– ನಾನು 30 ವರ್ಷಗಳಿಂದ ಡಯಾಬಿಟಿಸ್ ಮ್ಯಾನೇಜ್ ಮಾಡುತ್ತಿದ್ದೇನೆ
ಬೆಂಗಳೂರು: ನನಗೂ 30 ವರ್ಷಗಳಿಂದ ಡಯಾಬಿಟಿಸ್ (Diabetes) ಇದೆ, ನಾನು ಮ್ಯಾನೇಜ್ ಮಾಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಮನೆ ಮನೆಗೆ ಆರೋಗ್ಯ (Health) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ವೇಳೆ, ನೀವು ಡಯಾಬಿಟಿಸ್‌ನ್ನು ನಿರ್ಲಕ್ಷಿಸಿದರೆ ತುಂಬಾ ಸಮಸ್ಯೆ ಆಗುತ್ತದೆ. ಡಯಾಬಿಟಿಸ್‌ನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯುತ್ತೇವೆ. ಇದು ಅಶೋಕ್ ಪಟ್ಟಣ್‌ಗೂ ಇದೆ. ಅವರು ನಿತ್ಯವೂ ಸೈಕಲ್ ಹೊಡೀತಾರೆ. ಈ ರೀತಿ ಮ್ಯಾನೇಜ್ ಮಾಡುತ್ತಾರೆ ಎಂದರು.
26% ಜನರಿಗೆ ಬಿಪಿ, 17% ರಷ್ಟು ಜನರಿಗೆ ಸಕ್ಕರೆ ಖಾಯಿಲೆ ಇದೆ. ಸರ್ಕಾರವೇ ಮನೆ ಮನೆಗೆ ಹೋಗಿ ತಪಾಸಣೆ ಮಾಡಬೇಕು. ಅವರಿಗೆ ಉಚಿತವಾಗಿ ಔಷಧಿ ಕೊಡಬೇಕು. ಮೊದಲ ಹಂತದಲ್ಲಿ ಕೋಲಾರ (Kolar) ಜಿಲ್ಲೆಯಲ್ಲಿ ಈ ಯೋಜನೆ ಪ್ರಾರಂಭ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಯೋಜನೆ ಪ್ರಾರಂಭ ಮಾಡುತ್ತೇವೆ ಎಂದಿದ್ದಾರೆ.
ವಾಸಿಯಾಗದಿರೋ ಕಾಯಿಲೆ ಕ್ಯಾನ್ಸರ್. ಅದು ಸರಿಯಾದ ಸಮಯದಲ್ಲಿ ಗೊತ್ತಾದ್ರೆ ಇದಕ್ಕೆ ಬೇಗ ಕಡಿವಾಣ ಹಾಕಬಹುದು. ನಾವು ರಾಜ್ಯದ ಜನರ ಆರೋಗ್ಯ ರಕ್ಷಣೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದೇವೆ. ಕೆಲವರು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಾರೆ. ಇನ್ನೊಂದು ವರ್ಗದ ಜನ ಆಸ್ಪತ್ರೆಗೆ ಹೋಗೋದಿಲ್ಲ. ಇದರಿಂದ ಅವರಿಗೆ ಬಿಪಿ, ಶುಗರ್ ಇರುವುದು ಹೇಗೆ ಗೊತ್ತಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.