Connect with us

Bengaluru City

ಅರ್ಧಕ್ಕೆ ಮುಕ್ತಾಯಗೊಳಿಸಿ ಕಾಟಾಚಾರಕ್ಕೆ ಬೆಂಗ್ಳೂರು ರೌಂಡ್ಸ್ ಹೊಡೆದ ಸಿಎಂ!

Published

on

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕೊನೆಗೂ ಎಚ್ಚೆತ್ತುಕೊಂಡು ಸತತ ಮಳೆಯಿಂದ ತತ್ತರಿಸಿದ್ದ ಬೆಂಗಳೂರಿನ ಹಲವೆಡೆ ಇವತ್ತು ಕಾಟಾಚಾರಕ್ಕೆ ಎಂಬಂತೆ ರೌಂಡ್ಸ್ ಹೊಡೆದಿದ್ದಾರೆ. ಕೊನೆಗೆ ಅರ್ಧದಲ್ಲೇ ಸಿಟಿ ರೌಂಡ್ಸ್ ಮುಗಿಸಿ ಬೇರೊಂದು ಕಾರ್ಯಕ್ರಮಕ್ಕೆ ತೆರಳಿದ್ದಾರೆ.

ಮಧ್ಯಾಹ್ನ 2.30ರ ವೇಳೆಗೆ ನಗರದ ಗೃಹ ಕಚೇರಿ ಕೃಷ್ಣಾದಿಂದ ಎರಡು ವೋಲ್ವೋ ಬಸ್ಸಿನಲ್ಲಿ ಸಿಟಿ ರೌಂಡ್ಸ್ ಆರಂಭಿಸಿದರು. ಸಚಿವ ಕೆ.ಜೆ.ಜಾರ್ಜ್, ಗೃಹ ಸಚಿವ ರಾಮಲಿಂಗರೆಡ್ಡಿ, ಮೇಯರ್ ಪದ್ಮಾವತಿ, ಆಯುಕ್ತ ಮಂಜುನಾಥ್ ಪ್ರಸಾದ್, ನಗರದ ಶಾಸಕರುಗಳು ಹಾಗೂ ಅಧಿಕಾರಿಗಳು ಸಿಎಂಗೆ ಸಾಥ್ ನೀಡಿದರು. ಆರಂಭದಲ್ಲಿ ಜೆಸಿ ರಸ್ತೆಯ ಕುಂಬಾರ್ ಗುಂಡಿ ಪ್ರದೇಶದಲ್ಲಿ ಕಾಮಗಾರಿ ವೀಕ್ಷಿಸಿ, ರಾಜಕಾಲುವೆ ಭೇಟಿ ಪರಿಶೀಲನೆ ನಡೆಸಿದರು.

ಈ ವೇಳೆ ಕೆಎ- 57 ಎಫ್- 1348 ವೋಲ್ವೋದಲ್ಲಿ ಎಸಿ ಕಡಿಮೆ ಇದೆ ಎನ್ನುವ ಕಾರಣಕ್ಕೆ ಸಿಎಂ ಅವರು ಪ್ರಯಾಣಿಸುತ್ತಿದ್ದ ಬಸ್ಸನ್ನು ಬದಲಿಸಲು ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್ ಮುಂದಾದರು. ಈ ಬಸ್ಸಿನಲ್ಲಿ ಎಸಿ ಕಡಿಮೆ ಇದೆ ಸರ್, ಜಾಸ್ತಿ ಎಸಿ ಇರುವ ಬಸ್ಸಿಗೆ ಬನ್ನಿ ಎಂದು ನಾಗರಾಜ್ ಯಾದವ್ ಒತ್ತಾಯ ಮಾಡಿದರು. ಇದಕ್ಕೆ ಒಪ್ಪದ ಸಿಎಂ ಮೊದಲು ಬಂದ ಬಸ್ಸಿನಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿ ಪ್ರಯಾಣ ಮುಂದುವರಿಸಿದರು.

ನಂತರ ಭಾರೀ ಮಳೆಗೆ ನೀರು ತುಂಬಿ ಮುಳುಗಡೆಯಾಗಿದ್ದ ಬಿಎಂಟಿಸಿ ವರ್ಕ್ ಶಾಪ್‍ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ನೀರು ಯಾಕೆ ನಿಲ್ಲುತ್ತಿದೆ ಎಂದು ಪ್ರಶ್ನಿಸಿದ ಸಿಎಂ ಜಾಸ್ತಿ ಮಳೆ ಬಂದಾಗ ಏನು ಮಾಡುವುದು ಎಂದು ತಲೆಯಲ್ಲಿ ಇಟ್ಟುಕೊಂಡು ಪ್ಲಾನ್ ಮಾಡಿ ಎಂದು ಹೇಳಿ ಎಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡರು.

ಬೇರೆ ಬಸ್: ಎಸಿ ಕೈಕೊಟ್ಟ ಹಿನ್ನೆಲೆಯಲ್ಲಿ ಶಾಂತಿನಗರ ಡಿಪೋದಲ್ಲಿ ಸಿಎಂ ಬಸ್ ಬದಲಾಯಿಸಿದರು. ಈ ವೇಳೆ ಶಾಸಕ ಬೈರತಿ ಬಸವರಾಜ್, ಉತ್ತಮ ಬಸ್ ವ್ಯವಸ್ಥೆ ಯಾಕೆ ಮಾಡಲಿಲ್ಲ. ಸಿಎಂ ಅಂದ್ರೆ ಎಂಥ ಬಸ್ಸು ಮಾಡ್ಬೇಕು ಅಂಥ ಗೊತ್ತಾಗಲ್ವಾ? ಎದುರು ಮಾತಾಡಿದ್ರೆ ನೋಡು ಅಂಥ ಬಿಎಂಟಿಸಿ ಸಿಬ್ಬಂದಿಗೆ ಏಕವಚನದಲ್ಲೇ ಗರಂ ಆಗಿ ತರಾಟೆಗೆ ತೆಗೆದುಕೊಂಡರು.

ಟ್ರಾಫಿಕ್ ಜಾಮ್: ಶಾಂತಿನಗರದಿಂದ ಎಚ್‍ಎಸ್‍ಆರ್ ಲೇಔಟ್ ಕಡೆಗೆ ತೆರಳುತ್ತಿದ್ದಾಗ ವಿಲ್ಸನ್ ಗಾರ್ಡನ್ ಟ್ರಾಫಿಕ್ ನಲ್ಲಿ ಸಿಎಂ ಸಿಕ್ಕಿಹಾಕಿಕೊಂಡರು. ಟ್ರಾಫಿಕ್ ಜಾಮ್‍ನಲ್ಲಿ ಮೂರು ಅಂಬುಲೆನ್ಸ್ ಗಳು ಸಿಕ್ಕಿಹಾಕಿಕೊಂಡಿತ್ತು. ಸುಮಾರು ಕಿಲೋ ಮೀಟರ್‍ವರೆಗೂ ಟ್ರಾಫಿಕ್ ಜಾಮ್ ಆಗಿತ್ತು.

 

ನಿಮಾನ್ಸ್ ರಸ್ತೆಯಲ್ಲಿ ಸಿಎಂ ಹೋಗುವ ದಾರಿಯಲ್ಲಿ ಬಿಎಂಟಿಸಿ ಬಸ್ ಕೆಟ್ಟು ನಿಂತಿದ್ದರಿಂದ ಸುಮಾರು 20 ನಿಮಿಷ ಟ್ರಾಫಿಕ್ ನಲ್ಲಿ ಸಿಎಂ ಸಿಲುಕಿದ್ದರು. ಎಚ್‍ಎಸ್‍ಆರ್ ಲೇಔಟ್ ಗೆ ಭೇಟಿ ನೀಡಿ ಪರಿಶೀಲಿಸಿದ ಸಿಎಂ, ಹಿಂದೆ ಇದ್ದವರು ಯಾರೂ ಏನು ಮಾಡಲಿಲ್ಲ. ಮಾಡಿದ್ದರೆ ಈ ತೊಂದರೆ ಆಗುತ್ತಿರಲಿಲ್ಲ. ತೊಂದರೆ ಆಗಿದ್ದಕ್ಕೆ ವಿಷಾಧಿಸುತ್ತೇವೆ ಎಂದು ಹೇಳಿದರು. ಈ ವೇಳೆ ಬೆಂಗಳೂರು ಜಲಮಂಡಳಿಯ ಅಧಿಕಾರಿಗಳ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.

ಫುಲ್ ಟ್ರಾಫಿಕ್ ಜಾಮ್: ಸಿಎಂ ಸಿಟಿ ರೌಂಡ್ಸ್ ನಿಂದಾಗಿ ಇಬ್ಬಲೂರು ಜಂಕ್ಷನ್‍ನಿಂದ ಅಗರ ಕೆರೆ ಬಳಿಯ ರಸ್ತೆವರೆಗೆ ಟ್ರಾಫಿಕ್ ಜಾಂ ಆಗಿತ್ತು. ಝೀರೋ ಟ್ರಾಫಿಕ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಟೀಂ ತೆರಳುತ್ತಿರುವ ಹಿನ್ನಲೆ ಸಂಚಾರ ದಟ್ಟಣೆಯಲ್ಲಿ ವಾಹನ ಸವಾರರು ಸಿಲುಕಿಕೊಂಡರು. ಮಾರತ್ ಹಳ್ಳಿ ಔಟರ್ ರಿಂಗ್ ರೋಡ್ ಫುಲ್ ಟ್ರಾಫಿಕ್ ಜಾಮ್ ಆಗಿ ಕಿಲೋಮೀಟರ್‍ಗಟ್ಟಲೇ ವಾಹನಗಳು ಸಾಲು ಸಾಲಾಗಿ ನಿಂತುಕೊಂಡಿತ್ತು.

ಕೈ ಕೊಟ್ಟ ಬಸ್: ರಾಮಮೂರ್ತಿನಗರದ ಅಂಬೇಡ್ಕರ್ ನಗರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದರು. ವೀಕ್ಷಣೆ ಮುಗಿಸಿದ ಬಳಿಕ ಸಿಎಂ ಹತ್ತಿದರೂ ಬಸ್ ಸ್ಟಾರ್ಟ್ ಮಾತ್ರ ಆಗುತ್ತಿರಲಿಲ್ಲ. ಇಲ್ಲಿಗೆ ಸಿಟಿ ರೌಂಡ್ಸ್ ಮುಕ್ತಾಯಗೊಳಿಸಿ ಅಧಿಕಾರಿಗಳಿಗೆ ಮಧ್ಯದಲ್ಲೇ ಕೈ ಕೊಟ್ಟು ಸಂಜೆ 6.45ಕ್ಕೆ ಆಪ್ತ ಹಾಗು ಶಾಸಕ ಎಂ.ಟಿ.ಬಿ.ನಾಗರಾಜ್ ನೂತನ ಶಾಲೆ ಉದ್ಘಾಟನೆಗೆ ಸಿಎಂ ತೆರಳಿದರು.

ಚಾಲಕನಿಗೆ ನೋಟಿಸ್: ಸಿಎಂ ಸಿಟಿ ರೌಂಡ್ಸ್ ವೇಳೆ ಬಸ್ಸಿನಲ್ಲಿ ಎಸಿ ಕೈಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿಯಿಂದ ಚಾಲಕ ಸೈಯದ್ ನೂರುಲ್ಲ ಗೆ ನೋಟಿಸ್ ಜಾರಿಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

https://youtu.be/MvBZ-ntaK7A

Click to comment

Leave a Reply

Your email address will not be published. Required fields are marked *