PUBLiC TV Impact| ಸರ್ಕಾರಕ್ಕೆ ರೇಷನ್ ಕಾರ್ಡ್ ಪರಿಷ್ಕರಣೆ ವರದಿ ಸಲ್ಲಿಕೆ: ರದ್ದಿಗೆ ಮಾನದಂಡ ಏನು?

Public TV
2 Min Read
CM Siddaramaiah directs officials not to cancel BPL ration cards of poor families

– ಅಧಿಕಾರಿಗಳ ಯಡವಟ್ಟಿಗೆ ಬಳಲಿದ್ದ ಬಡವರು
– 13ಲಕ್ಷಕ್ಕೂ ಹೆಚ್ಚು ಕಾರ್ಡ್ ಪರಿಷ್ಕರಣೆಗೆ ಪ್ಲಾನ್

ಬೆಂಗಳೂರು: ಬಿಪಿಎಲ್‌ ಕಾರ್ಡ್ (BPL Card) ಪರಿಷ್ಕರಣೆಯಲ್ಲಿ ಯಡವಿದ್ದ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದೆ. ತೆರಿಗೆ (Tax) ಪಾವತಿಸುತ್ತಿದ್ದಾರೆಂಬ ಕಾರಣ ನೀಡಿ ಅಧಿಕಾರಿಗಳು ಸಾವಿರಾರು ಸಂಖ್ಯೆಯ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದರು. ಅಧಿಕಾರಿಗಳ ಯಡವಟ್ಟಿನ ಕಥೆಯನ್ನು ಎಳೆ ಎಳೆಯಾಗಿ ಪಬ್ಲಿಕ್‌ ಟಿವಿ (PUBLiC TV) ಬಿಚ್ಚಿಟ್ಟ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (CM Siddaramaiah) ರದ್ದಾದ ಅರ್ಹ ಬಿಪಿಎಲ್ ಕಾರ್ಡ್ ವಾಪಸ್‌ಗೆ ಆದೇಶ ಪ್ರಕಟಿಸಿದ್ದಾರೆ.

ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ (Income Tax) ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿ ರದ್ದು ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿದಂತೆ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಬಡ ಕುಟುಂಗಳವರ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ.

ಆಹಾರ ಇಲಾಖೆಗೆ 13,87,652 ರೇಷನ್ ಕಾರ್ಡ್ ಪರಿಷ್ಕರಣೆಗೆ ಸಿದ್ಧತೆ ನಡೆಸಿದ ಬಗ್ಗೆ ಸಿದ್ದರಾಮಯ್ಯನವರಿಗೆ ವರದಿ ಸಲ್ಲಿಸಿದೆ. ಇಲ್ಲಿಯವರೆಗೆ 3,81,983 ರೇಷನ್‌ ಕಾರ್ಡ್‌ಗಳನ್ನು ರದ್ದು/ ಅಮಾನತು ಮಾಡಲಾಗಿದ್ದು 10,05,669 ರೇಷನ್‌ ಕಾರ್ಡ್‌ ಪರಿಷ್ಕರಣೆ ಮಾಡಬೇಕಿದೆ ತಿಳಿಸಿದೆ. ಸಿಎಂಗೆ ಕೊಟ್ಟ ವರದಿಯಲ್ಲಿ ಆಹಾರ ಇಲಾಖೆ ಹಲವು ಮಾನದಂಡಗಳನ್ನು ಉಲ್ಲೇಖಿಸಿದೆ.

ಯಾರಿಗೆ ಬಿಪಿಎಲ್ ಕಾರ್ಡ್‌ ಸಿಗಲ್ಲ?
ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ನೌಕರರು, ನಿಗಮ, ಮಂಡಳಿ, ಪ್ರಾಧಿಕಾರಗಳ ನೌಕರರು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿದಾರರಿಗಿಲ್ಲ ಬಿಪಿಎಲ್ ಕಾರ್ಡ್, ಸ್ವಂತ ಬಳಕೆಗೆ ಕಾರು ಹೊಂದಿರುವವರು, ನಗರಗಳಲ್ಲಿ 1,000 ಚದರಡಿಗೂ ಹೆಚ್ಚು ವಿಸ್ತೀರ್ಣದ ಸೈಟ್‌ನಲ್ಲಿ ಮನೆ ಹೊಂದಿರುವರಿಗೆ ಬಿಪಿಎಲ್‌ ಕಾರ್ಡ್‌ ಸಿಗಲ್ಲ.

 

ಯರ‍್ಯಾರಿಗೆ ಬಿಪಿಎಲ್ ಕಾರ್ಡ್‌?
ಅಂತ್ಯೋದಯ ಅನ್ನ ಯೋಜನೆಯಡಿ ಮಾನದಂಡಗಳು, ವಿಧವೆಯರು, ಮಾರಣಾಂತಿಕ ಅನಾರೋಗ್ಯದ ವ್ಯಕ್ತಿಗಳು, ವಿಶೇಷ ಚೇತನರಿಗೆ ಅಂತ್ಯೋದಯ ಕಾರ್ಡ್ ಯಾವುದೇ ಜೀವನಾಧಾರ ಇಲ್ಲದೇ ಇರುವವರಿಗೆ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬಿಪಿಎಲ್‌ ಕಾರ್ಡ್‌ ಸಿಗಲಿದೆ.

ಅಂತ್ಯೋದಯ ಕಾರ್ಡ್ ಮಾನದಂಡಗಳು ಏನು?
ಭೂರಹಿತ ಕೃಷಿ ಕಾರ್ಮಿಕರು, ಕನಿಷ್ಠ ರೈತರು ಆಗಿರಬೇಕು. ಗ್ರಾಮೀಣ ಕುಶಲಕರ್ಮಿಗಳು, ಚರ್ಮಕಾರರು, ನೇಕಾರರಾಗಿರಬೇಕು. ಕಮ್ಮಾರರು, ಬಡಗಿಗಳು, ಕೊಳೆಗೇರಿ ನಿವಾಸಿ, ಕುಂಬಾರರು, ಕೂಲಿಗಳು, ರಿಕ್ಷಾ ಚಾಲಕರು, ಗಾಡಿ ಎಳೆಯುವವರು, ಹಣ್ಣು, ಹೂವು ಮಾರುವವರು, ಹಾವು ಮೋಡಿ ಮಾಡುವವರು, ಚಿಂದಿ ಆಯುವವರು, ನಿರ್ಗತಿಕರು, ಅನೌಪಚಾರಿಕ ವಲಯದಲ್ಲಿ ಜೀವನ ಸಾಗಿಸುವವರು ಅರ್ಹರಾಗಿರುತ್ತಾರೆ.

Share This Article