Bengaluru CityKarnatakaLatest

ಎಲೆಕ್ಷನ್‍ಗೆ ರೆಡಿಯಾದ್ರು ಸಿಎಂ: ಅಭಿವೃದ್ಧಿ ಕೆಲಸಗಳನ್ನು ಜನ್ರಿಗೆ ತಲುಪಿಸಲು ವೆಬ್‍ಸೈಟ್ ಲಾಂಚ್

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸಿಎಂ ಸಿದ್ದರಾಮಯ್ಯ ಸನ್ನದ್ಧರಾಗಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಮುಟ್ಟಿಸಲು ವೆಬ್‍ಸೈಟ್ ಹೊರತಂದಿದ್ದಾರೆ.

“ಪ್ರತಿಬಿಂಬ” ವೆಬ್‍ಸೈಟ್‍ನ್ನು ಇಂದು ಲೋಕಾರ್ಪಣೆ ಮಾಡಲಾಯ್ತು. ವಿಧಾನಸೌಧದಲ್ಲಿ ವೈಬ್ ಸೈಟ್‍ಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ರು. ಕರ್ನಾಟಕ ಸರ್ಕಾರದ ಸಮಗ್ರ ಸಾಧನೆಯ ಕುರಿತು ವೆಬ್‍ಸೈಟ್‍ನಲ್ಲಿ ಮಾಹಿತಿ ಸಿಗಲಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿ ಲಭ್ಯವಾಗಲಿದೆ.

ಈ ವೇಳೆ, ಮಾತನಾಡಿದ ಸಿಎಂ ಸಿದ್ದರಾಮಯ್ಯ, 2013ರ ಚುನಾವಣಾ ಸಂದರ್ಭದಲ್ಲಿ 165 ಭರವಸೆ ನೀಡಿದ್ದೇವೆ. ಅದರಲ್ಲಿ, 125 ಕ್ಕೂ ಹೆಚ್ಚಿನ ಭರವಸೆ ಈಡೇರಿಸಿದ್ದೇವೆ. 5ನೇ ಬಜೆಟ್ ನಲ್ಲಿ ಉಳಿದ ಭರವಸೆಯನ್ನೂ ಈಡೇರಿಸುತ್ತೇವೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ನಮ್ಮ ಎಲ್ಲ ಸಾಧನೆಗಳು ಈ ವೆಬ್ ಸೈಟ್ ನಲ್ಲಿ ಸಿಗಲಿದೆ ಎಂದು ತಿಳಿಸಿದ್ರು.

ಪ್ರತಿಬಿಂಬದ ಉದ್ದೇಶ ಏನು?
* ಸರ್ಕಾರದ ಇಲಾಖೆಗಳ ಪ್ರಮುಖ ಯೋಜನೆಯ ಮಾಹಿತಿ
* ಸಾಧಿಸಲಾಗಿರುವ ಪ್ರಗತಿ ವಿವರ
* ಆಡಳಿತದಲ್ಲಿ ಪಾರದರ್ಶಕ ವೃದ್ಧಿಸುವುದು
* ಆಡಳಿತವನ್ನ ನಿರ್ದಿಷ್ಟ ಗುರಿಯೆಡೆಗೆ ನಿರ್ದೇಶಿಸುವುದು
* ಆಡಳಿತದಲ್ಲಿ ನಿರ್ವಹಣೆ ಮತ್ತು ಪರಿಣಾಮವನ್ನ ಹೆಚ್ಚಿಸುವುದು
* ಪ್ರಮುಖ ಯೋಜನೆಗಳು, ಪ್ರಮುಖ ಕಾರ್ಯಕ್ರಮಗಳು
* ಪ್ರಮುಖ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ
* ಚುನಾವಣೆ ಪ್ರಣಾಳಿಕೆ ಈಡೇರಿಕೆ ಕುರಿತು ಮಾಹಿತಿ
* ಇಲಾಖೆಗಳ ಆಯವ್ಯಯದ ಬಗ್ಗೆ ಮಾಹಿತಿ, ಯೋಜನೆಗಳು
* ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರ
* ಸಮಸ್ಯೆ ಬಗೆಹರಿಸುವುದು ಪ್ರಮುಖ ಉದ್ದೇಶ

ಪ್ರತಿಕ್ರಯೆ ನೀಡಲ್ಲ: ಹಿರಿಯ ಮುಖಂಡ ಎಸ್ ಎಂ ಕೃಷ್ಣ ಬಿಜೆಪಿ ಸೇರ್ಪಡೆಯಾಗುವ ವಿಚಾರಕ್ಕೆ ಪ್ರತಿಕ್ರಿಯಿಸಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಿಮ್ಮ ಕಾರಣದಿಂದಲೇ ಎಸ್‍ಎಂಕೆ ಕಾಂಗ್ರೆಸ್ ಬಿಡುತ್ತಿದ್ದಾರೆ.ಐ ಡೊಂಟ್ ರಿಯಾಕ್ಟ್ ಅಂತಾ ಸಿಎಂ ಸಿದ್ದರಾಮಯ್ಯ ಖಾರವಾಗಿ ಹೇಳಿದ್ರು.

ಕಾರ್ಯಕ್ರಮದಲ್ಲಿ ಸಚಿವರಾದ ಜಯಚಂದ್ರ, ಕಾಗೋಡು ತಿಮ್ಮಪ್ಪ, ಆಂಜನೇಯ, ಪ್ರಮೋದ್ ಮಧ್ವರಾಜ್, ಪ್ರಿಯಾಂಕ್ ಖರ್ಗೆ ಸೇರಿ ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವೆಬ್‍ಸೈಟ್‍ನಲ್ಲಿ ಏನೇನು ಸಿಗುತ್ತೆ? ವೆಬ್‍ಸೈಟ್ ಹೇಗೆ ಮಾಹಿತಿಯನ್ನು ಅಪ್‍ಡೇಟ್ ಮಾಡುತ್ತೇವೆ ಎನ್ನುವುಕ್ಕೆ ಮುಖ್ಯಮಂತ್ರಿಗಳ ಅಧಿಕೃತ ಫೇಸ್‍ಬುಕ್ ಪುಟದಲ್ಲಿ ವಿವರಣೆ ನೀಡಲಾಗಿದ್ದು, ಆ ಯಥಾವತ್ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಜನತೆಗೆ ಚುನಾವಣೆ ವೇಳೆ ನೀಡಿದ್ದ ನುಡಿದಂತೆ ನಡೆಯುವ ಭರವಸೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ಚುನಾವಣಾ ಪ್ರಣಾಳಿಕೆ ವೇಳೆ ನಾವು ನೀಡಿದ್ದ ಭರವಸೆಗಳು ಹಾಗೂ ಮಾಡಿರುವ ಸಾಧನೆಗಳನ್ನು ಈ ರಾಜ್ಯದ, ದೇಶದ ಜನರ ಮುಂದೆ ವಿನಮ್ರವಾಗಿ ಇಡುವ ಪ್ರಯತ್ನವಾಗಿ `ಪ್ರತಿಬಿಂಬಮುಖ್ಯಮಂತ್ರಿಯವರ ಮಾಹಿತಿಕೋಶ’ವನ್ನು ಇಂದು ಲೋಕಾರ್ಪಣೆ ಮಾಡಿದ್ದೇನೆ. ಅಂತರ್ಜಾಲ ಅಧರಿತ ಈ ಮಾಹಿತಿಕೋಶವು ಎಲ್ಲರಿಗೂ ಮುಕ್ತವಾಗಿ ಲಭ್ಯವಿರಲಿದೆ.

ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ತರುವ ನಿಟ್ಟಿನಲ್ಲಿ ಪ್ರತಿಬಿಂಬ ಮಾಹಿತಿಕೋಶವು ಮಹತ್ವದ ಹೆಜ್ಜೆಯಾಗಿದೆ. ಚುನಾವಣಾ ಪ್ರಣಾಳಿಕೆ ವೇಳೆ ನಾವು ನೀಡಿದ್ದ 165 ಆಶ್ವಾಸನೆಗಳಲ್ಲಿ 125 ಆಶ್ವಾಸನೆಗಳನ್ನು ಈ ನಾಲ್ಕು ವರ್ಷದ ಅವಧಿಯಲ್ಲಿ ಈಡೇರಿಸಿದ್ದೇವೆ. ಉಳಿದ ಆಶ್ವಾಸನೆಗಳನ್ನು ಮುಂದಿನ ಒಂದು ವರ್ಷದ ಅವಧಿಯಲ್ಲಿ ಈಡೇರಿಸಲಿದ್ದೇವೆ. ಜನ ಮತದಾನದ ಮೂಲಕ ನಮಗೆ ಅಧಿಕಾರವನ್ನು ನೀಡಿದ ಮೇಲೆ ಅವರಿಗೆ ಉತ್ತರದಾಯಿಗಳಾಗಿರಬೇಕಾದುದು ನಮ್ಮ ಕರ್ತವ್ಯ. ಜನರ ನಿರೀಕ್ಷೆಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ. ನಾವು ನಡೆಸುತ್ತಿರುವ ಆಡಳಿತದ ಬಗ್ಗೆ ತಿಳಿಯುವ ಅಧಿಕಾರ ಜನರಿಗೆ ಇರುತ್ತದೆ. ಈ ಎಲ್ಲ ಆಶಯಗಳನ್ನು ಪ್ರತಿಬಿಂಬ ಮಾಹಿತಿಕೋಶವು ಈಡೇರಿಸಲಿದೆ.

ಪ್ರತಿಬಿಂಬ ಮಾಹಿತಿಕೋಶವು ಆಡಳಿತಾತ್ಮಕವಾಗಿ ಸರ್ಕಾರಕ್ಕೆ ವ್ಯಾಪಕವಾಗಿ ನೆರವಾಗಲಿದೆ. ನನ್ನನ್ನೂ ಸೇರಿದಂತೆ ಎಲ್ಲ ಸಚಿವರು, ಸಚಿವಾಲಯದ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ತಮ್ಮ ಬೆರಳ ತುದಿಯಲ್ಲಿ ಇಲಾಖಾವಾರು ಮಾಹಿತಿಗಳನ್ನು ಪಡೆಯಬಹುದಾಗಿದೆ. ಸರ್ಕಾರದ ಪ್ರಮುಖ ಕಾರ್ಯಕ್ರಮಗಳು, ಇಲಾಖಾವಾರು ಇರಿಸಿಕೊಂಡಿದ್ದ ಗುರಿಗಳು, ಇವುಗಳಿಗೆ ನೀಡಲಾದ ಅನುದಾನ, ಅದರ ಬಳಕೆ, ಗುರಿ ಈಡೇರಿಕೆಯಲ್ಲಿ ಮಾಡಲಾದ ಸಾಧನೆಗಳು ಇದೆಲ್ಲವೂ ಮಾಹಿತಿಕೋಶದಲ್ಲಿ ಲಭ್ಯವಿರಲಿದೆ, ಅಲ್ಲದೆ ಪ್ರತಿ ತಿಂಗಳ ಹತ್ತರಂದು ಇಲಾಖಾವಾರು ಮಾಹಿತಿಗಳನ್ನು ಪರಿಷ್ಕರಿಸಲಾಗುತ್ತದೆ. ಮಾಸಿಕ, ತ್ರೈಮಾಸಿಕ, ವಾರ್ಷಿಕ ಸಾಧನೆಯ ಮಾಹಿತಿ ಮಾತ್ರವೇ ಅಲ್ಲದೆ ಹಿಂದಿನ ವರ್ಷದ ಹೋಲಿಕೆಯಲ್ಲಿ ತುಲನಾತ್ಮಕವಾಗಿ ಮಾಡಲಾದ ಸಾಧನೆಯೂ ಲಭ್ಯವಿರಲಿದೆ. ಈ ಎಲ್ಲ ಮಾಹಿತಿಗಳನ್ನು ಬಳಸಿಕೊಂಡು ಆಡಳಿತವನ್ನು ಸ್ಪಂದಶೀಲನವಾಗಿ, ಗುರಿಸಾಧನೆಯೆಡೆಗೆ ಮುನ್ನೆಡೆಸುವುದು ಸಾಧ್ಯವಾಗಲಿದೆ.

ಪ್ರತಿಬಿಂಬ ಮಾಹಿತಿಕೋಶಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ: http://pratibimba.karnataka.gov.in/

Leave a Reply

Your email address will not be published. Required fields are marked *

Back to top button