ಬೆಂಗಳೂರು: ಯಡಿಯೂರಪ್ಪ ಸೇರಿದಂತೆ ಕೆಲವು ಬಿಜೆಪಿ ಲಿಂಗಾಯತ ನಾಯಕರು ನಮ್ಮ ಸಮುದಾಯದ ವಿಷಯ ಬೇರೆಯವರಿಗೆ ಯಾಕೆ ಎಂದು ಸೆಡ್ಡು ಹೊಡೆದಿದ್ದಕ್ಕೆ ಎದುರೇಟು ನೀಡಲು ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಹೌದು. ಇಂಧನ ಸಚಿವ ಡಿಕೆ ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ಬಳಿಕ ತಣ್ಣಗೆ ಆಗಿದ್ದ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಮತ್ತೆ ಜೀವ ಬಂದಿದ್ದು, ಕಾಂಗ್ರೆಸ್ ಪರ ವಾತಾವರಣ ನಿರ್ಮಾಣವಾಗುವಂತೆ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ.
Advertisement
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಸಂಬಂಧ ಸಭೆ ನಡೆಯಲಿದೆ. ಈ ಸಭೆಯಲ್ಲಿ ವಿವಿಧ ಮಠಾಧೀಶರು, ಸಮಾಜದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ವೀರಶೈವ ಹಾಗೂ ಲಿಂಗಾಯತ ಎಂಬ ಪ್ರತ್ಯೇಕತೆಯ ಗೊಂದಲ ಪರಿಹರಿಸಿಕೊಂಡು ಒಗ್ಗಟ್ಟಾಗಿ ಬನ್ನಿ ಎಂದು ಸಂಪುಟದ ಸಚಿವರೊಬ್ಬರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಸುದ್ದಿ ಸಿಕ್ಕಿದೆ.
Advertisement
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆಗೆ ಕಾಂಗ್ರೆಸ್ ಪಕ್ಷ ಸ್ಪಂದಿಸಿದೆ. ಸರ್ಕಾರದ ನಿಲುವನ್ನು ಸಮರ್ಥಿಸುವಂತಹ ವಾತಾವರಣವನ್ನು ನಿರ್ಮಿಸುವಂತೆ ಲಿಂಗಾಯತ ಸಮುದಾಯದ ಪ್ರಭಾವಿ ಸಚಿವರೊಬ್ಬರು ಮತ್ತು ಮಾಜಿ ಸಚಿವರೊಬ್ಬರಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Advertisement
ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಈಡೇರಿಕೆ ಸಂಬಂಧ ಸಂಪೂರ್ಣ ಕ್ರೆಡಿಟ್ ಕಾಂಗ್ರೆಸ್ ಪಕ್ಷಕ್ಕೆ ಸಿಗಬೇಕು. ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ನಮ್ಮ ಜೊತೆಗಿದೆ ಎಂಬ ಅಭಿಪ್ರಾಯ ಸರ್ವಸಮ್ಮತವಾಗಿ ಮೂಡವಂತೆ ರೂಪಿಸಿ ಎಂದು ಸಿಎಂ ಇಬ್ಬರು ನಾಯಕರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.