– ತೆರೆದ ಮಾರುಕಟ್ಟೆ ಮಾರಾಟ ಯೋಜನೆಯಡಿ ರಾಜ್ಯಗಳಿಗೆ ಅಕ್ಕಿ ಮಾರಾಟ ಸ್ಥಗಿತಗೊಳಿಸಿ ಕೇಂದ್ರ ಪತ್ರ
ಬೆಂಗಳೂರು: ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಕೈಗೊಂಡು ಕನ್ನಡಿಗರ ಪಾಲು, ಬಡವರ ಪಾಲನ್ನು ಕಸಿದುಕೊಂಡಿದೆ. ಕೇಂದ್ರ ಸರ್ಕಾರ ಕನ್ನಡಿಗರ, ಬಡವರ ವಿರೋಧಿ ಎನ್ನುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.
Advertisement
ಶಕ್ತಿ ಭವನದಲ್ಲಿ ಬುಧವಾರ ಅನ್ನಭಾಗ್ಯ ಯೋಜನೆಗೆ (Anna Bhagya Scheme) ಸಂಬಂಧಿಸಿದಂತೆ ಕರೆಯಲಾಗಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಈಗಾಗಲೇ ಒಂದು ಗ್ಯಾರಂಟಿಯನ್ನು ಜಾರಿ ಮಾಡಿದ್ದು, ಜುಲೈ 1 ರಂದು ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಲಾಗಿದ್ದ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಮಂಡಳಿ ಉಪಪ್ರಧಾನ ವ್ಯವಸ್ಥಾಪಕರಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಗತ್ಯವಿದೆ ಎಂದು ಕೋರಿ ಜೂ.9 ರಂದು ಪತ್ರ ಬರೆಯಲಾಗಿತ್ತು. ಇದಕ್ಕೆ ಜೂ.12 ರಂದು ಭಾರತೀಯ ಆಹಾರ ನಿಗಮವು ಒಪ್ಪಿಗೆ ಸೂಚಿಸಿ ಕ್ವಿಂಟಾಲ್‌ಗೆ 3,400 ರೂ. ದರದಲ್ಲಿ ಅಕ್ಕಿ ಪೂರೈಕೆ ಮಾಡವುದಾಗಿ ಪತ್ರ ಬರೆದಿತ್ತು. ಇದಾದ ನಂತರ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು, ಕೇಂದ್ರ ಕೊಡಲ್ಲ ಅಂತಾ ಹೇಳ್ತಿದೆ – ಸಿಎಂ ಕಿಡಿ
Advertisement
Advertisement
ಜೂ.13 ರಂದು ಭಾರತ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯವು ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದು 15 ಲಕ್ಷ ಮೆ. ಟನ್ ಗೋಧಿ ಹಾಗೂ ಅಕ್ಕಿಯನ್ನು ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಯೋಜನೆಯಡಿ (ಒಎಂಎಸ್‌ಎಸ್‌ಡಿ) ಮಾರಾಟ ಮಾಡಲು ಸೂಚಿಸಿದೆ. ಅಲ್ಲದೇ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ಇತರ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿರುವ ಪತ್ರದ ವಿವರಗಳನ್ನು ಓದಿ ಹೇಳಿದ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರ ರಾಜಕೀಯವಾಗಿ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದರು.
Advertisement
ಎಫ್‌ಸಿಐ ಒಪ್ಪಿಗೆ ಪತ್ರದ ಆಧಾರದ ಮೇಲೆ ಜು.1 ರಿಂದ ಜಾರಿ ಮಾಡಲಾಗುವುದು ಎಂದು ಘೋಷಿಸಿದೆವು. ಎಫ್‌ಸಿಐನ ಪ್ರಧಾನ ವ್ಯವಸ್ಥಾಪಕ ಹರೀಶ್ ಎಂಬವರು 7 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ ಎಂದು ತಿಳಿಸಿದ್ದಾರೆ. ಅನ್ನಭಾಗ್ಯ ಕಾರ್ಯಕ್ರಮವನ್ನು ಜಾರಿಗೊಳಿಸದೇ ಇರುವಂತೆ ಅಡ್ಡಿಪಡಿಸುವುದು ಇದರ ಹಿಂದಿನ ಉದ್ದೇಶ ಎಂದು ಸಿಎಂ ಆರೋಪ ಮಾಡಿದರು. ಇದನ್ನೂ ಓದಿ: ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ ಭಾಗಿ ವಿವಾದ : ಕಾಂಗ್ರೆಸ್ ವಿರುದ್ಧ ಫೀಲ್ಡಿಗಿಳಿದ ವಿಪಕ್ಷಗಳು
ಭತ್ತ ಬೆಳೆಯುವ ರಾಜ್ಯಗಳಾದ ಪಂಜಾಬ್, ತೆಲಂಗಾಣ, ಆಂಧ್ರ, ಛತ್ತೀಸ್‍ಗಢ, ಹರಿಯಾಣದವರಿಗೆ ಈಗಾಗಲೇ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಅಕ್ಕಿ ಸಂಗ್ರಹವಿಲ್ಲದಿರುವುದರಿಂದ ಅಕ್ಕಿ ಪೂರೈಸಲು ಆಗುವುದಿಲ್ಲ ಎಂದಿದ್ದಾರೆ. ನಾಳೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ತೆಲಂಗಾಣ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದಾರೆ. ಅಂತೆಯೇ ಛತ್ತೀಸ್‌ಗಢ ರಾಜ್ಯದಿಂದಲೂ ಲಭ್ಯವಿರುವ ಅಕ್ಕಿಯ ಮಾಹಿತಿ ಇಂದು ಸಂಜೆಯೊಳಗೆ ಲಭಿಸಲಿದೆ. ನಾಳೆ ಸಂಜೆಯೊಳಗೆ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಅಕ್ಕಿ ಇಟ್ಟುಕೊಂಡು ಕೊಡಲಾಗುವುದಿಲ್ಲ ಎಂದರೆ ಇವರನ್ನು ಬಡವರ ವಿರೋಧಿಗಳು ಎಂದು ಕರೆಯಬೇಕು. ಕೇಂದ್ರ ಸರ್ಕಾರ ಉಚಿತವಾಗಿಯೇನೂ ಅಕ್ಕಿ ನೀಡುವುದಿಲ್ಲ. ನಾವು ಹಣ ನೀಡಿ ಪಡೆಯುವುದು. ಇತರರಿಗೆ ಕೊಡುವ ರೀತಿಯಲ್ಲಿ ನಮಗೂ ಕೊಡುತ್ತಿದ್ದರು. ಆದರೆ ಈಗ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೀಡುವುದಿಲ್ಲ ಎನ್ನುವ ತೀರ್ಮಾನಕ್ಕೆ ಅವರು ಬಂದಿದ್ದಾರೆ. ಈಗಲೂ ನಾವು ಪ್ರಯತ್ನ ಮಾಡುತ್ತಿದ್ದೇವೆ. ಪುನಃ ಮನವಿ ಮಾಡುವುದು ಇದ್ದೇ ಇರುತ್ತದೆ. ಆದರೆ ಈ ರೀತಿ ಮಾಡಿರುವುದರಿಂದ ಇದೊಂದು ಷಡ್ಯಂತ್ರ ಎಂದೇ ಪರಿಗಣಿಸಬೇಕಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಉಪಸ್ಥಿತರಿದ್ದರು.