ಬೆಂಗಳೂರು: ಮಹಾರಾಷ್ಟ್ರ ಸಿಎಂಗೆ ದೇವೇಂದ್ರ ಫಡ್ನವಿಸ್‌ಗೆ (Devendra Fadnavis) ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ರ ಬರೆದಿದ್ದಾರೆ. ಕುಡಿಯುವ ನೀರಿಗಾಗಿ ಕೊಯ್ನಾ ಜಲಾಶಯದಿಂದ (Koyna Dam) ಕೃಷ್ಣಾ ನದಿಗೆ (Krishna River) ನೀರು ಬಿಡುವಂತೆ ಮನವಿ ಮಾಡಿದ್ದಾರೆ.
ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡುವಂತೆಯೂ ಮನವಿ ಮಾಡಿದ್ದಾರೆ. ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಇದೆ. ಹಾಗಾಗಿ ನೀರು ಬಿಡುವಂತೆ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
ಈ ಹಿಂದೆ ಬೇಸಿಗೆಯಲ್ಲಿ ಕಾಲದಲ್ಲಿ ಕುಡಿಯುವ ನೀರು ಪೂರೈಕೆಗೆ ಕೃಷ್ಣಾ ನದಿಯಿಂದ ನೀರನ್ನು ಬಿಡುಗಡೆ ಮಾಡಲು ಮಹಾರಾಷ್ಟ್ರ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಕರ್ನಾಟಕ ಸರ್ಕಾರವು ಈ ಮೂಲಕ ಮಹಾರಾಷ್ಟ್ರಕ್ಕೆ ಧನ್ಯವಾದಗಳನ್ನು ತಿಳಿಸುತ್ತೆ. ಹಿಪ್ಪರಗಿ ಬ್ಯಾರೇಜ್ ಮತ್ತು ಇತರ ಸ್ಥಳೀಯ ಜಲಾಶಯಗಳಲ್ಲಿ ಶೇಖರಣಾ ನೀರು ಮುಂಗಾರು ಹಂಗಾಮು ತನಕ ಸಾಕಾಗುವುದಿಲ್ಲ.
ಕೃಷ್ಣಾ ಜಲಾನಯನ ಪ್ರದೇಶದ ಉತ್ತರ ಕರ್ನಾಟಕ ಜಿಲ್ಲೆಗಳ ಕುಡಿಯುವ ನೀರಿಗೂ ಸಾಕಾಗುವುದಿಲ್ಲ. ಹಾಗಾಗಿ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಕನಿಷ್ಠ 2 ಟಿಎಂಸಿ, ಉಜ್ಜಿನಿ ಜಲಾಶಯದಿಂದ ಭೀಮಾ ನದಿಗೆ 1 ಟಿಎಂಸಿ ನೀರನ್ನ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಿಎಂ ಮನವಿ ಮಾಡಿದ್ದಾರೆ.