– ಸದ್ಯಕ್ಕೆ ಗುಟ್ಟು ಬಿಡದ ಹೈಕಮಾಂಡ್
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಕುರ್ಚಿ ಕದನ ಆರಂಭವಾಗಿದೆ. ಸಂಪುಟ ಪುನರ್ ರಚನೆ ಮೂಲಕ ಸಿಎಂ ಸ್ಥಾನ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಶನಿವಾರ ರಾಹುಲ್ ಗಾಂಧಿಯನ್ನು ಸಿಎಂ ಭೇಟಿಯಾಗಿದ್ದರು. ಈ ವೇಳೆ, ಎಐಸಿಸಿ ಅಧ್ಯಕ್ಷ ಖರ್ಗೆಯನ್ನು ಭೇಟಿಯಾಗಲು ರಾಹುಲ್ ಸೂಚಿಸಿದ್ದ ಕಾರಣ ಇವತ್ತು ಸಿದ್ದರಾಮಯ್ಯ ದೆಹಲಿಯಲ್ಲಿ ಖರ್ಗೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಸಂಜೆ 6 ಗಂಟೆಗೆ ಖರ್ಗೆ ಭೇಟಿಯಾದ ಸಿಎಂ, ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಿದ್ದಾರೆ. ಆದರೆ, ಸಿಎಂ ಪ್ರಸ್ತಾಪ ಆಲಿಸಿದ ಖರ್ಗೆ ಸಂಪುಟ ಪುನಾರಚನೆಗೆ ಮಾಡಿಕೊಂಡಿರುವ ತಯಾರಿಗೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಎಷ್ಟು ಸ್ಥಾನ ಬದಲಾವಣೆ ಮಾಡ್ಬೇಕು..? ಯಾರನ್ನು ಬಿಡಬೇಕು..? ಯಾರನ್ನು ಸೇರ್ಪಡೆ ಮಾಡ್ಬೇಕು ಅಂತ ಮಾಹಿತಿ ಪಡೆದಿದ್ದಾರೆ.
ಕೆ.ಸಿ.ವೇಣುಗೋಪಾಲ್-ಸುರ್ಜೇವಾಲಾ ಜೊತೆ ಮಾತಾಡಿ ಹೇಳೋದಾಗಿ ಖರ್ಗೆ ಹೇಳಿದ್ದಾರೆ. ಸದ್ಯಕ್ಕೆ ಸಂಪುಟ ಪುನಾರಚನೆ ಬಗ್ಗೆ ಖರ್ಗೆ ಗುಟ್ಟು ಬಿಟ್ಟು ಕೊಡದೇ.. ಸದ್ಯಕ್ಕೆ ಅನಗತ್ಯ ಗೊಂದಲ ಸೃಷ್ಟಿಸದಂತೆ ಸೂಚನೆ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ 10 ಸಚಿವರನ್ನು ಕೈಬಿಟ್ಟು, ಖಾಲಿ ಇರೋ 2 ಸ್ಥಾನದ ಜೊತೆ ಒಟ್ಟು 12 ಸಚಿವರ ಭರ್ತಿಗೆ ಸಿಎಂ ಕೇಳಿದ್ದಾರೆ ಎನ್ನಲಾಗಿದೆ.
ಸಿಎಂ ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಚಿವರಾದ ಮಹದೇವಪ್ಪ, ಕೃಷ್ಣಬೈರೇಗೌಡ, ಮಾಜಿ ಸಚಿವ ರಾಜಣ್ಣ ಹಾಗೂ ಶಾಸಕರಾದ ಪೊನ್ನಣ್ಣ, ನರೇಂದ್ರಸ್ವಾಮಿ, ಅಶೋಕ್ ಪಟ್ಟಣ ಭೇಟಿ ನೀಡಿ ಸಿಎಂ ಜೊತೆ ಮಾತುಕತೆ ನಡೆಸಿದ್ದರು.
ಸಚಿವ ಸಂಪುಟಕ್ಕೆ ಪರಿಗಣಿಸುವಂತೆ ರಾಜಣ್ಣ ಮನವಿ ಮಾಡಿದ್ದಾರೆ. ಖಾತೆ ಬದಲಾವಣೆಗೆ ನಾನು ಕೇಳಿಲ್ಲ ಅಂತ ಪರಮೇಶ್ವರ್ ಹೇಳಿದರೆ, ಸಂಪುಟ ಪುನಾರಚನೆ ಸಿಎಂ-ಹೈಕಮಾಂಡ್‌ಗೆ ಬಿಟ್ಟ ವಿಷಯ ಅಂತ ಸಚಿವ ಮಹದೇವಪ್ಪ ಹೇಳಿದ್ದಾರೆ.

