ಶ್ರೀಗಳು ಬಂದಾಗ ಬುದ್ಧಿ ಅಂತೀವಿ, ತಳಸಮುದಾಯವರು ಬುದ್ಧಿವಂತರಾದ್ರೂ ಏಕವಚನದಲ್ಲಿ ಮಾತಾಡ್ತಿವಿ: ಸಿಎಂ

Public TV
3 Min Read
CM Siddaramaiah Bhovi Gurpeeth Bhovi Development Corporation

– ಶಿಕ್ಷಣದ ಮಹತ್ವ ಸಾರಿದ ಸಿಎಂ

ಚಿತ್ರದುರ್ಗ: ಮೇಲ್ವರ್ಗದ ಶ್ರೀಗಳು ಬಂದಾಗ ಬುದ್ಧಿ ಅಂತೀವಿ. ತಳಸಮುದಾಯವರು ಬುದ್ಧಿವಂತರಾದರು ಏಕವಚನದಲ್ಲಿ ಮಾತಾಡ್ತಿವಿ. ಹೀಗಾಗಿ ಶಿಕ್ಷಣ ಪಡೆಯಬೇಕು, ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕರೆ ನೀಡಿದ್ದಾರೆ.

ಭೋವಿ ಗುರುಪೀಠದ (Bhovi Gurpeeth) ಆವರಣದಲ್ಲಿ ನಡೆದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಧೀಕ್ಷಾ ರಜತ ಮಹೋತ್ಸವದಲ್ಲಿ ಅವರು ಮಾತನಾಡಿದರು. ಈ ವೇಳೆ, 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಶ್ರೀಗಳು ಮುಂದಿನ ನೂರು ವರ್ಷಗಳ ಕಾಲ ಭೋವಿ ಗುರುಪೀಠದ ಪೀಠಾಧಿಪತಿ ಆಗಿರಲಿ. ವೈಯಕ್ತಿಕವಾಗಿ ಹಾಗೂ ಸರ್ಕಾರದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸಿತ್ತೇನೆ. ಭೋವಿ ಗುರುಪೀಠದ ಸಿದ್ದರಾಮೇಶ್ವರ ಶ್ರೀಗಳು ಸದಾ ಭೋವಿ ಸಮಾಜಕ್ಕೆ ಮಾರ್ಗದರ್ಶಕರಾಗಿರಲಿ ಎಂದಿದ್ದಾರೆ.

CM Siddaramaiah Bhovi Gurpeeth

ಶೋಷಿತ, ಹಿಂದುಳಿದ ಸಮಾಜಕ್ಕೆ ಮಾರ್ಗದರ್ಶನ ಮಾಡುವವರು ಇರಬೇಕು. ಬಸವಾದಿ ಶರಣರು, ಅಂಬೇಡ್ಕರ್ ಹೇಳಿದಂತೆ ಸಮಸಮಾಜ ನಿರ್ಮಾಣ ಆಗಬೇಕು. ಅವಕಾಶದಿಂದ ವಂಚಿತ ಜನರು ಮುಖ್ಯವಾಹಿನಿಗೆ ಬರಬೇಕು. ಆಗ ಸಾಮಾಜಿಕ ನ್ಯಾಯ, ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ. ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಸಾರ್ಥಕವಾಗಲು ದುರ್ಬಲ ವರ್ಗದ ಜನರಿಗೆ ಸಾಮಾಜಿಕ, ಆರ್ಥಿಕಶಕ್ತಿ ಬರಬೇಕು ಆಗ ರಾಜಕೀಯ ಸ್ವಾತಂತ್ರ್ಯ ಸಾರ್ಥಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಮ್ಮಲ್ಲಿ ಮೇಲು, ಕೀಳು, ಬಡವ, ಬಲ್ಲಿದ, ಅಕ್ಷರಸ್ಥ, ಅನಕ್ಷರಸ್ಥ ತಾರತಮ್ಯ ಇರಬಾರದು. ಅಸಮಾನತೆ ನಿರ್ಮೂಲನೆ ಆದರೆ ಮಾತ್ರ ಸಮಸಮಾಜ ನಿರ್ಮಾಣ ಆಗಲಿದೆ. ಯಾರೋ ಸ್ವಾರ್ಥಿಗಳು, ಪಟ್ಟಬದ್ರ ಹಿತಾಸಕ್ತಿಗಳು ಜಾತಿ ಅಸಮಾನತೆ ನಿರ್ಮಾಣ ಮಾಡಿದ್ದಾರೆ. ಜಾತಿ ವ್ಯವಸ್ಥೆ ಪರಿಣಾಮವಾಗಿ ನಾವೆಲ್ಲ ಅವಕಾಶದಿಂದ ವಂಚಿತರಾಗಿದ್ದೇವೆ. ಶಿಕ್ಷಣದ ಅವಕಾಶ ಸಿಕ್ಕವರು ಆರ್ಥಿಕವಾಗಿ ಸಬಲರಾಗಿದ್ದಾರೆ. ಅವಕಾಶ ಸಿಗದವರು ಮೇಲೆ ಬರಲು ಸಾಧ್ಯವಾಗಿಲ್ಲ. ವಿದ್ಯೆ ಕಲಿಯಲು ಕೆಲವರಿಗೆ ಅವಕಾಶ ಇಲ್ಲ. ಆದರೆ ವಿದ್ಯೆ ಕಲಿಯಲು ಎಲ್ಲರಿಗೂ ಅರ್ಹತೆ ಇದೆ ಎಂದು ಅವರು ಹೇಳಿದ್ದಾರೆ.

ಭೋವಿ ಮಠದಿಂದ ನಿರಂತರ ಸಂಘಟನೆ, ಶಿಕ್ಷಣ, ಹೋರಾಟ
ಭೋವಿ ಸಮುದಾಯದಲ್ಲಿ ಹುಟ್ಟಿದವರು ಸಹ ಐಎಎಸ್ ಅಧಿಕಾರಿಗಳಾಗಲು ಅವಕಾಶವಿದೆ. ನಾವೆಲ್ಲ ಮನುಷ್ಯರಾಗಿ ಸ್ವಾಭಿಮಾನದಿಂದ ಬದುಕಬೇಕು. ನಮ್ಮಲ್ಲಿ ಗುಲಾಮಗಿರಿ ಇದ್ದ ಹಿನ್ನೆಲೆಯಲ್ಲಿ ಈಗಲೂ ಕೆಲವರು ಗುಲಾಮಗಿರಿಯಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಮೇಲ್ವರ್ಗದ ಶ್ರೀಗಳು ಬಂದಾಗ ಬುದ್ಧಿ ಅಂತೀವಿ. ತಳಸಮುದಾಯವರು ಬುದ್ಧಿವಂತರಾದರು ಏಕವಚನದಲ್ಲಿ ಮಾತಾಡ್ತಿವಿ. ಹೀಗಾಗಿ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಈ ಮಠದ ಶ್ರೀಗಳು ನಿರಂತರವಾಗಿ ಸಂಘಟನೆ, ಶಿಕ್ಷಣ, ಹೋರಾಟ ಮಾಡಿದ ಪರಿಣಾಮ ಮಠ ಬೆಳೆದಿದೆ ಎಂದು ಅವರು ತಿಳಿಸಿದ್ದಾರೆ.

ಭೋವಿ ಸಮಾಜದಿಂದ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಲು ಸರ್ಕಾರದಿಂದ ನಾವು ಸಹಾಯ ಮಾಡುತ್ತೇವೆ. ಎಲ್ಲರಿಗೂ ಶಿಕ್ಷಣ ಸಿಕ್ಕರೆ ಮಾತ್ರ ಅಭಿವೃದ್ಧಿ ಸಾಧ್ಯ. ಉಚಿತ ಶಿಕ್ಷಣ, ಹಾಸ್ಟೆಲ್ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಬೇಕು. 2013ರಲ್ಲಿ ಎಸ್‍ಸಿಎಸ್‍ಪಿ, ಟಿಎಸ್‍ಪಿ ಕಾಯ್ದೆ ನಾವು ತಂದಿದ್ದೆವು. ಈ ವರ್ಷ 39.121 ಕೋಟಿ ರೂ. ಎಸ್‍ಸಿ, ಎಸ್‍ಟಿಗೆ ಮೀಸಲಿಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.

ಭೋವಿ ಅಭಿವೃದ್ಧಿ ನಿಗಮ ಮರುನಾಮಕರಣ:
ಭೋವಿ ಅಭಿವೃದ್ಧಿ ನಿಗಮವನ್ನು (Bhovi Development Corporation) ಭೋವಿ-ವಡ್ಡರ ಅಭಿವೃದ್ಧಿ ನಿಗಮವಾಗಿ ಮರುನಾಮಕರಣ ಮಾಡಬೇಕು ಎನ್ನುವ ಬೇಡಿಕೆ ಇದೆ. ಈ ಬೇಡಿಕೆಯನ್ನು ಈಡೇರಿಸಲಾಗುವುದು. ಸಿದ್ಧರಾಮೇಶ್ವರ ಅಧ್ಯಯನಪೀಠಕ್ಕಾಗಿ ಬೇಡಿಕೆ ಇದೆ. ಈ ಬೇಡಿಕೆಯನ್ನೂ ಈಡೇರಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಮಂತ್ರಾಲಯಕ್ಕೆ ಭೇಟಿ:
ಮಂತ್ರಾಲಯಕ್ಕೆ ಶ್ರೀಗಳ ಆಹ್ವಾನದ ವಿಚಾರವಾಗಿ, ನಾನು ಈವರೆಗೂ ಮಂತ್ರಾಲಯಕ್ಕೆ ಹೋಗಿಲ್ಲ. ಪೂಜ್ಯರು ಆಹ್ವಾನ ನೀಡಿದ್ದು, ಮುಂದಿನ ದಿನಗಳಲ್ಲಿ ಹೋಗುತ್ತೇನೆ. ಸ್ವಾಮೀಜಿಯವರು ನನ್ನ ಬಗ್ಗೆ ಕೆಲವು ಒಳ್ಳೆಯಮಾತುಗಳನ್ನಾಡಿ ಆಶೀರ್ವಾದ ಮಾಡಿದರು. ನಾನು ಅವರಿಗೆ ಯಾವಾಗಲೂ ಚಿರಋಣಿಯಾಗಿರುತ್ತೇನೆ ಎಂದಿದ್ದಾರೆ.

Share This Article