ಬೆಂಗಳೂರು: ಎಐಸಿಸಿ ಒಬಿಸಿ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ (AICC OBC Advisory Council) ಸಿಎಂ ಸಿದ್ದರಾಮಯ್ಯ (Siddaramaiah) ಆಯ್ಕೆಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ, ನನಗೆ ಈ ವಿಚಾರ ಗೊತ್ತಿಲ್ಲ ಎಂದಿದ್ದಾರೆ. ನಾನು ಪತ್ರಿಕೆಯಲ್ಲೇ ಓದಿ ತಿಳಿದುಕೊಂಡೆ ಎಂದಿದ್ದಾರೆ.
ಈ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡುತ್ತೇನೆ. ಕೇಂದ್ರ ಒಬಿಸಿ ಅಧ್ಯಕ್ಷರು ಕರ್ನಾಟಕದಲ್ಲಿ ಸಭೆ ಮಾಡುವಂತೆ ಹೇಳಿದ್ದರು. ಈ ಬಗ್ಗೆ ಜು.15ಕ್ಕೆ ನಿಗದಿ ಮಾಡಿದ್ದೆ ಎಂದಿದ್ದಾರೆ. ಇದನ್ನೂ ಓದಿ: ಎಐಸಿಸಿ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ – ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರಾ ಸಿಎಂ?
ಒಬಿಸಿ ಕಮಿಟಿ ಅಧ್ಯಕ್ಷ ಸ್ಥಾನ ಸ್ವೀಕಾರ ಮಾಡ್ತೀರಾ ಎಂಬ ಪ್ರಶ್ನೆಗೆ, ಜವಾಬ್ದಾರಿ ಕೊಟ್ಟಾಗ ಓಡಿಹೋಗಲು ಆಗುತ್ತಾ? ನಾನು ಇದನ್ನು ಕೇಳಿಲ್ಲ. ಅವರೇ ಘೋಷಣೆ ಮಾಡಿದ್ದಾರೆ. ಇದು ರಾಷ್ಟ್ರ ರಾಜಕಾರಣ ಅಲ್ಲ. ಇನ್ನೂ ಈ ಬಗ್ಗೆ ಗೊತ್ತಿಲ್ಲ, ವಿಚಾರಿಸುತ್ತೇನೆ ಎಂದಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ʻಸೆಪ್ಟೆಂಬರ್ ಕ್ರಾಂತಿʼಯ ಬಿರುಗಾಳಿ ಜೋರಾಗಿ ಬೀಸುತ್ತಿದೆ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೇಳಿಕೆ – ಪ್ರತಿ ಹೇಳಿಕೆಗಳ ಜಟಾಪಟಿ ನಡೆಯುತ್ತಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದರಿಂದ ʻ5 ವರ್ಷ ನಾನೇ ಸಿಎಂʼ ಎಂಬ ಸಂದೇಶ ನೀಡಿದ್ದ ಸಿದ್ದರಾಮಯ್ಯ ಅವರು ಸಿಎಂ ಹುದ್ದೆ ತೊರೆದು ರಾಷ್ಟ್ರ ರಾಜಕಾರಣಕ್ಕೆ ತೆರಳಲಿದ್ದಾರೆಯೇ ಎನ್ನುವ ಪ್ರಶ್ನೆಯೂ ಮೂಡಿದೆ. ಸದ್ಯ ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ಸಿದ್ದರಾಮಯ್ಯರನ್ನ ನೇಮಕ ಮಾಡಲಾಗಿದೆ. ಮಂಡಳಿಯ ಚಟುವಟಿಕೆಗಳನ್ನು ಕರ್ನಾಟಕದಿಂದಲೇ ಆರಂಭಿಸಲು ಎಐಸಿಸಿ ನಿರ್ಧರಿಸಿದ್ದು, ಇದೇ ಜುಲೈ 15ರಂದು ಬೆಂಗಳೂರಿನಲ್ಲಿ ಮೊದಲ ಸಭೆ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಮದುವೆ ವಿಚಾರಕ್ಕೆ ಪ್ರಭು ಚೌಹಾಣ್ ಸಂಬಂಧಿಕರು, ಭಾವಿ ಬೀಗರ ನಡುವೆ ಮಾರಾಮಾರಿ!