– ರಾಜ್ಯಪಾಲರ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ ಅಂತ ಬೇಸರ
ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ. ರಾಜ್ಯ ಸರ್ಕಾರದ ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣ ಓದದೇ ಸಂವಿಧಾನದ ವಿಧಿಯನ್ನ ಉಲ್ಲಂಘನೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೊಸ ವರ್ಷದ ಮೊದಲ ಅಧಿವೇಶನದ ಮೊದಲ ದಿನ ವಿಧಾನಸಭೆಯಲ್ಲಿ ಭಾರೀ ಹೈಡ್ರಾಮ ನಡೆಯಿತು. ರಾಜ್ಯಪಾಲರು (Governor Thawarchand Gehlot) ಅಧಿವೇಶನ ಆರಂಭಿಸಿ ಆರಂಭಿಕ ಸಾಲನ್ನು ಹೇಳಿ ಸದನದಿಂದ ಹೊರ ನಡೆದರು. ವಿಪಕ್ಷಗಳ ನಡುವೆ ಭಾರೀ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು. ಇದನ್ನೂ ಓದಿ: ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ – ಭಾಷಣ ಓದದೇ ತೆರಳಿದ ಗೆಹ್ಲೋಟ್
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ರಾಜ್ಯಪಾಲರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಸರ್ಕಾರ ಬಂದಾಗ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯ. ಆರ್ಟಿಕಲ್ 176(1), 163 ರ ಉಲ್ಲಂಘನೆ ಬಹಳ ಸ್ಪಷ್ಟವಾಗಿದೆ. ಈ ವಿಧಿಗಳ ಅನ್ವಯ ರಾಜ್ಯಪಾಲರು ತಾವು ತಯಾರು ಮಾಡಿದ ಭಾಷಣ ಓದುವಂತಿಲ್ಲ. ರಾಜ್ಯ ಸರ್ಕಾದ ಸಂಪುಟ ಸಿದ್ಧಪಡಿಸಿದ ಭಾಷಣವನ್ನ ಓದಲೇಬೇಕು ಎಂದು ಹೇಳಿದರು. ಇದನ್ನೂ ಓದಿ: ವಿಧಾನಸೌಧಕ್ಕೆ ರಾಜ್ಯಪಾಲರ ಆಗಮನ – ಹೂಗುಚ್ಛ ನೀಡಿ ಆತ್ಮೀಯ ಸ್ವಾಗತ ಕೋರಿದ ಸಿಎಂ
ಇದು ವರ್ಷದ ಮೊದಲ ಜಂಟಿ ಅಧಿವೇಶನ, ಜೊತೆಗೆ ವಿಶೇಷ ಅಧಿವೇಶನವೂ ಕೂಡ ಹೌದು. ಏಕೆಂದ್ರೆ, ಕೇಂದ್ರ ಸರ್ಕಾರ ನರೇಗಾ ರದ್ದು ಮಾಡಿ ವಿಬಿಜಿರಾಮ್‌ಜಿ ಕಾಯ್ದೆಯನ್ನ ಹೊಸದಾಗಿ ಕೇಂದ್ರ ಸರ್ಕಾರ ಮಾಡಿದೆ. ಇದಕ್ಕೆ ನಮ್ಮ ಸರ್ಕಾರದಿಂದ ತೀವ್ರ ವಿರೋಧ ಇದೆ. ಮಹಾತ್ಮ ಗಾಂಧಿ ಹೆಸರು ತೆಗೆದಿರೋದಕ್ಕೆ ನಮ್ಮ ವಿರೋಧ ಇದೆ. 20 ವರ್ಷಗಳ ಹಿಂದೆ ಅಂದ್ರೆ 2005 ರಲ್ಲಿ ದಿ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನ ನಿರ್ದೇಶನಗಳಲ್ಲಿ ಇರುವಂತೆ ರೈಟ್ ಟು ವರ್ಕ್, ರೈಟ್ ಟು ಫುಡ್, ರೈಟ್ ಟು ಎಜುಕೇಶನ್, ಆರ್‌ಟಿಐ ಕಾಯ್ದೆಗಳನ್ನ ಜಾರಿಗೆ ತಂದರು. ಕೆಲಸದ ಹಕ್ಕು ಹಳ್ಳಿಯಲ್ಲಿರುವ ಬಡವರಿಗೆ ಕನಿಷ್ಠ 100 ದಿನಗಳ ಉದ್ಯೋಗ ಕೊಡಬೇಕು ಎನ್ನುವಂತಹದ್ದು. ಇದರಲ್ಲಿ ಮಹಿಳೆಯರು, ಸಣ್ಣ ರೈತರಿಗೆ ಅನುಕೂಲವಾಗುತ್ತಿತ್ತು. 53% ಮಹಿಳೆಯರು 28% ದಲಿತರಿದ್ದಾರೆ. ಇವರಿಗೆ ಉದ್ಯೋಗ ಕೊಡ್ತೀವಿ ಅಂತ ಖಾತ್ರಿ ಇಲ್ಲ. ಹಾಗಾಗಿ ಅವರು ಕೇಳಿದ ಜಾಗದಲ್ಲಿ, ಸಣ್ಣ ರೈತರು ಜಮೀಮಿನುಗಳಲ್ಲೇ ಕೆಲಸ ಮಾಡಿಕೊಳ್ಳಲು ಅವಕಾಶ ಇತ್ತು, 365 ದಿನಗಳಲ್ಲಿ ಯಾವಾಗ ಕೆಲಸ ಕೇಳಿದ್ರೂ ಕೆಲಸ ಕೊಡಬಹುದಿತ್ತು. ಆದ್ರೆ ವಿಬಿಜಿರಾಮ್‌ಜಿ ಕಾಯ್ದೆ ಅನ್ವಯ ಕೇಂದ್ರ ಸರ್ಕಾರ ಎಲ್ಲಿ ಹೇಳುತ್ತದೋ ಅಲ್ಲಿ ಕೆಲಸ ಮಾಡಬೇಕು. ಜೊತೆಗೆ ಆಕ್ಷನ್ ಪ್ಲ್ಯಾನ್ ಮಾಡುವುದು ಆಯಾ ಪಂಚಾಯ್ತಿಗಳು, ಇದನ್ನ ಜಿರಾಮ್‌ಜಿ ಕಾಯ್ದೆಯಲ್ಲಿ ತೆಗೆದುಹಾಕಲಾಗಿದೆ ಎಂದು ಕಿಡಿ ಕಾರಿದರು.
ವಿಪಕ್ಷದವರು ರಾಜ್ಯಪಾಲರ ನಡೆಯನ್ನ ಉದ್ದೇಶಪೂರ್ವಕವಾಗಿ ಸಮೃಥನೆ ಮಾಡಿಕೊಳ್ತಿದ್ದಾರೆ. ಏಕೆಂದ್ರೆ ಇವರಿಗೆ ಯಾವುದೇ ಸ್ವಾತಂತ್ರ್ಯ ಇಲ್ಲ. ಕೇಂದ್ರ ಮಾಡಿದ್ದನ್ನ ಒಪ್ಪಿಕೊಳ್ಳಬೇಕು ಅನ್ನೋ ನೀತಿ ಮಾಡಿದ್ದಾರೆ. ನಾವು ಅದನ್ನ ವಿರೋಧ ಮಾಡಿದ್ದೇವೆ ಅಂತ ಭಾಷಣದಲ್ಲಿ ಸೇರಿಸಲಾಗಿತ್ತು. ಆದ್ರೆ ರಾಜ್ಯಪಾಲರು ಜನಪ್ರತಿನಿಧಿಗಳ ಸಭೆಗೆ ಅವಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಪಾಲರು ಕ್ಯಾಬಿನೆಟ್ ತಯಾರು ಮಾಡಿದ ಭಾಷಣ ಓದದೇ ಅವರೇ ಮಾಡಿದ ಒಂದು ಪ್ಯಾರ ಭಾಷಣ ಓದಿ, ಸಂವಿಧಾನದ ವಿಧಿಗಳನ್ನ ಉಲ್ಲಂಘನೆ ಮಾಡಿದ್ದಾರೆ. ಸಂವಿಧಾನದ ಉಲ್ಲಂಘನೆಯಾಗಿದೆ. ಅಲ್ಲದೇ ಇದು ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ. ಸಂವಿಧಾನ ಬಂದಾಗಿನಿಂದ ನಡೆದು ಬಂದ ವಿಚಾರವನ್ನ ಉಲ್ಲಂಘಿಸಿದ್ದಾರೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ವರ್ತಿಸಿದ್ದಾರೆ. ಕೇಂದ್ರ ತನ್ನ ತಪ್ಪುಗಳನ್ನ ಮುಚ್ಚಿಟ್ಟುಕೊಳ್ಳಲು ತಾನು ತಯಾರು ಮಾಡಿದ ಭಾಷಣವನ್ನ ಓದಿಸಿದೆ. ಇದು ಸಂವಿಧಾನದ ಉಲ್ಲಂಘನೆ. ಕೋರ್ಟ್‌ನಲ್ಲಿ ದಾವೆ ಹೂಡುವ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ತಿಳಿಸುತ್ತೇನೆ ಎಂದರು.
ನಮ್ಮ ಉದ್ಧೇಶ ಏನಿತ್ತು ಅಂದ್ರೆ ಮನ್ರೇಗಾವನ್ನ ಮರುಸ್ಥಾಪನೆ ಮಾಡಬೇಕು. ಹೊಸ ಕಾಯ್ದೆ ರದ್ದು ಮಾಡಬೇಕು ಅನ್ನೋದಿತ್ತು. ನರೇಗಾ ಪುನಸ್ಥಾಪನೆ ಮಾಡುವವರೆಗೆ ನಿರಂತರ ಹೋರಾಟ ನಡೆಯುತ್ತೆ. ರೈತ ವಿರೋಧಿ ಕಾಯ್ದೆಗಳನ್ನ ತಂದು ವಾಪಪ್ ಪಡೆಯುವವರೆಗೆ ಮಾಡಿದ ರೀತಿ ಹೋರಾಟ ಮುಂದುವರಿಸುತ್ತೇವೆ. ನಮ್ಮ ಸರ್ಕಾರ ಸಚಿವರು, ಶಾಸಕರ ಹಾದಿಯಾಗಿ ಪ್ರತಿಯೊಬ್ಬರೂ ಪ್ರತಿಭಟಿಸಲಿದ್ದಾರೆ ಎಂದು ಗುಡುಗಿದರು.


