸಿಕೊಂಡಿದ್ದರು.

ಇಂದು ಬೆಳಗ್ಗೆ ಮೈಸೂರಿನಲ್ಲಿ ಪ್ರಧಾನಿ ಮೋದಿ ಕರ್ನಾಟಕ ಭೇಟಿ ಬಗ್ಗೆ ಮಾತನಾಡಿ, ಬಿಜೆಪಿಯವರಿಗೆ ನನ್ನ ಕಂಡರೆ ಭಯ ಇದೆ. ನಾನು ವೀಕ್ ಇದ್ದಿದ್ದರೆ ಪದೇ ಪದೇ ನನ್ನ ಮೇಲೆ ಯಾಕೆ ವಾಗ್ದಾಳಿ ಮಾಡುತ್ತಿದ್ದರು. ಈಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾಕೆ ಎಲ್ಲರೂ ಒಂದಾಗಿ ನನ್ನ ವಿರುದ್ಧ ತೊಡೆ ತಟ್ಟಿದ್ದಾರೆ. ಅವರೆಲ್ಲರಿಗೂ ನನ್ನ ಕಂಡರೆ ಭಯ ಇದೆ. ಸಿದ್ದರಾಮಯ್ಯ ಎಂದರೆ ಜೆಡಿಎಸ್, ಬಿಜೆಪಿ ಎಲ್ಲರಿಗೂ ಭಯ ಆರಂಭವಾಗಿದೆ. ರಾಜ್ಯದ ಜನ ಸಿದ್ದರಾಮಯ್ಯ ಪರ ಇದ್ದಾರೆ ಅನ್ನೋ ಭಯ ಇದೆ. ಬಿಜೆಪಿಯದ್ದು ಮಿಷನ್, ಕಾಂಗ್ರೆಸ್ ನದ್ದು ವಿಷನ್. ಬಿಜೆಪಿಯವರ ಮಿಷನ್ 150 ಈಗ 50ಕ್ಕೆ ಇಳಿದಿದೆ. ಚುನಾವಣೆ ವೇಳೆಗೆ ಅವರ ಮಿಷನ್ ಸಂಖ್ಯೆ ಇನ್ನೆಷ್ಟಕ್ಕೆ ಬರಲಿದೆಯೋ ಗೊತ್ತಿಲ್ಲ. ಅವರ ಮಿಷನ್ ವ್ಯಾಪ್ತಿ ಕಡಿಮೆ ಆಗಿದೆ ಎಂದು ಹೇಳಿದ್ದರು.

ಭಾನುವಾರ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಉಪವಾಸ ವ್ರತದಲ್ಲಿ ಭೇಟಿ ನೀಡಿದ ನಂತರ ಸಿಎಂ ಸಿದ್ದರಾಮಯ್ಯ ಭೇಟಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಈ ಚರ್ಚೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಇನ್ನು ಅಪಶಕುನಗಳು ಸಂಭವಿಸಲಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಈ ನಡುವೆ ಕಾಕತಾಳೀಯ ಎಂಬಂತೆ ಇವತ್ತು ಸಿಎಂ ಪಂಚೆ ಹರಿಯಿತು, ಬೆಂಗಾವಲು ವಾಹನ ಆಕ್ಸಿಡೆಂಟಾಯ್ತು, ಹೆಲಿಕಾಪ್ಟರ್ ಹಾರಾಟಕ್ಕೆ ಕುತ್ತು ಬಂದಿತ್ತು. ಹೀಗಾಗಿ ಮೀನೂಟ ಸೇವಿಸಿದ್ದರಿಂದಲೇ ಸಿಎಂಗೆ ಈ ರೀತಿ ಆಯ್ತು ಎನ್ನುವ ಮಾತುಗಳು ಈಗ ಕೇಳಿ ಬರುತಿದ್ದು, ಈ ಮಾತನ್ನು ನೀವು ಒಪ್ಪುತ್ತೀರಾ?

https://www.youtube.com/watch?v=J7BS4S3mGUc

https://www.youtube.com/watch?v=MA7MBr2r_ro

Click to comment

Leave a Reply

Your email address will not be published. Required fields are marked *