ಚಿಕ್ಕೋಡಿ: ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಪ್ರಕರಣದಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ರೇವಣ್ಣ ಬಂಧನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ನಾನು ಪೊಲೀಸರ ಜೊತೆ ಮಾತನಾಡುತ್ತೇನೆ. ನಾವು ಇದರಲ್ಲಿ ಮಧ್ಯಪ್ರವೇಶ ಮಾಡಲ್ಲ. ಅವರು ಅಪಹರಣ ಪ್ರಕರಣವೊಂದರ ಕುರಿತು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ ಅವರಿಗೆ ಅರ್ಜಿ ವಜಾ ಆಗಿದ್ದು, ಜಾಮೀನು ಸಿಕ್ಕಿಲ್ಲ. ಹೀಗಾಗಿ ಅವರನ್ನು ಕಷ್ಟಡಿಗೆ ತೆಗೆದುಕೊಂಡಿರಬೇಕು ಅನಿಸತ್ತೆ ಎಂದರು.
ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ ರೇವಣ್ಣ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಾಗಿತ್ತು. ಈ ಬೆನ್ನಲ್ಲೇ ನಿರೀಕ್ಷಣಾ ಜಾಮೀನು ಕೋರಿ ರೇವಣ್ಣ ಅವರು ಕೋರ್ಟ್ ಮೊರೆ ಹೋಗಿದ್ದರು. ಅಂತೆಯೇ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಸುಮಾರು 1 ಮುಕ್ಕಾಲು ಗಂಟೆ ಕೋರ್ಟ್ ನಲ್ಲಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಅರ್ಜಿ ವಜಾಗೊಳಿಸಿ ಆದೇಶ ಪ್ರಕಟಿಸಿದರು.
ಇತ್ತ ಅರ್ಜಿ ವಜಾ ಆಗುತ್ತಿದ್ದಂತೆಯೇ ಹೆಚ್.ಡಿ ದೇವೇಗೌಡರ ನಿವಾಸದಿಂದ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ಅಲ್ಲಿಂದ ಸಿಐಡಿ ಕಚೇರಿಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಕಿಡ್ನಾಪ್ ಕೇಸಲ್ಲಿ ಹೆಚ್.ಡಿ ರೇವಣ್ಣ ಅರೆಸ್ಟ್