ಮೈಸೂರು: ಮಾಜಿ ಪ್ರಧಾನಿ ದೇವೇಗೌಡ ಅವರು ಯಾರ ಪರವಾಗಿದ್ದಾರೆ ಅನ್ನೋದನ್ನು ಸ್ಪಷ್ಟಪಡಿಸಲಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ದೇವೇಗೌಡರಿಗೆ ಸವಾಲ್ ಹಾಕಿದ್ದಾರೆ.
ಕೃಷಿ ಹೊಂಡ, ಅಕ್ಕಿ ನೀಡುವ ಹಾಗೂ ಹಾಲು ಉತ್ಪಾದಕರ ವಿಚಾರವಾಗಿ ದೇವೇಗೌಡರ ನಿಲುವು ಏನು ಅಂತ ಸಿಎಂ ಪ್ರಶ್ನಿಸಿದ್ದಾರೆ. ಇನ್ನು ಬಳ್ಳಾರಿಯಲ್ಲಿ ಸರ್ಕಾರದ ವಿರುದ್ಧ ವ್ಯಂಗ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದೇವೇಗೌಡರಿಗೆ ಒಳ್ಳೆಯದಾಗಲಿ. ನಮ್ಮಿಬ್ಬರ ಸಂಬಂಧ ಇದ್ದದ್ದೇ. ಈಗ ರಾಜಕೀಯವಾಗಿ ಬೇರೆ ಇದ್ದೇವೆ ಅಷ್ಟೆ. ನಮ್ಮ ಸಿದ್ಧಾಂತ ಬೇರೆ, ಅವರ ಸಿದ್ಧಾಂತ ಬೇರೆ ಅಂದ್ರು.
Advertisement
ಜೆಡಿಎಸ್ ನಾಯಕರು ನಿಮ್ಮ ಬಗ್ಗೆ ಸಾಫ್ಟ್ ಕಾರ್ನರ್ ಇಟ್ಟಿದ್ದಾರೆ ಎಂಬ ಪ್ರಶ್ನೆಗೆ ಲೇವಡಿ ಮಾಡಿದ ಅವರು, ಅವರು ಸಾಫ್ಟ್ ಇಲ್ಲ ಹಾರ್ಡು ಇಲ್ಲ. ಸತ್ಯವಾದ ಸಂಗತಿ ಹೇಳಿದ್ರೆ ಸಾಕು ಅಂದ್ರು. ಬಿಜೆಪಿ ಅವರ ನಾಲಗೆ ಅವರ ಸಂಸ್ಕೃತಿ ಹೇಳುತ್ತೆ. ಬಿಜೆಪಿಯವರು ತಮಗೆ ಸಂಸ್ಕೃತಿ ಇದೆ ಅಂತಾರೆ ಇದೇನಾ? ನಾನು, ಮಹದೇವಪ್ಪ ಇಬ್ಬರು ಹಳ್ಳಿಯಿಂದ ಬಂದವರು. ನಮಗೂ ಕೆಟ್ಟದಾಗಿ ಬಯ್ಯೋದಕ್ಕೆ ಬರುತ್ತೆ. ಆದ್ರೆ ಅದು ನಮ್ಮ ಸಂಸ್ಕೃತಿ ಅಲ್ಲ ಅಂತ ಹೇಳಿದ್ರು.
Advertisement
Advertisement
ಮುಖಂಡ ಮಣಿಶಂಕರ್ ಅಯ್ಯರ್ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅವರನ್ನು ಈಗಾಗಲೇ ಪಕ್ಷದಿಂದ ತೆಗೆದು ಹಾಕಲಾಗಿದೆ. ಇದು ನಮ್ಮ ಕಾಂಗ್ರೆಸ್ ನ ಸಂಸ್ಕೃತಿ ಅಂತ ಸಿಎಂ ಬಿಜೆಪಿಗೆ ಟಾಂಗ್ ನೀಡಿದ್ರು. ಹೀಗೆ ಮಾತನಾಡುವ ಬಿಜೆಪಿ ಅವರಿಂದ ನಾವು ಏನೂ ನಿರೀಕ್ಷೆ ಮಾಡಲ್ಲ ಎಂದರು.
Advertisement
ಸಿಎಂ ಗಂಟುಮೂಟೆ ಕಟ್ಟಿಕೊಂಡು ಮೈಸೂರಿಗೆ ಹೋಗ್ತಾರೆ ಎಂಬ ಬಿಎಸ್‍ವೈ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಕಾರಣಕ್ಕೂ ಬಿಎಸ್‍ವೈ ಸಿಎಂ ಆಗಲ್ಲ. ಅವರು ಅಧಿಕಾರಕ್ಕೆ ಬರಲ್ಲ ಅಂತ ಯಡಿಯೂರಪ್ಪ ವಿರುದ್ಧ ಗರಂ ಆದ್ರು.
ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಕೂಡ ಸರ್ವೆ ಮಾಡಿಸಿದ್ದೇನೆ. ಆದ್ರೆ ಅದನ್ನು ಜನರ ಮುಂದೆ ಹೇಳುವುದಕ್ಕೆ ಆಗುವುದಿಲ್ಲ. ಈಗ ಮಾಡಿರುವ ಚುನಾವಣಾ ಸರ್ವೆಗಳನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ. ಜಾತ್ಯಾತೀತ ಪಕ್ಷವಾಗಿ ನಾವು ಅತ್ಯಂತ ಬಲಿಷ್ಠರಾಗಿದ್ದೇವೆ. ಬೇರೆಯವರ ಸಹಾಯ ಪಡೆದು ಕೋಮುವಾದಿ ಪಕ್ಷವನ್ನು ಮಟ್ಟಹಾಕುವ ಅಗತ್ಯವಿಲ್ಲ. ಮುಂದಿನ ಬಾರಿಯೂ ಸಹ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತಾ ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ರು.
ಪ್ರತಾಪ್ ಸಿಂಹ ನೆಲದ ಕಾನೂನು ಗೌರವಿಸಲಿ: ಹುಣಸೂರಿನಲ್ಲಿ ಹನುಮ ಜಯಂತಿ ಗಲಭೆ ಕುರಿತು ಮಾತನಾಡಿದ ಸಿಎಂ, ಗಲಾಟೆಗೆ ಬಿಜೆಪಿಯವರೇ ಕಾರಣ ಎಂದು ಆರೋಪಿಸಿದ್ರು. ಹನುಮ ಜಯಂತಿ ಮಾಡಬೇಡಿ ಅಂತ ಯಾರೂ ಹೇಳಿಲ್ಲ. ಆದರೆ ಪ್ರತಾಪ್ ಸಿಂಹ ಮತ್ತು ಬಿಜೆಪಿಯವರು ನಿಷೇಧಿತ ರಸ್ತೆಯಲ್ಲಿ ಮೆರವಣಿಗೆ ಮಾಡಲು ಮುಂದಾದರು. ಆದ್ದರಿಂದ ಪರಿಸ್ಥಿತಿ ನಿಯಂತ್ರಿಸಬೇಕಾಯಿತು. ಬಿಜೆಪಿಯವರು ಮಾತ್ರ ಹಬ್ಬ ಮಾಡುತ್ತಾರಾ? ನಾವು ಮಾಡಲ್ವಾ? ನಾವೂ ಗೌರಿ-ಗಣೇಶ, ಯುಗಾದಿ, ಸಂಕ್ರಾಂತಿ ಹಬ್ಬ ಮಾಡುತ್ತೇವೆ. ಹನುಮ ಜಯಂತಿ, ರಾಮನವಮಿಯನ್ನೂ ಮಾಡುತ್ತೇವೆ. ಪ್ರತಾಪ್ ಸಿಂಹ ಅವರು ಮೊದಲು ನೆಲದ ಕಾನೂನು ಗೌರವಿಸಬೇಕು. ಕಾನೂನು ಮಾಡುವವರು ಮೊದಲು ಕಾನೂನು ಗೌರವಿಸಿ ಮಾದರಿಯಾಗಬೇಕು. ಸಂಸದನಾದ ಮಾತ್ರಕ್ಕೆ ಪೊಲೀಸರ ಬ್ಯಾರಿಕೇಡ್ ಹೊಡೆದುಕೊಂಡು ಹೋಗಬಹುದಾ. ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಸಿಎಂ ಪ್ರಶ್ನಿಸಿದ್ರು.