ಹುಬ್ಬಳ್ಳಿ: ನೇಹಾ ಹಿರೇಮಠ (Neha Hiremath) ಕೊಲೆಯಾಗಿ ಒಂದು ವಾರದ ಬಳಿಕ ಕೊನೆಗೂ ಆಕೆ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭೇಟಿ ನೀಡಿದರು. ಇದೇ ವೇಳೆ ನೇಹಾ ತಂದೆ-ತಾಯಿಗೆ ಸಾಂತ್ವನ ಹೇಳಿದರು.
ಹುಬ್ಬಳ್ಳಿಯಲ್ಲಿರುವ (Hubballi) ನೇಹಾ ಮನೆಗೆ ಸಿಎಂ ಸಿದ್ದರಾಮಯ್ಯ ಗುರುವಾರ ಭೇಟಿ ಕೊಟ್ಟರು. ಮನೆಯಲ್ಲಿ ಹಾಕಲಾಗಿದ್ದ ನೇಹಾ ಭಾವಚಿತ್ರಕ್ಕೆ ಸಿಎಂ ಪುಷ್ಪ ನಮನ ಸಲ್ಲಿಸಿದರು. ನಂತರ ನೇಹಾ ತಂದೆ-ತಾಯಿಯಾದ ನಿರಂಜನ ಹಿರೇಮಠ ಹಾಗೂ ಗೀತಾ ಅವರಿಗೆ ಸಿಎಂ ಸಾಂತ್ವನ ಹೇಳಿದರು. ಇದನ್ನೂ ಓದಿ: ಫಯಾಜ್ ನನ್ನ ಮಗಳನ್ನ ಕಿಡ್ನಾಪ್ ಮಾಡಲು ಯತ್ನಿಸಿದ್ದ: ನೇಹಾ ತಂದೆ
ಮಗಳ ಅಗಲಿಕೆಯ ದುಃಖದಲ್ಲಿದ್ದ ನಿರಂಜನ ಹಿರೇಮಠ ಕೈ ಹಿಡಿದು ಸಿದ್ದರಾಮಯ್ಯ ಸಂತೈಸಿದರು. ಈ ವೇಳೆ ಸಚಿವರಾದ ಸಂತೋಷ್ ಲಾಡ್, ಹೆಚ್.ಕೆ.ಪಾಟೀಲ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಎನ್.ಹೆಚ್. ಕೋನರೆಡ್ಡಿ ಸಿಎಂ ಜೊತೆ ಇದ್ದರು.
ನಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಇದೇ ವೇಳೆ ನೇಹಾ ತಂದೆ-ತಾಯಿ, ಸಿಎಂ ಬಳಿ ಕೈಮುಗಿದು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಲಾಗಿದೆ. ಖಂಡಿತವಾಗಿಯೂ ಆರೋಪಿಗೆ ತಕ್ಕ ಶಿಕ್ಷೆಯಾಗುತ್ತದೆ ಎಂದು ಭರವಸೆ ನೀಡಿದರು. ಇದು ಅಮಾನವೀಯ ಕೃತ್ಯ. ಇದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ಇದನ್ನೂ ಓದಿ: ನೇಹಾ ಕೊಲೆ ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ
ಏ.18 ರಂದು ಕಾಲೇಜಿನಲ್ಲಿ ನೇಹಾಳನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು. ಫಯಾಜ್ ಎಂಬಾತ ನೇಹಾಳಿಗೆ 9 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದ ಮನೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ರಾಜಕೀಯ ನಾಯಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.