ವಿಜಯಪುರ: ಒಂದರ್ಥದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಉತ್ತರ ಕುಮಾರನ ತರಹ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (KS Eshwarappa) ಲೇವಡಿ ಮಾಡಿದರು.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ (Caste Census) ವಿಚಾರವಾಗಿ ಒಂದರ್ಥದಲ್ಲಿ ಸಿಎಂ ಸಿದ್ದರಾಮಯ್ಯ ಉತ್ತರ ಕುಮಾರನ ತರಹ. ಜಾತಿಗಣತಿ ವರದಿಯನ್ನು ಸಚಿವ ಸಂಪುಟದ ಎದುರು ಇಟ್ಟೇ ಇಡುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಈವರೆಗೂ ಇಟ್ಟಿಲ್ಲ. ಇದೀಗ ಹೊಸ ದಿನಾಂಕ ಸಹ ಪ್ರಕಟಿಸಿದ್ದು, ಅದನ್ನೂ ಕಾಯ್ದು ನೋಡೋಣ. ಈಗಾಗಲೇ ಜಾತಿಗಣತಿ ಮಾಡಲು ನೂರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಕೂಡಲೇ ಅದನ್ನು ಸಚಿವ ಸಂಪುಟದ ಮುಂದೆ ತನ್ನಿ, ಚರ್ಚೆ ಮಾಡಿ ಬಳಿಕ ಬಿಡುಗಡೆ ಮಾಡಿ ಎಂದರು.ಇದನ್ನೂ ಓದಿ: ಬೆಂಗಳೂರಿನಲ್ಲಿ ತಂದೆಯಿಂದಲೇ ಮಗನ ಭೀಕರ ಕೊಲೆ
Advertisement
Advertisement
ರಾಜ್ಯದಲ್ಲಿ ಮಳೆ ಬಂದು ರೈತರು ಸಂಕಷ್ಟದಲ್ಲಿದ್ದಾರೆ. ಯಾವೊಬ್ಬ ಮಂತ್ರಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತಿದ್ದು, ಕಾಂಗ್ರೆಸ್ (Congress) ಅಧಿಕಾರದಲ್ಲಿದೆ ಎಂಬುವುದನ್ನು ಮರೆತಂತಿದೆ. ಹಿಂದುಳಿದವರ, ದಲಿತರ ಅಭಿವೃದ್ಧಿ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದನ್ನು ಮರೆತಿದ್ದಾರೆ. ಈ ಹಿಂದೆ ಬಿಜೆಪಿ (BJP) ಸರ್ಕಾರ ಹಿಂದುಳಿದ ವರ್ಗದ ಇಲಾಖೆಯಿಂದ 1,073 ಯೋಜನೆಗಳನ್ನು ಜಾರಿಗೊಳಿಸಿತ್ತು. ಆ ಯೋಜನೆಗಳನ್ನೆಲ್ಲ ರದ್ದು ಮಾಡಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವಂತೂ ಬಹಿರಂಗವಾಗಿದೆ. ಅಲ್ಲಿನ ಹಣ ನುಂಗಿ ನೀರು ಕುಡಿದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
ವಿಪಕ್ಷದವರ ಮೇಲೆ ಕೇಸ್ ವಿಚಾರ:
ಹಲವಾರು ಹಗರಣ ಮಾಡಿರುವ ಸಿದ್ದರಾಮಯ್ಯವರೇ ಅದಕ್ಕೆ ಪ್ರತಿಯಾಗಿ ವಿರೋಧಿಗಳ ಮೇಲೆ ಕೇಸ್ ಮಾಡುವ ನಿಟ್ಟಿನಲ್ಲಿ ತಲ್ಲೀನರಾಗಿದ್ದಾರೆ. ಅದನ್ನು ಬಿಟ್ಟು ರೈತರು, ಸಾಮಾನ್ಯ ಜನರು, ಹಿಂದುಳಿದ, ದಲಿತರ ಬಗ್ಗೆ ಕಾಳಜಿ ವಹಿಸಬೇಕು. ಏನಾದರೂ ಹೇಳಲು ಹೊರಟರೇ ನಾನು ದೇವರಾಜು ಅರಸು ತರಹ ಎಂದು ಹೇಳುತ್ತಾರೆ. ಹೀಗೆ ಹೇಳುವವರು ಆ ನಿಟ್ಟಿನಲ್ಲಿ ನಡೆದುಕೊಳ್ಳಬೇಕು. ಮಳೆ ಬಂದು ಬೆಳೆ ಹಾಳಾಗಿದೆ. ತಾತ್ಕಾಲಿಕವಾಗಿ ಯಾರಾದರೂ ರೈತರಿಗೆ ಪರಿಹಾರ ಕೊಡಿ. ರಸ್ತೆ, ಚರಂಡಿಗಳನ್ನು ತ್ವರಿತವಾಗಿ ರಿಪೇರಿಗೊಳಿಸಿ ಎಂದು ಕಿಡಿಕಾರಿದರು.
Advertisement
ಹೊಸ ಬ್ರಿಗೇಡ್ ಸ್ಥಾಪನೆ ವಿಚಾರ:
ಈ ಹಿಂದೆ ಕೂಡಲ ಸಂಗಮ ಸ್ವಾಮೀಜಿಯವರು ಹಿಂದುತ್ವದ ರಕ್ಷಣೆಗಾಗಿ ಬ್ರಿಗೇಡ್ ಸ್ಥಾಪಿಸಿ ಎಂದು ಹೇಳಿದ್ದರು. ಅದಕ್ಕಾಗಿ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಹಾಗೂ ಈಶ್ವರಪ್ಪ ಕೈಗೆ ಖಡ್ಗ ಕೊಟ್ಟಿರುವುದಾಗಿ ಹೇಳಿದ್ದರು. ಆ ನಿಟ್ಟಿನಲ್ಲಿ ನೂರಾರು ಸಂತರು ಸೇರಿ ಪ್ರೋತ್ಸಾಹ ನೀಡಿದ ಫಲವಾಗಿ ಇದೀಗ ಸಭೆ ಕರೆಯಲಾಗಿದೆ. ರಾಜ್ಯದ ಎರಡು ಸಾವಿರಕ್ಕೂ ಅಧಿಕ ಪ್ರಮುಖರು ಬಾಗಲಕೋಟೆಯಲ್ಲಿ ಸಭೆ ಸೇರುತ್ತಿದ್ದಾರೆ. ಸಭೆ ಸೇರಿ ಬ್ರಿಗೇಡ್‌ಗೆ ಯಾವ ಹೆಸರಿಡುವುದು ಎಂಬ ತೀರ್ಮಾನ ಕೈಗೊಳ್ಳುತ್ತಾರೆ. ಸಭೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಸಹ ಪಾಲ್ಗೊಳ್ಳಲಿದ್ದಾರೆ. ಯತ್ನಾಳ್ ಅವರೇ ಇಂಥದ್ದೊಂದು ವಿಚಾರ ಪ್ರಸ್ತಾಪಿಸುತ್ತಾರೆ ಎಂದು ನನಗೆ ಕಲ್ಪನೆ ಇರಲಿಲ್ಲ. ಸಾಧು ಸಂತರೇ ಇದರ ನೇತೃತ್ವ ವಹಿಸಲಿದ್ದು, ಅವರ ಅಪೇಕ್ಷೆ ಮೇರೆಗೆ ಬ್ರಿಗೇಡ್ ನಡೆಯುತ್ತಿದೆ ಎಂದರು.
ಓಪನ್ ಆಗಿ ತಲ್ವಾರ, ಪೆಟ್ರೋಲ್ ಬಾಂಬ್ ತಂದು ಹಿಂದೂಗಳ ಅಂಗಡಿ ಮುಂಗಟ್ಟು ಮೇಲೆ ದಾಳಿ ನಡೆಸುತ್ತಿದ್ದಾರೆ. ಗಣಪತಿ ವಿಚಾರದಲ್ಲಿ ಗಲಭೆಯಾದರೆ ಸರ್ಕಾರ ಹಿಂದೂಗಳ ಮೇಲೆಯೇ ಪ್ರಕರಣ ದಾಖಲಿಸುತ್ತದೆ. ಹೀಗಾಗಿ ಸಮಸ್ತ ಹಿಂದೂ ಸಮಾಜದ ರಕ್ಷಣೆಗೆ ಬ್ರಿಗೇಡ್ ಸಿದ್ಧವಾಗುತ್ತಿದೆ. ಬಿಜೆಪಿ ಶುದ್ಧೀಕರಣ ಆಗಬೇಕೆಂಬುದು ಬಹಳಷ್ಟು ಜನರ ಮನದಿಂಗಿತವಾಗಿದೆ. ರಾಜ್ಯದಿಂದ ದೆಹಲಿ ಮಟ್ಟದವರೆಗೆ ಈ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಸಿದರು.
ಸರ್ಕಾರವು ತಮಗೆ ಬೇಕಾದ ಹಿರಿಯರನ್ನು ಇಟ್ಟುಕೊಂಡು ಬೇಡವಾದ ಹಿರಿಯರನ್ನು ಹೊರ ಹಾಕುತ್ತಿದ್ದಾರೆ. ಇಲ್ಲಿ ಸ್ವಜನ ಪಕ್ಷಪಾತ ನಡೆದಿದೆ. ನಾವು ಅಪೇಕ್ಷೆಪಟ್ಟಂತೆ ರಾಜ್ಯದಲ್ಲಿ ಹಿಂದುತ್ವ ಇಲ್ಲ. ಇದರಿಂದ ಸಾಕಷ್ಟು ಜನರಿಗೆ ನೋವಿದೆ. ನಾನು ಹಿಂದುತ್ವದಿಂದಲೇ ಮೇಲೆ ಬಂದಿದ್ದೇನೆ. ಹೀಗಾಗಿ ಬ್ರಿಗೇಡ್ ಮಾಡಿ ಆ ಮೂಲಕ ಹಿಂದುತ್ವದ ಋಣ ತೀರಿಸಲು ಮುಂದಾಗಿದ್ದೇನೆ. ಹಿಂದುತ್ವ ರಕ್ಷಣೆಗೆ ಸಿದ್ದರಾಮಯ್ಯ ನಿಲ್ಲಲಿ. ಯಾವ ವ್ಯಕ್ತಿ ಕುಂಕುಮ, ಕೇಸರಿ ಕಂಡರೆ ಮೈಮೇಲೆ ಭೂತ ಬಂದವರಂತೆ ಆಡುತ್ತಾರೆ ಅವರೆ ರಕ್ಷಣೆಗೆ ನಿಲ್ಲಲಿ. ಹಗರಣ ಮೈಮೇಲೆ ಬರುತ್ತಿದ್ದಂತೆ ಸೌದತ್ತಿ ಯಲ್ಲಮ್ಮಗೂ ಹೋಗುತ್ತಾರೆ, ಚಾಮುಂಡಿಗೂ ಹೋಗುತ್ತಾರೆ. ಎದೆಯಲ್ಲಿ ಇಷ್ಟಾದರೂ ಹಿಂದುತ್ವ ಇದೆ ಎಂಬುದಕ್ಕೆ ನಿಮಗೆ ಧನ್ಯವಾದ ತಿಳಿಸುತ್ತೇನೆ. ಹಿಂದುತ್ವ ಉಳಿಸಿದರೆ ಚಾಮುಂಡಿ ನಿಮ್ಮನ್ನು ಉಳಿಸುತ್ತಾಳೆ. ಇದು ನಾಟಕೀಯವಾಗಿದ್ದರೆ ಯಲ್ಲಮ್ಮ, ಚಾಮುಂಡಿಯೇ ಶಿಕ್ಷೆ ಕೊಡಿಸುತ್ತಾರೆ ಎಂದು ಹೇಳಿದರು.
ಜೋಶಿ ಕುಟುಂಬದ ಮೇಲಿನ ಆಪಾದನೆ ವಿಚಾರ:
ಪ್ರಹ್ಲಾದ್ ಜೋಶಿ ಅವರ ಕುಟುಂಬಸ್ಥರ ಮೇಲೆ ಆಪಾದನೆ ಬಂದಿರುವುದು ದುರ್ದೈವ. ತಕ್ಷಣ ತನಿಖೆ ಆಗಬೇಕು. ತಲೆ ಮರೆಸಿಕೊಳ್ಳುವ ಬದಲು ಸ್ಪಷ್ಟನೆ ಕೊಡಬಹುದಿತ್ತು. ಆದರೆ ಯಾಕೆ ತಲೆ ಮರೆಸಿಕೊಂಡರು ಗೊತ್ತಿಲ್ಲ. ಬೇಲಿನೆ ಎದ್ದು ಹೊಲ ಮೇಯ್ದಂತೆ ಆಗಬಾರದು. ಹಿಂದುತ್ವದ ಹೆಸರು ಹೇಳಿಕೊಂಡು ಮಾಡಬಾರದ್ದನ್ನು ಮಾಡುವವರ ಬಗ್ಗೆ ಸಮಾಜ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.ಇದನ್ನೂ ಓದಿ: 700 ಶಾರ್ಪ್ ಶೂಟರ್ಸ್.. ಸ್ಟಾರ್ ನಟ, ಜನಪ್ರಿಯ ವ್ಯಕ್ತಿಗಳೇ ಟಾರ್ಗೆಟ್ – ಮುಂಬೈ ಭೂಗತ ಜಗತ್ತಿಗೆ ಬಿಷ್ಣೋಯ್ ಗ್ಯಾಂಗ್ ಎಂಟ್ರಿ?