– ತುಳುನಾಡಿನ ಜಾನಪದ ಕ್ರೀಡೆ ಕಂಡು ಸಿಎಂ ಫುಲ್ ಖುಷ್
– ಕಂಬಳ ಕೋಣಗಳ ಜೊತೆ ಫೋಟೋಗೆ ಫೋಸ್ ಕೊಟ್ಟ ಸಿಎಂ ಸಿದ್ದರಾಮಯ್ಯ
ಮಂಗಳೂರು: ಸ್ಪೀಕರ್ ಯು.ಟಿ.ಖಾದರ್ ನೇತೃತ್ವದ ಕಂಬಳದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ, ಕಂಬಳ ಕೂಟದಲ್ಲಿ ಕಂಬಳ ಪೇಟಾ ತೊಟ್ಟು ಮಿಂಚಿದರು. ತುಳುನಾಡ ಜಾನಪದ ಆಟ ಕಂಡು, ಕೋಣಗಳ ಜೊತೆ ಪೋಟೋಗೆ ಪೋಸ್ ಕೊಟ್ಟು ಖುಷಿ ಪಟ್ಟರು.
ಕಂಬಳ ತುಳುನಾಡ ಜನಪದ ಕ್ರೀಡೆ, ತುಳುವರ ಸಂಸ್ಕೃತಿ ಕಂಬಳ. ಕಳೆದ ಮೂರು ವರ್ಷಗಳಿಂದ ಸ್ಪೀಕರ್ ಯು.ಟಿ.ಖಾದರ್, ತನ್ನ ಕ್ಷೇತ್ರದ ನರಿಂಗಾನ ಎಂಬಲ್ಲಿ ಲವ-ಕುಶ ಜೋಡುಕರೆ ಕಂಬಳವನ್ನು ಅದ್ದೂರಿಯಾಗಿ ಆಯೋಜನೆ ಮಾಡುತ್ತಿದ್ದಾರೆ. ಈ ಬಾರಿ ವಿಶೇಷ ಎಂಬಂತೆ ಸಿಎಂ ಸಿದ್ದರಾಮಯ್ಯ ಕಂಬಳದಲ್ಲಿ ಭಾಗವಹಿಸಿ ಕಂಬಳಕ್ಕೆ ಹೊಸ ಮೆರುಗು ತುಂಬಿದ್ದರು. ಕಂಬಳಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಆರತಿ ಬೆಳಗಿ, ಸಿಡಿಮದ್ದು ಸಿಡಿಸಿ ಅದ್ದೂರಿ ಸ್ವಾಗತ ನೀಡಲಾಯಿತು. ಕಂಬಳ ಪೇಟಾ ತೊಡಿಸಿ, ಬೆಳ್ಳಿ ನೊಗ, ಬೆಳ್ಳಿಯ ಹಿಡಿಯ ಬೆತ್ತ ನೀಡಿ ಗೌರವಿಸಲಾಯಿತು. ಕಂಬಳ ಕಂಡು ಆನಂದಿಸಿದ ಸಿಎಂ, ಹಿಂದೆ ಕಂಬಳ ನಿಂತಾಗ ನಾವೇ ನಿಷೇಧ ತೆರವುಗೊಳಿಸಿದ್ದು. ಕರಾವಳಿಯ 24 ಕಂಬಳ ನಡೆಸಲು ಪ್ರತಿ ಕಂಬಳಕ್ಕೆ 5 ಲಕ್ಷ ಸರ್ಕಾರ ನೀಡಿದೆ. ಎಲ್ಲ ಭಾಷೆ ಧರ್ಮ, ಸಂಸ್ಕೃತಿಯವರು ಭಾಗವಹಿಸುವ ಕಂಬಳವನ್ನು ನಾವು ಉಳಿಸಿ ಬೆಳೆಸಬೇಕು ಎಂದರು. ಸಿಎಂ ಸಿದ್ದುಗೆ ಸಚಿವ ದಿನೇಶ್ ಗುಂಡೂರಾವ್, ರಹಿಮಾನ್ ಖಾನ್ ಸಾಥ್ ನೀಡಿದರು.
ತುಳು ಭಾಷೆಯನ್ನು ಎರಡನೇ ಭಾಷೆ ಮಾಡಬೇಕು ಎನ್ನುವುದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಸಿಎಂ ಆಶ್ವಾಸನೆ ನೀಡಿದರು. ಕಂಬಳ ಕೋಣಗಳ ಜೊತೆ ನಿಂತು ಪೋಟೋಗೆ ಪೋಸ್ ನೀಡಿದರು. ಕಂಬಳಕ್ಕೆ ಪ್ರೋತ್ಸಾಹ ನೀಡಿ, ಸರ್ಕಾರ ಓಟಗಾರಿಗೆ ವಿಮೆ ನೀಡಬೇಕು ಎಂದು ಕಂಬಳ ಸಮಿತಿಯವರು ಮನವಿ ಸಲ್ಲಿಸಿದರು.