ಗ್ಯಾರಂಟಿ ವಿಫಲವಾಗಿಲ್ಲ, ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ – ಅಧಿವೇಶನಕ್ಕೂ ಮುನ್ನ ಸಿಎಂ ರಿಯಾಕ್ಷನ್‌

Public TV
2 Min Read
Siddaramaiah

ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭಗೊಂಡಿದೆ. ಸೋಮವಾರ ಬೆಳಗ್ಗೆ ಸುವರ್ಣ ಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯಗೆ (Siddaramaiah) ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯಿಂದ ಸಕಲ ಗೌರವಗಳೊಂದಿಗೆ ಸ್ವಾಗತ ಕೋರಲಾಯಿತು. ಇದಕ್ಕೂ ಮುನ್ನ ಏರ್ಪೋರ್ಟ್‌ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಸೇರಿದಂತೆ ಇತರ ಗಣ್ಯರು ಹೂಗುಚ್ಚ ನೀಡಿ ಸ್ವಾಗತಿಸಿದರು.

ಸುವರ್ಣಸೌಧಕ್ಕೆ ಬರುವ ಮುನ್ನ ವಿಮಾನ ನಿಲ್ದಾಣದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಜಮೀರ್‌ ಅಹ್ಮದ್‌ ಅವರನ್ನು ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ದಯವಿಟ್ಟು ಸೋಲಿನ ಹತಾಶೆ ಹೊರಹಾಕಬೇಡಿ – ಸಂಸತ್‌ ಅಧಿವೇಶನಕ್ಕೂ ಮುನ್ನ ವಿಪಕ್ಷಗಳಿಗೆ ಮೋದಿ ಸಲಹೆ

ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಜಮೀರ್‌ ಅಹ್ಮದ್‌ ಖಾನ್‌ ʻಮುಸ್ಲಿಂʼ ಸ್ಪೀಕರ್‌ಗೆ (Muslim Speaker) ಕೈಮುಗಿಯುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ (BJP) ರಾಜೀನಾಮೆಗೆ ಆಗ್ರಹಿಸಿದೆ. ಈ ಕುರಿತು ಮಾತನಾಡಿದ ಸಿಎಂ, ಜಮೀರ್ ಉದ್ದೇಶಪೂರ್ವಕವಾಗಿ ಆ ಹೇಳಿಕೆ ಕೊಟ್ಟಿಲ್ಲ ಎಂದರು.

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿ, ನಾವು ತೆಲಂಗಾಣ ಗೆದ್ದಿದ್ದೇವೆ, ಉಳಿದ 3 ಸೋತಿದ್ದೇವೆ. ಜನಾಶೀರ್ವಾದ ಸ್ವೀಕರಿಸಿದ್ದೇವೆ, ಜನರ ತೀರ್ಪೇ ಅಂತಿಮ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ತೇವೆ ಎಂದರಲ್ಲದೇ ಗ್ಯಾರಂಟಿ ವಿಫಲ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.

ಗ್ಯಾರಂಟಿ ವಿಫಲವಾಗಿದ್ದರೆ ನಾವು ತೆಲಂಗಾಣದಲ್ಲಿ ಹೇಗೆ ಗೆದ್ದೆವು? ಮಧ್ಯಪ್ರದೇಶದಲ್ಲೂ ಅಲ್ಲಿನ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಗ್ಯಾರಂಟಿ ಘೋಷಣೆ ಮಾಡಿರಲಿಲ್ಲವೇ? ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ತೆಲಂಗಾಣದಲ್ಲಿಯೂ ಹೆಚ್ಚು ಪ್ರಚಾರ ಮಾಡಿದ್ದರಿಂದ ಅಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಮಧ್ಯಪ್ರದೇಶ ರಾಜ್ಯದಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯವರೂ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಎಂದಿಗೂ ಚುನಾವಣೆಯಲ್ಲಿ ಗೆಲುವು ಸಾಧಿಸಲೆಂದು ಗ್ಯಾರಂಟಿ ಯೋಜನೆಗಳನ್ನು ಘೋಷಿಸುವುದಿಲ್ಲ. ಬಡಜನರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಪ್ರಾಮಾಣಿಕತೆಯಿಂದ ಇವುಗಳನ್ನು ಜಾರಿಗೊಳಿಸಲಾಗಿದೆ. ಗ್ಯಾರಂಟಿ ಯೋಜನೆಗಳೆಲ್ಲ ಬಡವರ ಕಾರ್ಯಕ್ರಮಗಳು. ನಮ್ಮ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಬಿಜೆಪಿಯವರಿಗೆ ವಿಪಕ್ಷ ನಾಯಕರನ್ನು ಆಯ್ಕೆ ಮಾಡಿರಲಿಲ್ಲ. ವಿರೋಧ ಪಕ್ಷದವರಿಗೆ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಇಲ್ಲ. ಅವರು ಜಂಟಿಯಾಗಿ ಹೋರಾಟ ನಡೆಸಿದರೂ, ಅವರ ಎಲ್ಲ ಹೋರಾಟಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ ಎಂದು ಗುಡುಗಿದರು. ಇದನ್ನೂ ಓದಿ: ಅಮೆರಿಕ-ಭಾರತ ಸಂಬಂಧಕ್ಕೆ ಅತ್ಯುತ್ತಮ ನಾಯಕ: ಚುನಾವಣೆ ಫಲಿತಾಂಶ ಬಳಿಕ ಮೋದಿಗೆ ಯುಎಸ್ ಗಾಯಕಿ ಅಭಿನಂದನೆ

ಇನ್ನೂ ವಿಧಾನಸಭೆ ಸಭಾಂಗಣದಲ್ಲಿ ಸಾವರ್ಕರ್ ಭಾವಚಿತ್ರ ತೆಗೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಾವರ್ಕರ್ ಭಾವಚಿತ್ರ ತೆಗೆಯುವ ವಿಚಾರ ಸ್ಪೀಕರ್ ಅವರಿಗೆ ಬಿಟ್ಟಿದ್ದು ಎಂದು ಜಾರಿಕೊಂಡರು.

Share This Article