ಸಿಎಂ ಸಿದ್ದರಾಮಯ್ಯ ಮಂಗಳೂರು ಭೇಟಿ ‘ಬಂದ ಪುಟ್ಟ ಹೋದ ಪುಟ್ಟ’ ಆಗದಿರಲಿ: ಕ್ಯಾ.ಬ್ರಿಜೇಶ್ ಚೌಟ

Public TV
4 Min Read
Brijesh Chowta

ಕೋಮು ಅಪಪ್ರಚಾರ ನಿಲ್ಲಿಸಿ, ಅಭಿವೃದ್ಧಿಗೆ ಒತ್ತು ನೀಡಿ: ಸಂಸದ ಆಗ್ರಹ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್‌ ಸರ್ಕಾರದಿಂದ ದಕ್ಷಿಣ ಕನ್ನಡದ ಜನತೆಯು ಜಿಲ್ಲೆಗೆ ಕೋಮು ಹಣೆಪಟ್ಟಿ ಕಟ್ಟಿ ನೆಗೆಟಿವ್‌ ಅಪಪ್ರಚಾರ ಮಾಡುವುದನ್ನು ಕೊನೆಗಾಣಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಶಾಶ್ವತ ಕಾರ್ಯಯೋಜನೆಗಳನ್ನು ನಿರೀಕ್ಷೆ ಮಾಡುತ್ತಿದೆ ಎಂದು ಸಂಸದ ಕ್ಯಾ. ಬ್ರಿಜೇಶ್‌ ಚೌಟ (Captain Brijesh Chowta) ಹೇಳಿದ್ದಾರೆ.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಮಂಗಳೂರು ಪ್ರಸ್ತುತ ನಕಾರಾತ್ಮಕ ವಿಚಾರಕ್ಕೆ ರಾಷ್ಟ ಮಟ್ಟದಲ್ಲಿ ಸುದ್ದಿಯಾಗುವ ಸಂದಿಗ್ಧ ಸಂದರ್ಭದಲ್ಲಿ ದಕ್ಷಿಣ ಕನ್ನಡಕ್ಕೆ ಆಗಮಿಸುತ್ತಿರುವ ಸಿದ್ದರಾಮಯ್ಯನವರೂ ಗೃಹ ಸಚಿವರ ಹಾದಿಯನ್ನೇ ಅನುಸರಿಸುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಬಳಿ ಉದ್ದೇಶಪೂರ್ವಕವಾಗಿ ಮಾತುಕತೆ ನಡೆಸದೆ, ಹೊಣೆಗಾರಿಕೆ ಇಲ್ಲದಂತೆ ‘ಕೇವಲ ಬಂದ ಪುಟ್ಟ ಹೋದ ಪುಟ್ಟ’ ಎಂಬಂತೆ ಬಂದು ಹೋಗುತ್ತಿರುವುದು ಎಷ್ಟು ಸರಿ? ಹಾಗಾದರೆ ಕಾಂಗ್ರೆಸ್ ಪಕ್ಷ ಹೆದರುತ್ತಿರುವುದು ಯಾವುದಕ್ಕೆ ಎಂದು ಸಂಸದರು ಪ್ರಶ್ನಿಸಿದ್ದಾರೆ.

Siddaramaiah

ಕಾಂಗ್ರೆಸ್ಸಿನ ರಾಜಕೀಯ ನಾಟಕದಲ್ಲಿ ಮಂಗಳೂರು ಕೇವಲ ಬಲಿಪಶುವೇ? ಮಂಗಳೂರು ಕೇವಲ ಕಾಂಗ್ರೆಸ್‌ನ ರಾಜಕೀಯ ದಾಳವೇ? ಹೂಡಿಕೆ, ಅಭಿವೃದ್ಧಿಯನ್ನು ಕುಂಠಿತಗೊಳಿಸಿ ಇಲ್ಲಿನ ಶಾಂತಿ ಕದಡಿ, ಚುನಾವಣಾ ಲಾಭಕ್ಕಾಗಿ ಕಮ್ಯೂನಲ್ ಹಣೆಪಟ್ಟಿ ಹಚ್ಚಲು ಈ ಪ್ರದೇಶವನ್ನು ಬಳಸಲಾಗುತ್ತಿದೆಯೇ? ದಶಕಗಳಿಂದಲೂ ಮಂಗಳೂರು ಕೋಮು ಹಣೆಪಟ್ಟಿಯಿಂದ ನಲುಗಿ ಹೋಗಿದೆ. ಇದರಿಂದ ಸಾಮಾಜಿಕ, ಆರ್ಥಿಕ ಮತ್ತು ಅಭಿವೃದ್ದಿ ನಷ್ಟವಾಗಿದೆ. ರಾಜಕೀಯ ಪಕ್ಷಗಳು ನಮ್ಮ ನೆಲವನ್ನು ತಮ್ಮ ಪ್ರಯೋಗಾಲಯವಾಗಿ ಬಳಸುವುದು ನಮಗೆ ಬೇಕಿಲ್ಲ. ಮಂಗಳೂರು ಕೇವಲ ಒಂದು ನಗರವಲ್ಲ, ಅದು ರಾಷ್ಟ್ರದ ರಕ್ಷಣೆಗೆ ನಿಂತಿರುವ ಕೋಟೆ. ಈ ಭದ್ರಕೋಟೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಬ್ರಾಂಡ್ ಮಾಡಲು ಗಲಭೆ, ಉದ್ವಿಗ್ನತೆ, ಸೃಷ್ಟಿಲಾಗುತ್ತಿದೆ ಎಂದು ಕ್ಯಾ. ಚೌಟ ಖಡಕ್‌ ಆಗಿ ಹೇಳಿದ್ದಾರೆ.

ಕೋಮು-ಸಂಘರ್ಷಕ್ಕೆ ತುಪ್ಪ ಸುರಿದು ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಕಾಂಗ್ರೆಸ್‌ ಪಕ್ಷ ರಾಜಕೀಯ ತಂತ್ರಗಾರಿಕೆಯಾಗಿರದಿದ್ದರೆ, ಖುದ್ದು ಮುಖ್ಯಮಂತ್ರಿಗಳೇ ಈ ಭಾಗದ ಜನರ ಮುಂದೆ ಕುಳಿತು ಅವರ ನಿಜವಾದ ಸಮಸ್ಯೆಗಳನ್ನು ಆಲಿಸುವ ಧೈರ್ಯವನ್ನು ತೋರಿಸಲಿ. ಈ ಕರಾವಳಿ ಭಾಗದ ಬಹುವರ್ಷಗಳಿಂದ ಬಗೆಹರಿಯದೆ ಬಾಕಿಯಾಗಿರುವ ಬೇಡಿಕೆಗಳು-ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಹುಡುವ ಕಾರ್ಯಯೋಜನೆಗಳನ್ನು ರೂಪಿಸಲಿ. ಅದುಬಿಟ್ಟು ಇಲ್ಲಿಗೆ ಬಂದು ಬರೀ ತುಷ್ಟೀಕರಣದ ಭಾಷಣ ಬಿಗಿದು ಒಂದೇ ಮತೀಯರ ಓಲೈಗೆ ರಾಜಕಾರಣಕ್ಕೆ ಯತ್ನಿಸುವುದು ಬೇಡ ಎಂದು ಕಿವಿಮಾತು ಹೇಳಿದ್ದಾರೆ.

BRIJESH CHOUTA 1

ಕಾಂಗ್ರೆಸ್‌ ಪಕ್ಷವು ದಶಕಗಳಿಂದ ಕರಾವಳಿಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಕೋಮು ಎನ್ನುವ ನೆಗೆಟಿವ್‌ ಬ್ರಾಂಡಿಂಗ್‌ನ್ನು ಮಾಡುತ್ತಿರುವುದನ್ನು ನಾನು ಈ ಹಿಂದೆಯೂ ಉಲ್ಲೇಖಿಸಿದ್ದೇನೆ. ಈ ಕಾರಣಕ್ಕೆ ಕಾಂಗ್ರೆಸ್‌ನವರ ಸ್ವಾರ್ಥ ರಾಜಕೀಯ ಹಿತಾಸಕ್ತಿಗಳ ಮುಂದೆ ಕರಾವಳಿ ಭಾಗದ ಜನರ ನಿಜವಾದ ಆಸಕ್ತಿ, ಅವರ ಕುಂದು-ಕೊರತೆಗಳು ಮಹತ್ವ ಕಳೆದುಕೊಂಡು ಮರೆಯಾಗಿ ಹೋಗುತ್ತಿವೆ ಎಂದು ಕ್ಯಾ. ಚೌಟ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರವು ಸಹಕಾರಿ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುವಾಗ, ಆ ಬಗ್ಗೆ ಮೊದಲು ಟೀಕಿಸುವುದು ಕಾಂಗ್ರೆಸ್ ಪಕ್ಷ. ಇದು ಕರ್ನಾಟಕದಲ್ಲಿಯೂ ವಿರೋಧ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಪ್ರತಿಪಕ್ಷಗಳನ್ನೇ ಒಪ್ಪಿಕೊಳ್ಳುವುದಕ್ಕೆ ರೆಡಿಯಿಲ್ಲದ ಈ ಕಾಂಗ್ರೆಸ್‌ ಸರ್ಕಾರದಿಂದ ನಾವು ನಿರಂಕುಶ ಆಡಳಿತವನ್ನು ನೋಡಬೇಕಾಗುತ್ತದೆ. ಹೀಗಿರುವಾಗ, ಇದು ಪ್ರಜಾಪ್ರಭುತ್ವವಲ್ಲ; ಬದಲಿಗೆ ದುರಾಡಳಿತದ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರೀಯ ಭದ್ರತೆ ಅಪಾಯದಲ್ಲಿರುವಾಗ ರಾಜ್ಯ ಸರ್ಕಾರಗಳು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯಂಥ ಕೇಂದ್ರ ಸಂಸ್ಥೆಗಳಿಂದ ಸಹಾಯ ಪಡೆಯಲು ಹಿಂಜರಿಯಬಾರದು ಎಂಬುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಸಹಕಾರಿ ಆಡಳಿತವಿರಬೇಕೆ ಹೊರತು ಸ್ಪರ್ಧಾತ್ಮಕ ಅಥವಾ ಸಂಘರ್ಷದ ಆಡಳಿತವಲ್ಲ. ಪಕ್ಷಗಳು ರಾಜಕೀಯವಾಗಿ ಭಿನ್ನವಾಗಿರಬಹುದು. ಆದರೆ, ರಾಷ್ಟ್ರೀಯ ಭದ್ರತೆಯ ವಿಚಾರಗಳು ಬಂದಾಗ, ಎಲ್ಲರೂ ಒಟ್ಟಾಗಿ ದೇಶದ ಹಿತಾಸಕ್ತಿ, ಭದ್ರತೆಯನ್ನು ಕಾಪಾಡುವ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

siddaramaiah parameshwar

ಜಿಲ್ಲೆಯಲ್ಲಿ ಸಂದಿಗ್ಧ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿಯೂ ರಾಜ್ಯದ ಮುಖ್ಯಮಂತ್ರಿಯಾಗಲಿ, ಗೃಹ ಸಚಿವರಾಗಲಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಕೇಂದ್ರ ಸರ್ಕಾರದ ಜಿಲ್ಲೆಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ. ಶಾಂತಿ-ಸುವ್ಯವಸ್ಥೆ ಕಾಪಾಡುವ ವಿಚಾರವಾಗಿ ನಡೆಸಿದ ಸಭೆಯಲ್ಲಿ ಈ ಭಾಗದ ಶಾಸಕರು ಅಥವಾ ಸಂಸದನಾದ ನನ್ನನ್ನು ಆಹ್ವಾನಿಸದೆ ಪ್ರಜಾಪ್ರಭುತ್ವ ವ್ಯವಸ್ಥೆಗಷ್ಟೇ ಅಥವಾ ಬಿಜೆಪಿ ಪಕ್ಷಕ್ಕೆ ಮಾತ್ರ ಕಾಂಗ್ರೆಸ್‌ ಅವಮಾನಿಸಿಲ್ಲ. ಈ ಭಾಗದ ಜನರ ಪ್ರಾತಿನಿಧ್ಯಕ್ಕೂ ಮಸಿ ಬಳಿಯುವ ಕೆಲಸವನ್ನು ಕಾಂಗ್ರೆಸ್‌ ಮಾಡಿದೆ ಎಂದು ದೂರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಂಗಳೂರು ಭೇಟಿಯು ಕೇವಲ ಸಾಂಕೇತಿಕ ಹಾಗೂ ರಾಜಕೀಯ ಭೇಟಿಯಾಗಬಾರದು. ಇಲ್ಲಿನ ಜನರಿಗೆ ನಿಮ್ಮ ಓಲೈಕೆ ರಾಜಕಾರಣ ಭಾಷಣ ಅಥವಾ ತುಷ್ಟೀಕರಣ ನೀತಿಗಳ ಹೇರಿಕೆಯ ಆಡಳಿತ ಬೇಕಾಗಿಲ್ಲ. ಬದಲಿಗೆ ಜಿಲ್ಲೆಯಲ್ಲಿ ಉದ್ಯೋಗ, ಶಾಂತಿ, ಗೌರವ ಹಾಗೂ ಸಮಗ್ರ ಬೆಳವಣಿಗೆಗಳಿಗೆ ಪೂರಕವಾಗುವ ಕಾರ್ಯಕ್ರಮಗಳು-ಶಾಶ್ವತ ಯೋಜನೆಗಳು ಬೇಕಿದೆ. ಹೀಗಿರುವಾಗ, ಈ ಕಾಂಗ್ರೆಸ್‌ ಸರ್ಕಾರದಿಂದ ಹಾಗೂ ಇಲ್ಲಿನ ಕಾಂಗ್ರೆಸ್‌ ನಾಯಕರಿಂದ ಉತ್ತರ ಬೇಕಿದೆ. ಆದರೆ, ಅದು ಕೇವಲ ಭಾಷಣಗಳಿಂದ ಅಲ್ಲ, ಬದಲಿಗೆ ಕ್ರಿಯೆಯಿಂದ ಮಾಡಿ ತೋರಿಸುವ ಬದ್ಧತೆ, ಇಚ್ಛಾಶಕ್ತಿಯನ್ನು ಸಿದ್ದರಾಮಯ್ಯ ಸರ್ಕಾರ ತೋರಿಸಲಿ ಎಂದು ಹೇಳಿದ್ದಾರೆ.

ಎನ್ಐಎ ತನಿಖೆಗೆ ನೀಡಲು ಭಯವೇಕೆ?
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಸಚಿವ ದಿನೇಶ್ ಗುಂಡೂರಾವ್ ಅವರು ಎನ್ಐಎ ತನಿಖೆಗೆ ನೀಡಲು ಸಾಧ್ಯವಿಲ್ಲ ಎಂದಿರುವುದು ಯಾಕೆ? ಆರೋಪಿಗಳನ್ನು ಬಂಧಿಸುವ ಮುನ್ನವೇ ಸ್ವೀಕರ್ ಖಾದರ್ ಅವರು ಆರೋಪಿಗಳಿಗೆ ಕ್ಲೀನ್ ಚಿಟ್ ಕೊಟ್ಟದ್ದು ಯಾಕೆ? ಹಿಂದೂ ಸಮಾಜವನ್ನು ಭಯ-ಭೀತಗೊಳಿಸುವಂತಹ ಭೀಕರ ಹತ್ಯೆ ಇದಾಗಿರುವಾಗ ರಾಷ್ಟ್ರ ವಿರೋಧಿ ಶಕ್ತಿಗಳು ಮತ್ತು ಇತರ ಹಲವು ಆಯಾಮಗಳು ಇದರಲ್ಲಿ ಸೇರಿರುವ ಸಾಧ್ಯತೆ ಇರುವುದರಿಂದ ಎನ್ಐಎ ತನಿಖೆ ನೀಡಲು ಕಾಂಗ್ರೆಸ್ ಭಯಪಡುತ್ತಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.

Share This Article