ಅಧಿಕಾರ ಕೈಯಲ್ಲಿತ್ತು, ವ್ಯಾಮೋಹ ಇದ್ದಿದ್ದರೇ ಎಷ್ಟು ಬೇಕಾದ್ರೂ ಆಸ್ತಿ ಮಾಡಬಹುದಿತ್ತು: ಸಿದ್ದರಾಮಯ್ಯ

Public TV
3 Min Read
Siddaramaiah 6

– 277 ಶಾಸಕರ ಖರೀದಿಗೆ 6,500 ಕೋಟಿ ಎಲ್ಲಿಂದ ಬಂತು?
– ರಾಜಕೀಯ ನೀಚತನ ಬಂದಿದ್ದೇ ಯಡಿಯೂರಪ್ಪನಿಂದ: ಸಿಎಂ

ಬೆಂಗಳೂರು: ಎರಡು ಬಾರಿ ಸಿಎಂ ಆಗಿದ್ದೇನೆ, 2 ಬಾರಿ ಉಪಮುಖ್ಯಮಂತ್ರಿಯೂ ಆಗಿದ್ದೆ. 15 ಬಾರಿ ಬಜೆಟ್‌ ಮಂಡಿಸಿದ್ದೇನೆ. ಕೈಯಲ್ಲಿ ಅಧಿಕಾರ ಇತ್ತು. ಆಸ್ತಿ (Property) ಮೇಲೆ ವ್ಯಾಮೋಹ ಇದ್ದಿದ್ದರೇ ಎಷ್ಟು ಬೇಕಾದ್ರೂ ಆಸ್ತಿ ಮಾಡಬಹುದಿತ್ತು ಅಂತ ಸಿಎಂ ಸಿದ್ದರಾಮ್ಯಯ್ಯ (Siddaramaiah) ತಿಳಿಸಿದ್ದಾರೆ.

ಚುಟುಕು ಸಂದರ್ಶನದಲ್ಲಿ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿದ ಅವರು, ನನ್ನ 4 ದಶಕಗಳ ರಾಜಕೀಯ ಜೀವನ ತೆರೆದ ಪುಸ್ತಕ. ನನ್ನ ಹೆಸರಿಗೆ ಮಸಿ ಬಳಿಯುವ ದುರುದ್ದೇಶ ಬಿಜೆಪಿ-ಜೆಡಿಎಸ್‌ನದ್ದಾಗಿದೆ. ಅವರ ಈ ಪ್ರಯತ್ನ ವಿಫಲವಾಗುತ್ತೆ. ನಾನು 2 ಬಾರಿ ಮುಖ್ಯಮಂತ್ರಿಯಾಗಿದ್ದೇನೆ. 2 ಬಾರಿ ಉಪಮುಖ್ಯಮಂತ್ರಿಯಾಗಿದ್ದೆ, 2 ಬಾರಿ ವಿಪಕ್ಷ ನಾಯಕ ನಾಗಿದ್ದೆ. 15 ಬಾರಿ ಬಜೆಟ್ ಮಂಡಿಸಿದ್ದೇನೆ. ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಆಸ್ತಿ ಮೇಲೆ ವ್ಯಾಮೋಹವಿಲ್ಲ. ವಾಮಮಾರ್ಗದಲ್ಲಿ ಮಾಡೋದಾಗಿದ್ದರೆ ಅಧಿಕಾರ ಇತ್ತು, ಎಷ್ಟು ಬೇಕಾದ್ರೂ ಆಸ್ತಿ ಮಾಡಬಹುದಿತ್ತು. ಆದ್ರೆ ನನಗೆ ಆಸ್ತಿ ಮೇಲೆ ವ್ಯಾಮೋಹ ಇಲ್ಲ ಎಂದು ಹೇಳಿದ್ದಾರೆ.

Siddaramaiah 1 3

ಬಿಜೆಪಿಯವರು (BJP) ಶೋಷಿತರು, ಬಡವರ ವಿರೋಧಿಗಳು. ಮನುವಾದಿಗಳಿಗೆ ಯಾವ ಸಿದ್ಧಾಂತ ಇದೆ? ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಜನರಿಗೆ ಸಮಾಜದ ಬದಲಾವಣೆಯಲ್ಲೂ ನಂಬಿಕೆ ಇಲ್ಲ. ಬಿಜೆಪಿಯವರು ಮನುವಾದಿಗಳಾದ್ರೆ, ಜೆಡಿಎಸ್‌ನವರು ಜಾತಿವಾದಿಗಳು. ಪಾಳೇಗಾರಿಕೆ ಮನೋವೃತ್ತಿ ಇರುವವರು. ಮನುವಾದಿಗಳು, ಜಾತಿಗಳು ಸೇರಿ ನನ್ನನ್ನ ಹಾಗೂ ಕಾಂಗ್ರೆಸ್‌ನ ಟಾರ್ಗೆಟ್ ಮಾಡ್ತಿದ್ದಾರೆ. ಸಿದ್ದರಾಮಯ್ಯಯನ ಹೆಸರಿಗೆ ಮಸಿ ಬಳಿದು, ರಾಜಕೀಯವಾಗಿ ಮುಗಿಸಿದ್ರೆ, ಸರ್ಕಾರ ಮುಗಿಸಲು ಸಾಧ್ಯವಾಗುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದು ಸಿಎಂ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಐಸಿಸ್ ಶಂಕಿತ ಭಯೋತ್ಪಾದಕ ಅರೆಸ್ಟ್‌

ಇದೇ ವೇಳೆ ಮೈಸೂರು ಚಲೋ ಪಾದಯಾತ್ರೆ ಕುರಿತು ಮಾತನಾಡಿ, ನಾನು 2 ಬಾರಿ ಸಿಎಂ ಆಗಿದ್ದೇನೆ. ಅವರು ಎಷ್ಟೇ ಸುಳ್ಳು ಹೇಳಿದ್ರೂ, ಜನ ನಮಗೇ ಆಶೀರ್ವಾದ ಮಾಡಿದ್ದಾರೆ. ಏನ್ ತಪ್ಪು ಮಾಡಿದ್ದೇವೆ ಅಂತ ಜನರಿಗೆ ಹೇಳ್ತಾರೆ? ಆಪರೇಷನ್ ಕಮಲ ಬಂದಿದ್ದು ಬಿಜೆಪಿ ಮತ್ತು ಯಡಿಯೂರಪ್ಪ ಅವರಿಂದ. ಈ ಅಂಟು ರೋಗ ಆರಂಭವಾಯ್ತು. ಶಾಸಕರನ್ನು ಕೊಂಡುಕೊಳ್ಳುವ ರಾಜಕೀಯ ನೀಚತನ ಬಂದಿದ್ದೇ ಯಡಿಯೂರಪ್ಪ ಅವರಿಂದ ಎಂದು ಲೇವಡಿ ಮಾಡಿದರು.

ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡ್ತಾರಾ? ಅನ್ನೋ ಪ್ರಶ್ನೆಗೆ ಉತ್ತರಿಸಿದ ಸಿಎಂ, ನನಗಿರುವ ಕಾನೂನು ಜ್ಞಾನದ ಪ್ರಕಾರ, ಅಲ್ಲಿ ಯಾವುದೇ ನೈಜತೆ ಇಲ್ಲ. ಇದು ಬಿಜೆಪಿ-ಜೆಡಿಎಸ್‌ನ ದ್ವೇಷದ ರಾಜಕಾರಣ, ಸುಳ್ಳಿನ ರಾಜಕಾರಣ. ರಾಜ್ಯಪಾಲರಿಗೆ ಕಾನೂನು ಅರಿವಾಗುತ್ತೆ ಎಂದುಕೊಂಡಿದ್ದೇನೆ ಎಂದು ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಲೂಮಿನಲ್ ಟೆಸ್ಟ್‌ನಲ್ಲಿ ʻದಾಸʼನಿಗೆ ಟ್ವಿಸ್ಟ್‌ | ಒಗೆದು ಒಣಹಾಕಿದ್ದ ಬಟ್ಟೆಯಲ್ಲಿ ರಕ್ತದ ಕಲೆ ಪತ್ತೆಯಾಗಿದ್ದು ಹೇಗೆ?

ಬಿಜೆಪಿ ವಿರುದ್ಧ 21 ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೀತಿದೆ. ಎಪಿಎಂಸಿ ಹಗರಣ, ಬೋವಿ ನಿಗಮ, 40% ಕಮಿಷನ್‌, ಬಿಟ್ ಕಾಯಿನ್, ಕೋವಿಡ್ ಹಗರಣ, ದೇವರಾಜ್ ಅರಸು ಟ್ರಕ್ ಟರ್ಮಿನಲ್ ಹಗರಣಗಳ ತನಿಖೆ ನಡೀತಿದೆ. ಎಲ್ಲಾ ಪ್ರಕರಣಗಳನ್ನ ನಾವು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಕಾನೂನು ಚೌಕಟ್ಟಿನಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡ್ತೇವೆ. ನಾವು ಕೂಡ ರಾಜಕೀಯವಾಗಿ, ಕಾನೂನಾತ್ಮಕವಾಗಿ ಎದುರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

277 ಶಾಸಕರ ಖರೀದಿಗೆ 6,500 ಕೋಟಿ ಎಲ್ಲಿಂದ ಬಂತು?
ಅಲ್ಲದೇ ಇತ್ತೀಚೆಗೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ರು, ಬಿಜೆಪಿಯವರು ಈವರೆಗೆ 277 ಶಾಸಕರನ್ನ ಖರೀದಿ ಮಾಡಿದ್ದಾರೆ. ಅದಕ್ಕಾಗಿ 6,500 ಕೋಟಿ ರೂ. ಖರ್ಚು ಮಾಡಿದ್ದಾರೆ. ಅಷ್ಟೊಂದು ಹಣ ಎಲ್ಲಿಂದ ಬಂತು? ನರೇಂದ್ರ ಮೋದಿ ಅವರು ಪ್ರಾಮಾಣಿಕರು ಅಂತಾರಲ್ಲ ಹೇಳಲಿ? ಎಂದು ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ, ನಿಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ: ಡಿಕೆಶಿ ಗುಡುಗು

Share This Article