ಕಲಬುರಗಿ: ಜಿಲ್ಲೆಯ ಅಫಜಲಪುರದಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಂಗಾರದ ಕಿರೀಟ ತೊಡಿಸಿ, ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಲಾಗಿದೆ.
ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶದಲ್ಲಿ ಅಫಜಲಪುರ ಶಾಸಕ ಮಾಲಿಕಯ್ಯ ಗುತ್ತೇದಾರ್ ಸಿಎಂ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಲಾಗಿದ್ದ ಹೂಬ್ಲೋಟ್ ವಾಚ್ ಪ್ರಕರಣದ ಬಳಿಕ, ಸಿಎಂ ಉಡುಗೊರೆ ಸ್ವೀಕರಿಸಲು ಹಿಂದು ಮುಂದು ನೋಡುತ್ತಿದ್ದರು. ಆದರೆ ಇಂದು ಮಾತ್ರ ಸಂತೋಷವಾಗಿಯೇ ಚಿನ್ನದ ಕಿರೀಟವನ್ನು ಧರಿಸಿದ್ದಾರೆ.
Advertisement
Advertisement
ಸಮಾರಂಭದ ಮುನ್ನ ಕಲಬುರಗಿಯ ಅಫಜಲಪುರದ ಅಡಿಗಲ್ಲು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ 117 ಕೋಟಿಯ 24 ವಿವಿಧ ಕಾಮಗಾರಿಗೆ ಚಾಲನೆ ನೀಡಿದರು.
Advertisement
ನಂತರ ಸಾಧನಾ ಸಮಾವೇಶದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ಇಲ್ಲಿಯವರೆಗೆ ಸತ್ಯವೇ ಹೇಳಿಲ್ಲ. ಬರಿ ಪುಂಗಿ ಬಿಡುತ್ತಾರೆ. ಆದರೆ ಅವರ ಬುಟ್ಟಿಯಲ್ಲಿ ಹಾವು ಇಲ್ಲ, ಬರಿ ಪುಂಗಿ ಬಿಡುವ ಕೆಲಸ ಮಾಡುತ್ತಾರೆ. ಪದೇ ಪದೇ ಸಿಎಂ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ. ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
Advertisement
ರಾಜ್ಯದ ಹಲವೆಡೆ ಬಿಜೆಪಿಯವರು ಕೋಮು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಸಿದ್ರಾಮಯ್ಯ ನಿಮಗೆ ತಪರಾಕಿ ಬೇಕಾ? ಸಾಕಾ? ಎನ್ನುತ್ತಾರೆ. ಇದು ಕೇಂದ್ರ ಸಚಿವರಾಗಿ ಮಾತನಾಡುವ ಶೈಲಿಯಾ ಇದು? ಉತ್ತರ ಕನ್ನಡದಲ್ಲಿ ಬೆಂಕಿ ಹಚ್ಚಿದ್ದು ಬಿಜೆಪಿಯವರೇ ಅನ್ನುವುದಕ್ಕೆ ಇಷ್ಟು ಸಾಕು ಅಲ್ವಾ ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರ ಬಹಿರಂಗ ಚರ್ಚೆ ವಿಚಾರವಾಗಿ ಪ್ರತಿಕ್ರಿಯಸಿದ ಅವರು, ನಾವು ಅಭಿವೃದ್ಧಿ ವಿಚಾರವಾಗಿ ಎಲ್ಲಿಗೆ ಕರೆದರೂ ಬಂದು ಚರ್ಚೆ ನಡೆಸಲು ಸಿದ್ಧವಿರುವುದಾಗಿ ತಿಳಿಸಿದರು. ಮತ್ತೊಮ್ಮೆ ಚುನಾವಣೆಯಲ್ಲಿ ಇವಿಎಂ ಬಳಕೆ ಕುರಿತು ಮಾತನಾಡಿದ ಅವರು, ಮತದಾನ ಯಂತ್ರದ ಮೇಲೆ ನಮಗೆ ವಿಶ್ವಾಸವಿಲ್ಲ. ಹೀಗಾಗಿ ಬ್ಯಾಲೆಟ್ ಪೇಪರ್ ಬಳಕೆ ಉತ್ತಮ. ಹೀಗಾಗಿ ಐಟಿ-ಬಿಟಿ ಇಲಾಖೆಯಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು.