ಕೊಪ್ಪಳ: ಬಂಧಿಸುವ ಸನ್ನಿವೇಶ ಬಂದರೇ ಯಾವುದೇ ಮುಲಾಜಿಲ್ಲದೇ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಅವರನ್ನ ಅರೆಸ್ಟ್ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಕೊಪ್ಪಳದ (Koppala) ಬಸಾಪೂರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಕುಮಾರಸ್ವಾಮಿಯನ್ನು ಬಂಧಿಸುವ ಸನ್ನಿವೇಶ ಬಂದಿಲ್ಲ. ಕುಮಾರಸ್ವಾಮಿ ಮೇಲೆ ಈಗಾಗಲೇ ಲೋಕಾಯುಕ್ತ ಹಾಗೂ ಎಸಿಬಿ ಸಂಸ್ಥೆಗಳು ತನಿಖೆ ಮಾಡಿವೆ. ಕುಮಾರಸ್ವಾಮಿ ವಿರುದ್ಧ ಸಾಕಷ್ಟು ದಾಖಲೆ ಸಿಕ್ಕಿವೆ. ಈ ಹಿನ್ನೆಲೆ ಲೋಕಾಯುಕ್ತ ಸಂಸ್ಥೆ ಪ್ರಾಸಿಕ್ಯೂಷನ್‌ಗೆ ಪರವಾನಗಿ ನೀಡುವಂತೆ ರಾಜ್ಯಪಾಲರನ್ನು ಕೇಳಿದ್ದಾರೆ. ಕುಮಾರಸ್ವಾಮಿಗೆ ಭಯ ಬಂದಿದೆ. ಅದಕ್ಕೆ ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದರು.
Advertisement
Advertisement
ನನ್ನ ಕೇಸ್‌ನಲ್ಲಿ ಯಾವುದೇ ತನಿಖೆ ಆಗಿಲ್ಲ. ಕೇವಲ ಟಿ.ಜೆ ಅಬ್ರಹಾಂ ಬರೆದ ಪತ್ರದ ಆಧಾರದ ಮೇಲೆ ರಾಜ್ಯಪಾಲರು ನನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಒಪ್ಪಿಗೆ ನೀಡಿದ್ದಾರೆ. ಆದರೆ, ನನ್ನ ಮೇಲೆ ಯಾವುದೇ ತನಿಖಾ ಸಂಸ್ಥೆ ತನಿಖೆ ಮಾಡಿ ದಾಖಲೆ ಇವೆ ಎಂದು ಹೇಳಿಲ್ಲ. ಪೋಲಿಸರು ತನಿಖೆಗೆ ಅವಕಾಶ ಕೇಳಿಲ್ಲ. ಆದರೆ, ಖಾಸಗಿ ವ್ಯಕ್ತಿ ದೂರಿನ ಆಧಾರದ ಮೇಲೆ ನನ್ನ ಮೇಲೆ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ನಡೆ ತಾರತಮ್ಯದಿಂದ ಕೂಡಿದೆ ಎಂದು ಅನ್ನಿಸುವುದಿಲ್ಲವೇ? ಇದನ್ನು ಹೇಳಿದರೆ ಕುಮಾರಸ್ವಾಮಿ ಸುಳ್ಳು ಹೇಳಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
Advertisement
Advertisement
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪತ್ರದ ಬಗ್ಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಯಾವತ್ತೂ ಹಿಟ್ ಅಂಡ್ ರನ್ ಗಿರಾಕಿ. ಅವರು ಯಾವತ್ತೂ ಯಾವುದೇ ಒಂದು ಪ್ರಕರಣವನ್ನ ತಾರ್ಕಿಕ ಅಂತ್ಯ ಕಾಣಿಸಿಲ್ಲ. ನನ್ನ ಜೋಬಿನಲ್ಲೇ ಪೆನ್ ಡ್ರೈವ್ ಇದೆ ಎಂದು ಹೇಳುತ್ತಿದ್ದರು. ಯಾವುದಾದರೂ ಪೆನ್ ಡ್ರೈವ್ ಬಿಡುಗಡೆ ಮಾಡಿದ್ದಾರೆಯೇ ಎಂದು ವ್ಯಂಗ್ಯವಾಡಿದರು.