– ಬಿಜೆಪಿ ಆಡಳಿತ ರಾಜ್ಯಗಳಲ್ಲಿ 10 ಕೆಜಿ ಅಕ್ಕಿ ಕೊಡ್ತಿದ್ರೆ ರಾಜಕೀಯ ನಿವೃತ್ತಿ
– ಜೆಡಿಎಸ್ ಪಕ್ಷವನ್ನು ಕಟ್ಟಿದ್ದೇ ನಾವು ಎಂದ ಸಿಎಂ
ಹಾಸನ: ಚನ್ನಪಟ್ಟಣದಲ್ಲಿ ದೇವೇಗೌಡರು (HD Devegowda) ಸಿದ್ದರಾಮಯ್ಯನ ಗರ್ವಭಂಗ ಮಾಡ್ತೀನಿ ಅಂದ್ರು. ಹಲ್ಲುಮುರಿ ಕಚ್ಚಿಕೊಂಡು ಕಾಂಗ್ರೆಸ್ ಪಕ್ಷವನ್ನ ಕಿತ್ತೊಗೆಯಿರಿ ಅಂತ ಹೇಳಿದ್ದರು. ನೀವೆಲ್ಲ ನನ್ನ ಗರ್ವಭಂಗ ಮಾಡೋಕೆ ಬಿಡ್ತೀರಾ? ಅಂತ ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಪ್ರಶ್ನೆ ಮಾಡಿದರು.
ಹಾಸನದ ಎಸ್.ಎಂ ಕೃಷ್ಣ ಬಡಾವಣೆಯ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ (Congress Party) ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ಜನಕಲ್ಯಾಣ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ದೊಡ್ಡ ಸಮಾವೇಶ ಆಗಿಲ್ಲ. ಹಾಸನದಲ್ಲಿ ಇಷ್ಟೊಂದು ದೊಡ್ಡ ಸಮಾವೇಶ ನಡೆದಿರಲಿಲ್ಲ. ಇಂತಹ ಸಮಾವೇಶವನ್ನ ನಾನು ಮರೆಯಲು ಸಾಧ್ಯವಿಲ್ಲ. ಇದು ಅವಿಸ್ಮರಣೀಯ. ಹಾಸನದಲ್ಲಿ (Hassan) ಸಮಾವೇಶ ಮಾಡಲು ಈ ಭಾಗದ ಎಲ್ಲಾ ಸಚಿವರು ಸಲಹೆ ಕೊಟ್ಟರು. ಸ್ವಾಭಿಮಾನಿಗಳ ಒಕ್ಕೂಟ, ಪಕ್ಷದ ಕಾರ್ಯಕರ್ತರು ಸೇರಿ ಮಾಡುತ್ತಿರುವ ಸಮಾವೇಶ ಇದು ಎಂದರಲ್ಲದೇ ʻನಮಗೆ ಮತದಾರರೇ ದೇವರುʼ ಎಂದು ನುಡಿದರು.
ದೇವೇಗೌಡರು ಯಾವಾಗಲೂ ನಮ್ಮದು ಜಾತ್ಯಾತೀತ ಪಕ್ಷ ಅಂತಿದ್ರು. 2019ರ ಚುನಾವಣೆಯಲ್ಲಿ ಬಿಜೆಪಿ ಈ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ್ರೆ, ಮೋದಿ ಪ್ರಧಾನಿ ಆದ್ರೆ ದೇಶ ಬಿಡ್ತೀನಿ ಅಂದ್ರು. ಮಿಸ್ಟರ್ ದೇವೇಗೌಡರೇ ದೇಶ ಬಿಡಬೇಡಿ. ಪಾಪ ನನಗಿಂತ 15 ವರ್ಷ ದೊಡ್ಡವರು, ಅವರ ವಯಸ್ಸಿಗೆ ತಕ್ಕಂತೆ ಮಾತನಾಡಬೇಕು. ಚನ್ನಪಟ್ಟಣದಲ್ಲಿ ಸಿದ್ದರಾಮಯ್ಯನ ಗರ್ವಭಂಗ ಮಾಡ್ತೀನಿ ಅಂದ್ರು. ಹಲ್ಲುಮುರಿ ಕಚ್ಚಿಕೊಂಡು ಕಾಂಗ್ರೆಸ್ ಪಕ್ಷವನ್ನ ಕಿತ್ತೊಗೆಯಿರಿ ಅಂದ್ರು. ನೀವೆಲ್ಲ ನನ್ನ ಗರ್ವಭಂಗ ಮಾಡೋಕೆ ಬಿಡ್ತೀರಾ? ಅಂತ ಅಭಿಮಾನಿಗಳನ್ನ ಕೇಳಿದ್ರು.
ಚನ್ನಪಟ್ಟಣದಲ್ಲಿ ಮಹಾನಾಯಕನ ಮೊಮ್ಮಗನನ್ನ, ಸಂಡೂರಿನಲ್ಲಿ ಮಾಜಿ ಸಿಎಂ ಬೊಮ್ಮಾಯಿ ಮಗನನ್ನ ಸೋಲಿಸಿದ್ದೇವೆ. ಬಿಜೆಪಿ, ಜೆಡಿಎಸ್ ಸ್ವಂತ ಶಕ್ತಿ ಮೇಲೆ ಯಾವತ್ತೂ ಅಧಿಕಾರಕ್ಕೆ ಬಂದಿರಲಿಲ್ಲ. ನಮ್ಮಿಂದ 2 ಬಾರಿ ಕುಮಾರಸ್ವಾಮಿ ಸಿಎಂ ಆಗಿದ್ರು. ಆದ್ರೆ ಹಿಂಬಾಗಿಲ ರಾಜಕಾರಣದ ಮೂಲಕ ಬಿಜೆಪಿ ಅಧಿಕಾರಕ್ಕೆ ಏರಿತು ಎಂದು ಕಿಡಿ ಕಾರಿದರು.
ಬಿಜೆಪಿ 10 ಕೆಜಿ ಅಕ್ಕಿ ಕೊಡ್ತಿದ್ರೆ ರಾಜಕೀಯ ನಿವೃತ್ತಿ:
ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತಿರುವುದು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರ. ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ 10 ಕೆಜಿ ಅಕ್ಕಿ ಕೊಡುತ್ತಿದ್ದರೆ ರಾಜಕೀಯ ನಿವೃತ್ತಿ ತಗೋತೀನಿ ಎಂದರಲ್ಲದೇ ಕುಮಾರಸ್ವಾಮಿ ಕಣ್ಣೀರಿನ ವಿಚಾರ ಕುರಿತು ವ್ಯಂಗ್ಯವಾಡಿದರು. ಕುಮಾರಸ್ವಾಮಿ ನೀವು ಕಣ್ಣೀರು ಹಾಕುತ್ತಿದ್ದೀರಲ್ಲ, ರೈತರಿಗಾಗಿ ನೀವು ಕಣ್ಣೀರು ಹಾಕಬಾರದಾ? ನಾವು ರೈತರಿಗಾಗಿ ಶೇ.4 ರಿಂದ ಶೂನ್ಯ ಬಡ್ಡಿದರಲ್ಲಿ ಸಾಲ ನೀಡುವ ಯೋಜನೆ ಕಲ್ಪಿಸಿದ್ದೇವೆ. ನಬಾರ್ಡ್‌ನಿಂದ ನಮಗೆ 800 ಕೋಟಿ ರೂ. ಅನುದಾನ ಬರಬೇಕು. ಇದಕ್ಕಾಗಿ ನಾನು ಪ್ರಧಾನಿ ಮೋದಿ ಅವರನ್ನ ಭೇಟಿಯಾಗಿ, ಮನವಿ ಮಾಡಿದೆ. ಆದ್ರೆ ದೇವೇಗೌಡರಾಗಲಿ, ಕುಮಾರಸ್ವಾಮಿ ಆಗಲಿ ಈ ಬಗ್ಗೆ ಚಕಾರ ಎತ್ತಲಿಲ್ಲವೆಂದುನುಡಿದರು.
ಒಕ್ಕಲಿಗ ನಾಯಕರನ್ನ ತುಳಿದು ಹಾಕಿದ್ರು:
ದೊಡ್ಡಗೌಡರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸಿದ್ದರಾಮಯ್ಯ, ನೀವು ಯಾವ ನಾಯಕರನ್ನೂ ಬೆಳೆಸಿಲ್ಲ. ಒಕ್ಕಲಿಗ ನಾಯಕರನ್ನ ತುಳಿದುಹಾಕಿದರು. ಬಚ್ಚೇಗೌಡ, ಬಿ.ಎಲ್. ಶಂಕರ್, ಕೃಷ್ಣಪ್ಪ ಸೇರಿದಂತೆ ಯಾರನ್ನೂ ಬೆಳೆಸಿಲ್ಲ. 1994ರಲ್ಲಿ ನಾನು-ಜಾಲಪ್ಪ ಇಲ್ಲದಿದ್ದರೆ ದೇವೇಗೌಡರು ಸಿಎಂ ಆಗುತ್ತಿರಲ್ಲಿಲ್ಲ. ಜಾತ್ಯಾತೀತ ಜನಾತದಳ ನಾನು ದೇವೇವೇಗೌಡರು, ಜಾಲಪ್ಪ, ಬಿ.ಆರ್ ಪಾಟೀಲ್ ಎಲ್ಲರೂ ಸೇರಿ ಕಟ್ಟಿದ ಪಕ್ಷ. ಆದ್ರೆ ಅಹಿಂದ ಸಮಾವೇಶ ಮಾಡಿದ್ದಕ್ಕೆ ನನ್ನನು ಪಕ್ಷದಿಂದ ಉಚ್ಚಾಟನೆ ಮಾಡಿದ್ರು. ನಾನು ಪಕ್ಷವನ್ನು ಬಿಡಲಿಲ್ಲ. ಜಾತ್ಯಾತೀತ ಜನತಾದಳ ಕಟ್ಟಿದ್ದು ನಾವೇ ಎಂದು ಕೂಗಿ ಕೂಗಿ ಹೇಳಿದರು.
ಮುಂದಿನ ಚುನಾವಣೆವರೆಗೂ ʻಗ್ಯಾರಂಟಿʼ:
ಕೇಂದ್ರದಿಂದ ರಾಜ್ಯಕ್ಕೆ ಬರುವ ಯೋಜನೆಗಳಲ್ಲಿ ಅನ್ಯಾಯ ಮಾಡುತ್ತಿದ್ದಾರೆ. ನಮಗೆ ಬರಬೇಕಾದ ಹಣ ಬಿಡುಗಡೆ ಮಾಡುತ್ತಿಲ್ಲ, ನಾವು ಗ್ಯಾರಂಟಿಗಾಗಿ ಹಣ ಖರ್ಚು ಮಾಡುತ್ತೇವೆಂದು ಹಣ ಬಿಡುಗಡೆ ಮಾಡುತ್ತಿಲ್ಲ. ಆದ್ರೂ ನಾವು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಮುಂದಿನ ಚುನಾವಣೆವರೆಗೂ ಗ್ಯಾರಂಟಿ ಮುಂದುವರಿಸುತ್ತೇವೆ. ಮುಂದಿನ ಚುನಾವಣೆಯಲ್ಲೂ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಘೋಷಿಸಿದರು.
ದ್ವೇಷರಾಜಕಾರಣ ನಾವು ಮಾಡಲ್ಲ:
ದ್ವೇಷ ರಾಜಕಾರಣ ನಾವು ಮಾಡುವುದಿಲ್ಲ. ದೇವೇಗೌಡರು ದ್ವೇಷ ರಾಜಕಾರಣ ಮಾಡುವುದು ಬಿಡಲಿ. ಅವರು ಒಳ್ಳೆಯ ರಾಜಕಾರಣ ಮಾಡಲಿ ಎಂದು ಮನವಿ ಮಾಡಿದ ಸಿಎಂ, ಬಿಜೆಪಿ-ಜೆಡಿಎಸ್ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನೀವು ದಾರಿ ತಪ್ಪಬೇಡಿ ಎಂದು ಜನರಿಗೆ ಮನವಿ ಮಾಡಿದರು.