ತುಮಕೂರು: ಬ್ಯಾಟಿಂಗ್ ಮಾಡುವ ಮೂಲಕ ತುಮಕೂರಿನ (Tumkur) ಸೋರೆಕುಂಟೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ (International Cricket Stadium) ನಿರ್ಮಾಣ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಚಾಲನೆ ನೀಡಿದ್ದಾರೆ. ಈ ವೇಳೆ ಗೃಹಸಚಿವ ಪರಮೇಶ್ವರ್ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಬಳಿಕ ಟೋಪಿ ಹಾಕಿಕೊಂಡೇ ಕ್ರೀಡಾಪಟುವಂತೆ ವೇದಿಕೆಗೆ ಸಿಎಂ ಆಗಮಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಆಗುವುದರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಕ್ರಿಕೆಟ್ ಕ್ರೀಡಾಂಗಣಕ್ಕೆ 41 ಎಕರೆ ಜಮೀನಿದ್ದು, ಖರಾಬು ಸೇರಿ 50 ಎಕರೆ ಕ್ರಿಕೆಟ್ ಸಂಸ್ಥೆಗೆ ಸಿಗುತ್ತಿದೆ. ಇದು ಬೆಂಗಳೂರಿಗೆ ಸಮೀಪದ ಸ್ಥಳವಾಗಿದೆ. ಇಲ್ಲಿ ಕ್ರೀಡಾಂಗಣ ಆಗುತ್ತಿರುವುದು ಸಂತೋಷದ ವಿಚಾರ. ಸಂಸ್ಥೆಗೆ ಮೈಸೂರಿನಲ್ಲೂ ಸರ್ಕಾರಿ ಜಮೀನು ಕೊಡುತ್ತೇವೆ ಎಂದು ಇದೇ ವೇಳೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಿದ್ದೇವೆ. ಇದು ತುಮಕೂರು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಕ್ರೀಡಾ ಪ್ರಗತಿಗೆ ಪೂರಕವಾಗಲಿದೆ.
ಆದಷ್ಟು ಶೀಘ್ರದಲ್ಲಿ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸುವಂತೆ ಸೂಚನೆ… pic.twitter.com/qhnfa5yLG0
— Siddaramaiah (@siddaramaiah) December 2, 2024
- Advertisement
ಕ್ರಿಕೆಟ್ ಬೆಳೆಯಲು ಅವಕಾಶ ಕಲ್ಪಿಸಬೇಕು. ಇಲ್ಲಿ ತಂಬಾ ಜನ ಕ್ರಿಕೆಟ್ ಆಟಗಾರರಿದ್ದಾರೆ. ಈ ಕ್ರೀಡಾಂಗಣ ಅನೇಕ ಹುದ್ದೆಗಳನ್ನು ಸೃಷ್ಟಿಸಲಿದೆ. ಕ್ರಿಕೆಟ್ ಕ್ರೀಡಾಂಗಣ ಆಗಲಿದೆ ಎಂಬ ಮಾಹಿತಿ ಬೆನ್ನಲ್ಲೇ, ಎಕರೆ ಜಮೀನಿಗೆ 50 ಲಕ್ಷ ರೂ. ಏರಿಕೆ ಕಂಡಿದೆ. ನೋಡಪ್ಪ ಸುರೇಶ್‍ಗೌಡ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.
- Advertisement
ವಿರೋಧ ಪಕ್ಷದವರನ್ನು ಎದುರಿಸುವ ಶಕ್ತಿ ನಮಗಿದೆ. ನಾನು ಎರಡು ಬಾರಿ ವಿರೋಧ ಪಕ್ಷದ ನಾಯಕ, ಸಿಎಂ ಆಗಿದ್ದೇನೆ. ಹೆದರುವ ಪ್ರಶ್ನೆಯೇ ಇಲ್ಲ. ನಿಮಗೆ ಹೆದರಿಸುವ ಶಕ್ತಿ ನಮಗಿದೆ. ಸುರೇಶ್ ಗೌಡ ನಿನ್ನೆಯ ವರೆಗೂ ಹೇಗೋ ಇದ್ದರು. ಇಂದು ಸರಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್‌ಗೌಡ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಸುರೇಶ್ ಗೌಡ ಅವರು ಬಿಜೆಪಿ, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ತಾರತಮ್ಯ ವಿಚಾರಕ್ಕೆ ಸಿಎಂ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶನದ ಎಚ್ಚರಿಕೆ ನೀಡಿದ್ದರು. ಇನ್ನೂ ಇದೇ ವೇಳೆ ಪರಮೇಶ್ವರ್ ಅವರು ಸುರೇಶ್ ಗೌಡರ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಸಿಎಂಗೆ ವೇದಿಕೆ ಮೇಲೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಹಾಗೂ ಜಿಲ್ಲೆಯ ಶಾಸಕ, ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಘುರಾಮ್ ಭಟ್ ಮತ್ತು ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.