-ಜಾತಿಗಣತಿ ವರದಿಗೆ ಸಿದ್ದರಾಮಯ್ಯನವರೇ ಡೈರೆಕ್ಟರ್, ಸ್ಕ್ರೀನ್‌ಪ್ಲೇಯರ್, ಪ್ರೊಡ್ಯೂಸರ್ ಎಂದ ವಿಪಕ್ಷ ನಾಯಕ
ಬೆಂಗಳೂರು: ಕಾಂತರಾಜು ಅವರನ್ನು ಮನೆಗೆ ಕರೆಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಡಿಕ್ಟೇಟ್ ಮಾಡಿ ಜಾತಿಜನಗಣತಿ ವರದಿ (Caste Census) ಬರೆಸಿದ್ದಾರೆ. ಈ ವರದಿಯಲ್ಲಿ ರಹಸ್ಯ ಏನೂ ಇಲ್ಲ, ಎಲ್ಲ ಜಗಜ್ಜಾಹೀರು ಆಗಿದೆ ಎಂದು ವಿಪಕ್ಷ ನಾಯಕ ಆರ್.ಆಶೋಕ್ (R Ashok) ಕಿಡಿಕಾರಿದ್ದಾರೆ.
ನಗರದಲ್ಲಿ ಜಾತಿಜನಗಣತಿ ವರದಿ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂತರಾಜು ಅವರನ್ನು ಮನೆಗೆ ಕರೆಸಿಕೊಂಡು ಸಿದ್ದರಾಮಯ್ಯ ಡಿಕ್ಟೇಟ್ ಮಾಡಿ ವರದಿ ಬರೆಸಿದ್ದಾರೆ. ಈ ವರದಿಯಲ್ಲಿ ಸೀಕ್ರೆಟ್ ಏನೂ ಇಲ್ಲ, ಎಲ್ಲ ಜಗಜ್ಜಾಹೀರು ಆಗಿದೆ. ಇಲ್ಲದಿದ್ದರೆ ಮುಸ್ಲಿಮರ ಜನಸಂಖ್ಯೆ ಇಷ್ಟೊಂದು ಸಂಖ್ಯೆಯಲ್ಲಿ ಹೇಗೆ ಏರುತ್ತಿತ್ತು? ಇದು ಜಾತಿ ಜಾತಿಗಳನ್ನು, ಧರ್ಮ ಧರ್ಮಗಳನ್ನು ಒಡೆಯುವ ವರದಿ. ಜಾತಿಜನಗಣತಿ ವರದಿಯ ಮೂಲಕ ಲಿಂಗಾಯತರು, ಒಕ್ಕಲಿಗರು, ದಲಿತರಿಗೆ ಪಂಗನಾಮ ಹಾಕಿದ್ದಾರೆ. ಮುಸ್ಲಿಮರನ್ನು ಯಾಕೆ ವಿಭಜಿಸಿಲ್ಲ, ಲಿಂಗಾಯತರು, ಒಕ್ಕಲಿಗರನ್ನ ಮಾತ್ರ ವಿಭಜಿಸಿದ್ದೀರಿ. ನಿಮಗೆ ಬೇಕಿರುವ ಮುಸ್ಲಿಂ ಸಮುದಾಯವನ್ನು ವಿಭಜಿಸಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ – 9 ಜನರ ವಿರುದ್ಧ ಎಫ್‍ಐಆರ್
ವೀರಶೈವ ಲಿಂಗಾಯತರನ್ನು ಭಾಗ ಮಾಡಿದ್ದೀರಿ, ಒಕ್ಕಲಿಗರಿಗೆ ಇರೋದು ಒಂದೇ ಮಠ, ಆದಿಚುಂಚನಗಿರಿ ಮಠ. ಮುಸ್ಲಿಮರನ್ನು ಫೋಕಸ್ ಮಾಡಲಾಗಿದೆ, ಇದರಿಂದ ಏನು ಸಂದೇಶ ಕೊಡ್ತೀರಿ? ನೆಹರೂ ಅವರೂ ಇದೇ ತಪ್ಪು ಮಾಡಿದ್ದರು. ಅಂಬೇಡ್ಕರ್ ಸ್ಪರ್ಧಿಸಿದ್ದ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಸೇರಿಸಿದರು. ಸಿದ್ದರಾಮಯ್ಯ ಮುಸ್ಲಿಂ ಧರ್ಮ ಓಲೈಕೆ ಮಾಡುತ್ತಿದ್ದಾರೆ. ಜನರನ್ನ ಕೂಡಿಸುವುದು ಕಷ್ಟ, ಆದರೆ ಒಡೆಯುವುದು ಸುಲಭ. ಸಿದ್ದರಾಮಯ್ಯ ಒಡೆಯುವುದರಲ್ಲಿ ಎಕ್ಸ್‌ಪರ್ಟ್. ಜಾತಿ, ಧರ್ಮಗಳ ಮಧ್ಯೆ ಒಡಕು ತರುತ್ತಿದ್ದಾರೆ. ಇದು ಸಿದ್ದರಾಮಯ್ಯ ಪ್ರಾಯೋಜಕತ್ವದ ಅವೈಜ್ಞಾನಿಕ ವರದಿ. ಲಕ್ಷಾಂತರ, ಕೋಟ್ಯಂತರ ಮನೆಗಳಿಗೆ ಭೇಟಿ ಮಾಡದೇ ವರದಿ ಕೊಟ್ಟಿದ್ದಾರೆ. ಮನೆಗಳ ಸಮೀಕ್ಷೆ ಮಾಡದೇ ಹೇಗೆ ವರದಿ ಮಾಡಿದರು ಎಂದು ಆಗ್ರಹಿಸಿದ್ದಾರೆ.
ನಾವೇನೂ ಜಾತಿ ಜನಗಣತಿ ವಿರೋಧಿಗಳಲ್ಲ. ಆದರೆ ಯಾರನ್ನೋ ಓಲೈಕೆ ಮಾಡಲು, ವೋಟಿಗಾಗಿ ಸಿದ್ದರಾಮಯ್ಯ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಅಂದರೆ ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್‌ನಲ್ಲಿ ಬ್ರಿಟಿಷ್ DNA ಬಂದಿದೆ ಅದಕ್ಕೆ ಒಡಕು ಮಾಡುವ ಬುದ್ಧಿ ಕಲಿತಿದ್ದಾರೆ. ಈ ಜಾತಿಗಣತಿ ಒಕ್ಕಲಿಗರು, ಲಿಂಗಾಯತರಲ್ಲಿ ಬೆಂಕಿ ಹಚ್ಚುವ ವರದಿ. ಇದು ಯಾರೂ ಒಪ್ಪುವ ವರದಿ ಅಲ್ಲ. ಈಗಲೂ ಸರ್ಕಾರಕ್ಕೆ ಬುದ್ದಿ ಏನಾದರೂ ಇದ್ದರೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ. ಪ್ರತೀ ಮನೆಗೆ ಹೋಗಿ ವರದಿ ಕೊಡಲಿ ಎಂದು ಸವಾಲು ಹಾಕಿದರು.ಇದನ್ನೂ ಓದಿ: ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ: ಎಂ.ಬಿ.ಪಾಟೀಲ್
ಜಾತಿ ಜನಗಣತಿ ವರದಿಗೆ 150 ಕೋಟಿ ರೂ. ಖರ್ಚು ಮಾಡಿದೀವಿ ಅಂತಿದ್ದಾರೆ, ಇದೇ ಬೋಗಸ್. ಶಾಮನೂರು ಅವರೇ ನಮ್ಮನೆಗೆ ಬಂದು ಸಮೀಕ್ಷೆ ಮಾಡಿಲ್ಲ ಎಂದಿದ್ದಾರೆ. ಹಾಗಾದರೆ 150 ಕೋಟಿ ರೂ. ಹೊಡೆದವರು ಯಾರು? 150 ಕೋಟಿ ರೂ. ಲೂಟಿ ಆಗಿದೆ, ಇದು ಯಾರ ಜೇಬಿಗೆ ಹೋಯ್ತು? ಆ ಕಾಂತರಾಜು ಸೈನ್ ಹಾಕದೇ ತಪ್ಪಿಸಿಕೊಂಡು ಓಡಿ ಹೋಗಿದ್ದೇಕೆ? ಇದು ಗೊಂದಲದ ಗೂಡಾಗಿದೆ, ಯಾರಿಗೂ ನಂಬಿಕೆ ಇಲ್ಲ. ಮುಸ್ಲಿಮರನ್ನು ಓಲೈಕೆ ಮಾಡಲು, ಅವರನ್ನು ಶಾಶ್ವತವಾಗಿ ವೋಟ್ ಬ್ಯಾಂಕ್ ಮಾಡಿಕೊಳ್ಳುವ ವರದಿ ಇದು. ಸಿದ್ದರಾಮಯ್ಯ ಕೈಚಳಕದಿಂದ ಮಾಡಿರುವ ವರದಿ ಇದು. ಈಗಿನ ವರದಿಗೆ ಸಿದ್ದರಾಮಯ್ಯ ಅವರೇ ಎಲ್ಲ, ಸಿದ್ದರಾಮಯ್ಯ ಅವರೇ ಡೈರೆಕ್ಟರ್, ಸ್ಕ್ರೀನ್ ಪ್ಲೇಯರ್, ಪ್ರೊಡ್ಯೂಸರ್. ಮುಸ್ಲಿಮರನ್ನು ಟಾಪ್‌ನಲ್ಲಿ ಇಡಲು ಸಿದ್ದರಾಮಯ್ಯ ಹೊರಟಿದ್ದಾರೆ, ಅವರಿಗೆ ನಾಚಿಕೆ ಆಗಬೇಕು. ಇದು ಪಕ್ಕಾ ರಾಜಕೀಯದ ಸಮೀಕ್ಷೆ ಎಂದರು.
ಕಾಂಗ್ರೆಸ್‌ನವರು (Congress) ಅವರ ಹೈಕಮಾಂಡ್ (High Command) ಮಾತು ಕೇಳುತ್ತಿದ್ದಾರೆ. ನೀವು ನಿಮ್ಮ ಹೈಕಮಾಂಡ್ ಮಾತು ಕೇಳಿದರೆ, ಜನ ನಿಮ್ಮನ್ನು ದೂರ ಇಡುತ್ತಾರೆ. ಕಾಂಗ್ರೆಸ್‌ನಲ್ಲೇ ಈ ವರದಿಯಿಂದ ದೊಡ್ಡ ದಂಗೆ ಆಗಬಹುದು. ಹನಿಟ್ರ‍್ಯಾಪ್, 500 ಕೋಟಿ ರೂ. ಕಿಕ್‌ಬ್ಯಾಕ್, ಗುತ್ತಿಗೆದಾರರ ಆರೋಪ ವಿಚಾರ ಡೈವರ್ಟ್ ಮಾಡಲು, ಅವರ ಎಲ್ಲ ಹುಳುಕು ಸೈಡ್‌ಲೈನ್ ಮಾಡುವ ಉದ್ದೇಶದಿಂದ ಈಗ ವರದಿ ಮುನ್ನೆಲೆಗೆ ತಂದಿದ್ದಾರೆ. ಸಿದ್ದರಾಮಯ್ಯ (Siddaramaiah) ಒಬ್ಬ ಕುತಂತ್ರಗಾರ, ಅವರು ತಂತ್ರಗಾರ ಅಲ್ಲ. ಕುತಂತ್ರ ಮಾಡಿಯೇ ಜೆಡಿಎಸ್ ಒಡೆದರು. ಅದಕ್ಕೆ ಅವರನ್ನು ಹೊರಗೆ ಹಾಕಿದರು. ಈಗ ಕಾಂಗ್ರೆಸ್‌ನಿಂದಲೂ ಯಾವಾಗ ಹೊರಗೆ ಹಾಕುತ್ತಾರೋ ಗೊತ್ತಿಲ್ಲ. ಈ ಸರ್ಕಾರ ಬಹಳ ದಿನ ಇರಲ್ಲ. ಸರ್ವನಾಶ ಆಗಿಹೋಗುತ್ತದೆ. ಇದು ಮುಸ್ಲಿಮರ ಓಲೈಕೆ ಮಾಡುವ ಸರ್ಕಾರ. ಈಗಾಗಲೇ ಈ ಸರ್ಕಾರಕ್ಕೆ ರಾಜ್ಯದ ಜನರ, ಬೆಂಗಳೂರು ಜನರ ಶಾಪ ತಟ್ಟಿದೆ ಎಂದು ಭವಿಷ್ಯ ನುಡಿದರು.
ಇಡಿಯಿಂದ ನ್ಯಾಷನಲ್ ಹೆರಾಲ್ಡ್ ಆಸ್ತಿ ಮುಟ್ಟುಗೋಲು ಕ್ರಮ ಸ್ವಾಗತಾರ್ಹ. ಈ ಆಸ್ತಿ ದೇಶದ ಆಸ್ತಿಯಾಗಬೇಕು, ಇದು ದೇಶದ ಸ್ವಾತಂತ್ರ‍್ಯ ಹೋರಾಗಾರರ ಆಸ್ತಿ. ಅದನ್ನು ಯಾವುದೇ ಕಾರಣಕ್ಕೂ ಇಟಲಿ ಆಸ್ತಿ ಮಾಡಲು ಬಿಡಲ್ಲ. ಇನ್ನೂ ವರದಿಯಲ್ಲಿ ಒಕ್ಕಲಿಗರ ಮೀಸಲು ಹೆಚ್ಚಳಕ್ಕೆ ಶಿಫಾರಸು ವಿಚಾರವಾಗಿ ಮಾತನಾಡಿ, ಒಕ್ಕಲಿಗರ ಮೀಸಲು ಹೆಚ್ಚಳ ಸಾಧ್ಯವಿಲ್ಲ. ಈ ವರದಿ ಮೂಲಕ ಒಕ್ಕಲಿಗರ ಮೂಗಿಗೆ ತುಪ್ಪ ಸವರಲಾಗಿದೆ. ಈಗಾಗಲೇ 50% ಮೀಸಲಾತಿ ಮಿತಿ ಇರಬೇಕು ಅಂತ ಇದೆ. ಸರ್ಕಾರ ಸುಳ್ಳು ಹೇಳ್ತಿದೆ, ಹಾಗಾದ್ರೆ ಆದೇಶ ಹೊರಡಿಸಲಿ. ಹಾಗೆ ಸುಲಭವಾಗಿ ಮೀಸಲಾತಿ ಜಾಸ್ತಿ ಮಾಡುವ ಹಾಗಿದ್ದಿದ್ದರೆ ನಾವು ಇದ್ದಾಗಲೇ ಕೊಡುತ್ತಿರಲಿಲ್ಲವಾ? ಮೀಸಲಾತಿ ಹೆಚ್ಚಳ ರಾಜ್ಯಕ್ಕೆ ಅಧಿಕಾರ ಇಲ್ಲ ಎಂದು ಹೇಳಿದರು.ಇದನ್ನೂ ಓದಿ: ಜಾತಿ ಜನಗಣತಿ ವರದಿಯೇ ಸಿದ್ದರಾಮಯ್ಯಗೆ ಮರಣ ಶಾಸನ ಆಗಬಹುದು: ವಿ. ಸೋಮಣ್ಣ