– ʻನೀರಜ್ ಚೋಪ್ರಾ ಕ್ಲಾಸಿಕ್ʼ ಸ್ಪರ್ಧೆಗೆ ಕಂಠೀರವ ಕ್ರೀಡಾಂಗಣ ಸಜ್ಜು
– ಯಾವಾಗ ಸ್ಪರ್ಧೆ, ಟಿಕೆಟ್ ದರ ಎಷ್ಟು?
ಬೆಂಗಳೂರು: ಸತತ 2 ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ, ವಿಶ್ವದ ನಂ.1 ಜಾವೆಲಿನ್ ಪಟು (Javelin Thrower) ನೀರಜ್ ಚೋಪ್ರಾ (Neeraj Chopra) ಅವರು ಬೆಂಗಳೂರಿನಲ್ಲಿದ್ದು, ಇಂದು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ್ದರು.
ಸಿಎಂ ಸಿದ್ದರಾಮಯ್ಯ (siddaramaiah) ಅವರನ್ನ ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಇದೇ ವೇಳೆ ನೀರಜ್ ಚೋಪ್ರಾಗೆ ಹಾರ ಹಾಕಿ, ಶಾಲು ಹೊದಿಸಿ ಮುಖ್ಯಮಂತ್ರಿಗಳು ಸನ್ಮಾನಿಸಿದರು. ಜೊತೆಗೆ ನಮ್ಮ ದೇಶಕ್ಕೆ ಇನ್ನಷ್ಟು ಪದಕಗಳನ್ನು ಗೆದ್ದು ತರುವಂತೆ ಶುಭ ಹಾರೈಸಿದರು.
ಈ ವೇಳೆ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರು ಉಪಸ್ಥಿತರಿದ್ದರು. ಅಂದಹಾಗೆ ಜುಲೈ 5ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ನೀರಜ್ ಚೋಪ್ರಾ ಕ್ಲಾಸಿಕ್ (NC Classic 2025) ಜಾವೆಲಿನ್ ಸ್ಪರ್ಧೆಯಲ್ಲಿ ಅವರು ಭಾಗವಹಿಸಲಿದ್ದಾರೆ.
ಜಾವೆಲಿನ್ ಹೀರೋ ಎಸೆತ ವೀಕ್ಷಣೆಗೆ ಬೆಂಗಳೂರು ಸಜ್ಜು
ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರ ಪ್ರದರ್ಶನಕ್ಕೆ ಕಂಠೀರವ ಕ್ರೀಡಾಂಗಣ (Kanteerava Stadium) ಇದೇ ಮೊದಲ ಸಲ ಸಜ್ಜಾಗಿದೆ. ಜುಲೈ 5ರಂದು ನಡೆಯಲಿರುವ ಜಾಗತಿಕ ಮಟ್ಟದ ನೀರಜ್ ಚೋಪ್ರಾ ಕ್ಲಾಸಿಕ್ ಸ್ಪರ್ಧೆಗೆ ಕಂಠೀರವ ಕ್ರೀಡಾಂಗಣ ಆತಿಥ್ಯ ವಹಿಸಿದೆ. ನೀರಜ್ ಜೊತೆಗೆ ಅಂತಾರಾಷ್ಟ್ರೀಯ ಜಾವೆಲಿನ್ ತಾರೆಗಳಾದ ಜೂಲಿಯಸ್ ಯೆಗೊ ಮತ್ತು ಥಾಮಸ್ ರೋಹ್ಲರ್ ಸ್ಪರ್ಧೆಯಲ್ಲಿರುವ ಪ್ರಧಾನ ಆಕರ್ಷಣೆಯಾಗಿದ್ದಾರೆ. ಆದರೆ ಗಾಯದ ಸಮಸ್ಯೆಯಿಂದಾಗಿ ಆ್ಯಂಡರ್ಸನ್ ಪೀಟರ್ ಹಿಂದೆ ಸರಿದಿದ್ದಾರೆ.
ಈ ಕೂಟದಲ್ಲಿ ಪಾಕಿಸ್ತಾನದ ಅರ್ಷದ್ ನದೀಂ ಅವರು ಸಹ ಭಾಗವಹಿಸುತ್ತಾರೆಂದು ಈ ಹಿಂದೆ ಹೇಳಲಾಗಿತ್ತು. ಆದರೆ ಪಹಲ್ಗಾಮ್ ಭಯೋತ್ಪಾದಕ ಕೃತ್ಯದ ಬಳಿಕ ಎರಡೂ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದ್ದರಿಂದ ಅವರ ಆಗಮನಕ್ಕೆ ವಿರೋಧ ವ್ಯಕ್ತವಾಗಿತ್ತು. ಅವರು ಭಾಗವಹಿತ್ತಾರೋ ಅಥವಾ ಇಲ್ಲವೋ ಎಂಬ ಬಗ್ಗೆ ಇನ್ನೂ ಖಚಿತವಾಗಿಲ್ಲ.
200 ರೂ.ನಿಂದ ಟಿಕೆಟ್ ದರ
ನೀರಜ್ ಚೋಪ್ರಾ ಕ್ಲಾಸಿಕ್ ಸ್ಪರ್ಧೆ ವೀಕ್ಷಣೆಗೆ 200 ರೂ.ಗಳಿಂದ 6,000 ರೂ. ವರೆಗೂ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಸುಮಾರು 30 ಸಾವಿರಕ್ಕೂ ಅಧಿಕ ಆಸನಗಳ ಸಾಮರ್ಥ್ಯವಿದ್ದು, ಸದ್ಯ 6 ಸಾವಿರ ಟಿಕೆಟ್‌ಗಳು ಮಾರಾಟವಾಗಿ ಎಂದು ಮೂಲಗಳು ತಿಳಿಸಿವೆ. ಟಿಕೆಟ್‌ಗಳು ಆನ್‌ಲೈನ್ ಜತೆಗೆ ಮೈದಾನದ ಆವರಣದಲ್ಲೂ ಲಭ್ಯವಿವೆ.