ಬೆಂಗಳೂರು: ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸವಿರುಚಿ ಸಂಚಾರಿ ಕ್ಯಾಂಟೀನ್ ಯೋಜನೆಯನ್ನ ಸರ್ಕಾರ ಆರಂಭಿಸಿದೆ.
ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಸವಿರುಚಿ ಸಂಚಾರಿ ಕ್ಯಾಂಟೀನ್ ಗೆ ಚಾಲನೆ ನೀಡಿದರು. ಪ್ರತಿ ಜಿಲ್ಲೆಗೆ ಒಂದರಂತೆ ಈ ಸಂಚಾರಿ ಕ್ಯಾಂಟಿನ್ ನೀಡಲಾಗುತ್ತಿದೆ. ಸ್ತ್ರೀ ಶಕ್ತಿ ಒಕ್ಕೂಟ ಮಹಿಳೆಯರು ಮಾಡಿದ ಪ್ರಾದೇಶಿಕ ಆಹಾರಗಳನ್ನ ಜನರಿಗೆ ಉಣಬಡಿಸುವುದು ಈ ಸವಿರುಚಿ ಸಂಚಾರಿ ಕ್ಯಾಂಟೀನ್ ಉದ್ದೇಶವಾಗಿದೆ. ಕಡಿಮೆ ದರದಲ್ಲಿ ಆ ಪ್ರಾಂತ್ಯದ ವಿಶಿಷ್ಟವಾದ ಆಹಾರಗಳನ್ನ ಜನರಿಗೆ ಉಣಬಡಿಸಲಾಗುತ್ತದೆ. ಈ ಮೂಲಕ ಮಹಿಳೆಯನ್ನ ಆರ್ಥಿಕವಾಗಿ ಸದೃಢಗೊಳಿಸುವುದಕ್ಕೆ ಸರ್ಕಾರ ಮುಂದಾಗಿದೆ.
ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ತಾಲೂಕು ಕೇಂದ್ರಗಳಿಗೂ ವಿಸ್ತರಿಸುವ ಚಿಂತನೆ ಮಾಡಲಾಗಿದೆ. ಆಹಾರಕ್ಕೆ ಬೇಡಿಕೆ ಇರುವಂತಹ ಸಭೆ, ಸಮಾರಂಭ, ಪ್ರದರ್ಶನದಂತಹ ಕಾರ್ಯಕ್ರಮಗಳು, ಕೋರ್ಟ್, ಕಚೇರಿಗಳ ಮುಂದೆ ಸಂಚಾರಿ ಕ್ಯಾಂಟೀನ್ ನಡೆಸಲು ಅವಕಾಶ ನೀಡಲಾಗಿದೆ.
ವಿಶೇಷವಾಗಿ ಪಾದೇಶಿಕ ಆಹಾರ ಪದ್ಧತಿಗೆ ಅನುಸಾರ ಇಲ್ಲಿ ಅಡುಗೆ ತಯಾರಿಸಲಾಗುತ್ತದೆ. ಸ್ಥಳೀಯ ಹೊಟೇಲ್‍ಗಳಲ್ಲಿ ನಿಗದಿ ಪಡಿಸಿರುವ ಬೆಲೆಗಿಂತ 5 ರೂ. ಕಡಿಮೆ ಬೆಲೆ ಊಟ ನೀಡಲಾಗುತ್ತದೆ. ಪ್ರತಿ ಕ್ಯಾಂಟೀನ್ ನಲ್ಲಿ 11 ಮಹಿಳೆಯರು ಕಾರ್ಯನಿರ್ವಹಿಸುತ್ತಾರೆ. ಮನೆಯಲ್ಲಿ ತಯಾರಿಸುವ ಅಡುಗೆಯನ್ನು ನೀಡಲಾಗುತ್ತದೆ.
ಬಡ್ಡಿ ರಹಿತ ಸಾಲ: ಮಹಿಳಾ ಅಭಿವೃದ್ಧಿ ನಿಗಮದಿಂದ 10 ಲಕ್ಷ ರೂ. ಬಡ್ಡಿ ರಹಿತ ಸಾಲದ ಮೂಲಕ ಈ ಕ್ಯಾಂಟೀನ್ ಸ್ಥಾಪಿಸಲು ಅವಕಾಶ ಮಾಡಿಕೊಡಲಾಗಿದೆ. ಕಾರ್ಯಕ್ರಮದಲ್ಲಿ ಸಚಿವೆ ಉಮಾಶ್ರೀ, ಜಾರ್ಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು.