ಮೈಸೂರು: ದೆಹಲಿಯಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಅಲರ್ಟ್ ಘೋಷಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಸ್ಫೋಟವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಲರ್ಟ್ ಘೋಷಿಸಿದ್ದೇವೆ. ಸೂರು – ಬೆಂಗಳೂರು ಪೊಲೀಸರ ಜೊತೆ ಮಾತಾನಾಡಿದ್ದೇನೆ. ಇಡೀ ರಾಜ್ಯದಲ್ಲಿ ಭದ್ರತೆ ಬಿಗಿಗೊಳಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆ ಬಿಗಿಗೊಳಿಸಲು ಸೂಚನೆ ನೀಡಿದ್ದೇನೆ ಎಂದರಲ್ಲದೇ ಮೃತರಿಗೆ ಸಂತಾಪ ಸೂಚಿಸಿದರು.
ಕೆಂಪುಕೋಟೆ ಬಳಿ ಹರಿದ ನೆತ್ತರು!
ಕೆಂಪು ಕೋಟೆ ಸಮೀಪದ ಲಾಲ್ ಕಿಲಾ ಮೆಟ್ರೋ ನಿಲ್ದಾಣ ಗೇಟ್ ಸಂಖ್ಯೆ-1ರ ಬಳಿ ಸೋಮವಾರ ಸಂಜೆ 6:45 ರಿಂದ 7 ಗಂಟೆ ಅವಧಿಯಲ್ಲಿ ಸ್ಫೋಟ ಸಂಭವಿಸಿದ್ದು, ಸಾವಿನ ಸಂಖ್ಯೆ ಈವರೆಗೆ 13ಕ್ಕೆ ಏರಿಕೆಯಾಗಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 10ಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, 6 ಮಂದಿ ಸ್ಥಿತಿ ಚಿಂತಾಜನಕವಾಗಿದೆ.
6 ಕಾರ್‌ಗಳು, ಇ-ರಿಕ್ಷಾಗಳು ಸೇರಿದಂತೆ 22 ವಾಹನಗಳು ಬೆಂಕಿಗಾಹುತಿಯಾಗಿವೆ. ಕೆಂಪುಕೋಟೆ ಮೆಟ್ರೋದ ಗೇಟ್ ನಂ.1ರ ಪಾರ್ಕಿಂಗ್‌ನಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಆಕಸ್ಮಿಕ ಭೀಕರ ಸ್ಫೋಟದ ಸದ್ದು- ಬೆಂಕಿಗೆ ಜನ ನಡುಗಿಹೋಗಿದ್ದಾರೆ. 20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ. ಇದು ಬಾಂಬ್ ಸ್ಫೋಟವಾ..? ಅಥವಾ ಸಿಎನ್‌ಜಿ ಸ್ಫೋಟವಾ..? ಏನು ಅನ್ನೋದು ನಿಖರವಾಗಿ ಗೊತ್ತಾಗ್ತಿಲ್ಲ. ದೆಹಲಿ ಪೊಲೀಸರು, ಸಿಆರ್‌ಪಿಎಫ್ ತಂಡ ಘಟನಾ ಸ್ಥಳದಲ್ಲಿ ಇದ್ದು, ಇಂಚಿಂಚೂ ಶೋಧ ನಡೆಸುತ್ತಿದ್ದಾರೆ.


