ಉಡುಪಿ: ಸಿಎಂ ಸಿದ್ದರಾಮಯ್ಯ ಇದೀಗ ಧರ್ಮಸಂಕಟಕ್ಕೆ ಸಿಲುಕಿದ್ದಾರಂತೆ. ಉಡುಪಿಯ ಕೃಷ್ಣಮಠಕ್ಕೆ ಯಾವತ್ತೂ ಭೇಟಿ ನೀಡದ ಸಿಎಂ ಇದೀಗ ಅನಿವಾರ್ಯವಾಗಿ ಮಠಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಈ ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ.
ಇದೇ ಭಾನುವಾರ- ಜೂ.18 ಕ್ಕೆ ರಾಷ್ಟ್ರಪತಿಗಳು ಉಡುಪಿ ಪ್ರವಾಸ ಮಾಡಲಿದ್ದಾರೆ. ಕೃಷ್ಣಮಠ ಭೇಟಿಯೂ ಅದರಲ್ಲಿ ಒಂದು ಪ್ರಮುಖ ಕಾರ್ಯಕ್ರಮ. ಪ್ರೋಟೋಕಾಲ್ ಪ್ರಕಾರ ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿಗಳ ಜೊತೆಗೆ ಇರಬೇಕು. ಅವರ ಜೊತೆಗೆ ಕೃಷ್ಣಮಠಕ್ಕೂ ಹೋಗಬೇಕು. ಅಲ್ಲಿಂದ ಕೊಲ್ಲೂರಿಗೂ ಹೋಗಿ ದೇವಿ ಮೂಕಾಂಬಿಕೆಯ ದರ್ಶನ ಮಾಡಬೇಕು. ಕೃಷ್ಣಮಠಕ್ಕೆ ಹೋಗಲ್ಲ ಅಂತ ಮೊದಲೇ ತೀರ್ಮಾನಿಸಿರುವ ಸಿಎಂ ನಿಜಕ್ಕೂ ಈಗ ಧರ್ಮಸಂಕಟದಲ್ಲಿದ್ದಾರೆ.
Advertisement
ಸಿಎಂ ಮಠಕ್ಕೆ ಬರಲೇ ಬೇಕು ಎಂದು ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರು ಒತ್ತಾಯ ಮಾಡಿದ್ದಾರೆ. ಆದರೆ ಕುರುಬ ಸಮುದಾಯದ ಅಸಮಾಧಾನದ ಭೀತಿಯಿಂದ ಸಿಎಂ ಉಡುಪಿಗೆ ಬರಲು ನಿರಾಕರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
Advertisement
ರಾಷ್ಟ್ರಪತಿಗಳ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನ ಪ್ರಮೋದ್ ಮಧ್ವರಾಜ್, ರಮೇಶ್ ಕುಮಾರ್ ಸೇರಿದಂತೆ ಮೂವರು ಸಚಿವರಿಗೆ ಸಿಎಂ ನೀಡಿದ್ದು, ಈ ಮೂಲಕ ತಾವು ಕೃಷ್ಣಮಠಕ್ಕೆ ಬರೋದ್ರಿಂದ ಜಾಣತನದಿಂದ ಜಾರಿಕೊಂಡಿದ್ದಾರೆ ಎನ್ನಲಾಗಿದೆ.
Advertisement
ಇಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಯಾಕೆ ಬರಲ್ಲ? ಅನ್ನೋ ಪ್ರಶ್ನೆಗೆ ಬಲವಾದ ಕಾರಣಗಳಿದೆ.
Advertisement
ಕಾರಣ 1: ಉಡುಪಿಯ ಕೃಷ್ಣಮಠದಲ್ಲಿ ಒಂದುವರೆ ದಶಕದ ಹಿಂದೆ ನಡೆದ ಕನಕಗೋಪುರ ವಿವಾದ. ಕನಕನ ಕಿಂಡಿಯ ಮೇಲಿನ ಗೋಪುರ ಕೆಡವಿದಾಗ ಸಿದ್ದರಾಮಯ್ಯ ವಿರೋಧಿಸಿದ್ದರು. ಕುರುಬ ಸಮುದಾಯದ ಪ್ರತಿನಿಧಿಯಾಗಿ ಹೋರಾಟ ಮಾಡಿದ್ದರು. ಸಿಎಂ ಮತ್ತು ಕೃಷ್ಣಮಠದ ಸಂಬಂಧ ಅಲ್ಲಿಂದ ಹಳಸುತ್ತಲೇ ಬಂದಿತ್ತು.
ಕಾರಣ 2: ಕೃಷ್ಣಮಠದ ಸರ್ಕಾರಿಕರಣವಾಗಬೇಕು ಎಂದು ಪ್ರತಿಪಾದಿಸಿದವರಲ್ಲಿ ಸಿಎಂ ಪ್ರಮುಖರು. ಹೋರಾಡುತ್ತಾ ಬಂದ ಸಿದ್ದರಾಮಯ್ಯ ಸಿಎಂ ಆದ ಬಳಿಕ ಯಾಕೋ ತಣ್ಣಗಾಗಿದ್ದರು.
ಕಾರಣ 3: ಇನ್ನೊಂದು ಕಾರಣ ಬಹಳ ಕುತೂಹಲಕಾರಿ. ಬಾಲ್ಯದಲ್ಲಿ ಸಿದ್ದರಾಮಯ್ಯನವರು ತಂದೆಯ ಜೊತೆಗೆ ಮಠಕ್ಕೆ ಬಂದಾಗ ಆಗಿನ ಸ್ವಾಮಿಗಳು ಪ್ರಸಾದವನ್ನು ಎತ್ತರದಿಂದ ಕೈಗೆ ಹಾಕಿದ್ದರಂತೆ. ಹೀಗೆ ಪ್ರಸಾದ ಕೊಟ್ಟು ಅವಮಾನ ಮಾಡಿದ್ದಂತೆ. ಈ ಕಾರಣಕ್ಕೆ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಕಾಲಿಟ್ಟಿಲ್ಲ ಎನ್ನಲಾಗುತ್ತಿದೆ.
ಕಳೆದ ನಾಲ್ಕುವರ್ಷದ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯ ನಾಲ್ಕು ಬಾರಿ ಉಡುಪಿಗೆ ಬಂದ್ರೂ ಒಂದು ಬಾರಿಯೂ ಕೃಷ್ಣಮಠಕ್ಕೆ ಬಂದಿಲ್ಲ.
ಏನೇ ಆದ್ರೂ ಸಿದ್ದರಾಮಯ್ಯನವರನ್ನು ಮಠಕ್ಕೆ ಕರೆಸೋದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಸವಾಲಾಗಿದೆ. ಮಠಕ್ಕೆ ಭೇಟಿ ನೀಡದೆ ಪ್ರತಿಷ್ಟೆ ಕಾಯ್ದುಕೊಳ್ಳೋದು ಸಿದ್ದರಾಮಯ್ಯನವರಿಗೂ ಸವಾಲಾಗಿದೆ. ಒಂದು ವೇಳೆ ಸಿಎಂ ಬರದೇ ಇದ್ದರೆ ಇದು ಕೇವಲ ಉಡುಪಿ ಮಠಕ್ಕಲ್ಲ ರಾಷ್ಟ್ರದ ಪ್ರಥಮ ಪ್ರಜೆಗೆ ಮಾಡಿದ ಅವಮಾನ ಎಂದು ಹೇಳಲಾಗುತ್ತಿದೆ. ರಾಷ್ಟ್ರಪತಿಯಾಗಿ ಕರ್ನಾಟಕ ರಾಜ್ಯಕ್ಕೆ ಪ್ರಣಬ್ ಮುಖರ್ಜಿ ಅವರ ಕೊನೆಯ ಭೇಟಿ ಇದು ಅನ್ನೋದು ಕೂಡಾ ಗಮನಾರ್ಹ. ರಾಷ್ಟ್ರೀಯ ಕಾಂಗ್ರೆಸ್ ನ ಅತ್ಯುನ್ನತ ನಾಯಕನಿಗೆ ಅವರದೇ ಪಕ್ಷದ ಸಿಎಂ ಒಬ್ಬರು ಮಾಡುವ ಅವಮಾನ ಎಂದು ಪ್ರಜ್ಞಾವಂತರು ಹೇಳುತ್ತಿದ್ದಾರೆ.