ಕೊಪ್ಪಳ: ಬರೀ ಸುಳ್ಳುಗಳನ್ನು ಹೇಳುತ್ತಾ ಬೊಗಳೆ ಬಿಡುತ್ತಿರೋ ಸಿಎಂ ಸಿದ್ದರಾಮಯ್ಯ ಒಬ್ಬ ಬೊಗಳೆ ದಾಸಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದ ಗಂಗಾವತಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ನಾನು ಲಂಚ ತೆಗೆದುಕೊಂಡಿದ್ದನ್ನು ಅವರು ನೋಡಿದ್ದಾರಾ? ಅಥವಾ ನಾನು ಲಂಚ ತೆಗೆದುಕೊಂಡಿರುವ ಕುರಿತಂತೆ ಯಾವ ನ್ಯಾಯಾಲಯ ಹೇಳಿದೆ? ನನ್ನ ಮೇಲೆ 42 ಕೇಸ್‍ಗಳಿವೆ ಅಂತ ಹೇಳುವ ಸಿದ್ದರಾಮಯ್ಯ ಅವುಗಳ ಪೈಕಿ 10 ಕೇಸ್‍ಗಳನ್ನಾದರೂ ಯಾವುವು ಎಂದು ಹೇಳಲಿ ಅಂತ ಸವಾಲು ಹಾಕಿದ್ರು. ಸಿದ್ದರಾಮಯ್ಯ ಮೇಲೆ ಎಸಿಬಿಯಲ್ಲಿ 56 ದೂರುಗಳಿವೆ. ಆ ಕುರಿತಂತೆ ನಾನು ಬೇಕಾದರೆ ಪಟ್ಟಿಯನ್ನು ಕೊಡುತ್ತೇನೆ. ಸಿದ್ದರಾಮಯ್ಯ ಬಗ್ಗೆ ಅವರ ಪಕ್ಷದಲ್ಲೇ ಒಮ್ಮತವಿಲ್ಲ. ಅವರ ಪಕ್ಷದ ರಾಜ್ಯಾಧ್ಯಕ್ಷ ಏಕೆ ಬರುತ್ತಿಲ್ಲ? ಎಂದು ಪ್ರಶ್ನೆ ಮಾಡಿದ್ರು.
ಮಹದಾಯಿ ಸಮಸ್ಯೆಯನ್ನ ಡಿಸೆಂಬರ್ 15ರೊಳಗೆ ಇತ್ಯರ್ಥಪಡಿಸ್ತೇನೆ ಎಂದಿದ್ದ ಯಡಿಯೂರಪ್ಪ ಉಲ್ಟಾ ಹೊಡೆದ್ರು. ಗುಜರಾತ್, ಹಿಮಾಚಲಪ್ರದೇಶದಲ್ಲಿ ಇದ್ದ ಕಾರಣ ಆಗಲಿಲ್ಲ. ಫಲಿತಾಂಶ ಬಂದ ಬಳಿಕ ಏಳೆಂಟು ದಿನದೊಳಗೆ ಸಮಸ್ಯೆ ಇತ್ಯರ್ಥ ಬಗ್ಗೆ ಸಂಬಂಧಪಟ್ಟವರೊಂದಿಗೆ ಮಾತನಾಡ್ತೇನೆ ಅಂದ್ರು.
ಪರಿವರ್ತನಾ ಯಾತ್ರೆಯಲ್ಲಿ ಉತ್ತಮ ಜನಬೆಂಬಲ ವ್ಯಕ್ತವಾಗ್ತಿದೆ. ಹಾಗಾಗಿ ರಾಜ್ಯದಲ್ಲಿ 150 ಸೀಟ್ ಗೆಲ್ಲುತ್ತೇವೆ. ಅಧಿಕಾರಕ್ಕೆ ಬಂದೇ ಬರುತ್ತೇವೆ ಅಂದ್ರು. ಹೈದ್ರಬಾದ್ ಕರ್ನಾಟಕ ಭಾಗವನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಅಭಿವೃದ್ಧಿ ಮಾಡಿರೋದು ಪ್ರಮಾಣಿಕವಾಗಿದ್ರೆ ಶ್ವೇತಪತ್ರ ಹೊರಡಿಸಬೇಕು. ಇಲ್ಲವಾದ್ರೆ ನಾನು ಕಪ್ಪು ಪತ್ರ ಹೊರಡಿಸುವೆ ಎಂದು ಸವಾಲ್ ಹಾಕಿದ್ರು.
ಇವಿಎಂ ನ್ಯೂನ್ಯತೆ ಕುರಿತು ದೆಹಲಿಯಲ್ಲಿ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಸಭೆ ಕರೆದಿತ್ತು. ಇವಿಎಂ ತಪ್ಪಿನ ಕುರಿತು ಯಾವ ಪಕ್ಷವೂ ಸಾಬೀತು ಮಾಡಲಿಲ್ಲ. ಆದರೆ ಈಗ ಗುಜರಾತ್, ಹಿಮಾಚಲಪ್ರದೇಶದ ಮತದಾನೋತ್ತರ ಸಮೀಕ್ಷೆ ನೋಡಿ ಏನೇನೋ ಮಾತಾಡ್ತಾರೆ. ಅದ್ರಲ್ಲೂ ಸಿಎಂ ಸಿದ್ದರಾಮಯ್ಯ ದಂಗಾಗಿ ಹೋಗಿದ್ದಾರೆ ಅಂತ ಹೇಳಿದ್ರು.