ಯಾದಗಿರಿ: ನಾಲ್ಕು ವರ್ಷ ಪೂರೈಸಿ ಮತ್ತೊಮ್ಮೆ ಅಧಿಕಾರ ಯುದ್ಧಕ್ಕೆ ಸನ್ನದ್ಧವಾಗಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ನಾವು ನುಡಿದಂತೆ ನಡೆದಿದ್ದೇವೆ ಅಂತಿದೆ. ಆದ್ರೆ ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷದ ಹಿಂದೆ ಘೋಷಿಸಿದ ಮಹತ್ವದ ಘೋಷಣೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಹೌದು. ಸರ್ಕಾರಗಳು ಘೋಷಣೆ ಮಾಡುವಾಗ ಹಿಂದೆ ಮುಂದೆ ನೋಡಲ್ಲ. ಜನಪ್ರಿಯತೆಗಾಗಿ ಘೋಷಣೆ ಮಾಡಿದ ಬಳಿಕ ಅನುದಾನ ನೀಡುವಾಗ ಕೈ ಹಿಂದೆ ಮಾಡ್ತಾರೆ. ಅದೇ ರೀತಿ ಆಗಿದೆ ಯಾದಗಿರಿ ಮೆಡಿಕಲ್ ಕಾಲೇಜು ಸ್ಥಾಪನೆ. ಸಿದ್ದರಾಮಯ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಘೋಷಣೆ ಮಾಡಿದ್ದ ಮೆಡಿಕಲ್ ಕಾಲೇಜಿಗೆ ಇನ್ನೂ ಕಾಮಗಾರಿಯೇ ಆರಂಭವಾಗಿಲ್ಲ.
Advertisement
ರಾಜ್ಯ ಸರ್ಕಾರ ಮೆಡಿಕಲ್ ಕಾಲೇಜು ಕ್ಯಾಂಪಸ್ ನಿರ್ಮಾಣಕ್ಕಾಗಿ ಮುದ್ನಾಳ ತಾಂಡಾ ಬಳಿ 30 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದು, ಅದೇ ಜಾಗದಲ್ಲಿ 56 ಕೋಟಿ ರೂಪಾಯಿ ವೆಚ್ಚದಲ್ಲಿ 300 ಹಾಸಿಗೆಯ ಸುಸಜ್ಜಿತ ಜಿಲ್ಲಾಸ್ಪತ್ರೆ ತಲೆ ಎತ್ತುತ್ತಿದೆ. ವಿಪರ್ಯಾಸ ಅಂದ್ರೆ ಮೆಡಿಕಲ್ ಕಾಲೇಜು ಕ್ಯಾಂಪಸ್‍ನಲ್ಲಿ ಜಿಲ್ಲಾಸ್ಪತ್ರೆ ಬರುತ್ತಿದೆ. ಆದ್ರೆ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಮಾತ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.
Advertisement
2018-19ನೇ ಸಾಲಿನಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸೂಚಿಸಿದ್ದು, 150 ವಿದ್ಯಾರ್ಥಿಗಳಿಗೆ ಅಡ್ಮಿಷನ್ ಕೊಡುವಂತೆ ತಿಳಿಸಿದೆ. ಮುಂದಿನ ತಿಂಗಳು ನವೆಂಬರ್‍ನಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಕೂಡ ಯಾದಗಿರಿಗೆ ಭೇಟಿ ನೀಡುತ್ತಿದ್ದು, ಮೂಲಭೂತ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲಿದೆ. ಈ ಬಗ್ಗೆ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಅವರನ್ನು ಕೇಳಿದ್ರೆ ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ ಅವರ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ.
Advertisement
ಈಗಿರುವ ಜಿಲ್ಲಾಸ್ಪತ್ರೆಯಲ್ಲಿ ನುರಿತ ವೈದ್ಯರ ಕೊರತೆಯಿದ್ದು, ವೈದ್ಯರು, ನರ್ಸ್ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ. ಹೀಗಾಗಿ ಜಿಲ್ಲೆಯ ಜನ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಜಿಲ್ಲೆಗಳತ್ತ ತೆರಳಬೇಕಿದೆ. ಮೆಡಿಕಲ್ ಕಾಲೇಜು ಆರಂಭವಾದ್ರೆ ಜಿಲ್ಲೆಯ ಜನರಿಗೆ ಸ್ಥಳೀಯವಾಗಿ ಆರೋಗ್ಯ ಭಾಗ್ಯ ಸಿಗಲಿದೆ ಅಂತ ಜನ ಹೇಳುತ್ತಿದ್ದಾರೆ.
Advertisement