ಕಠ್ಮಂಡು/ಬೆಂಗಳೂರು: ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಸರ್ಕಾದ ಮುಖ್ಯಕಾರ್ಯದರ್ಶಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಭಾರತದ ನೆರೆಯ ರಾಷ್ಟ್ರ ನೇಪಾಳ ಯುವ ದಂಗೆಗೆ ಹೊತ್ತಿ ಉರಿಯುತ್ತಿದೆ. ಸತತ 2ನೇ ದಿನವೂ ನೇಪಾಳ ಕುದಿಯುತ್ತಿದೆ. ಆಂತರ್ಯುದ್ಧಕ್ಕೆ ಶ್ರೀಲಂಕಾ, ಬಾಂಗ್ಲಾದೇಶದಂತೆ ನೇಪಾಳವೂ ಬದಲಾಗಿದೆ. ರಾಜಧಾನಿ ಕಠ್ಮಂಡುವಿನಲ್ಲಿ ಭಾರೀ ಪ್ರತಿಭಟನೆ, ಯುವಕರ ಕೋಪತಾಪಕ್ಕೆ ನೇಪಾಳದ ಓಲಿ ಸರ್ಕಾರ ಮಂಡಿಯೂರಿದೆ.
ಭುಗಿಲೆದ್ದ “ಜೆನ್ ಝಿ” ರಣಕೋಪಕ್ಕೆ ಕೆಪಿ ಶರ್ಮಾ ಓಲಿ ಪ್ರಧಾನಿ ಹುದ್ದೆಯನ್ನೇ ತ್ಯಜಿಸಿದ್ದಾರೆ. ಅಧ್ಯಕ್ಷ ರಾಮಚಂದ್ರ ಪೌಡೆಲ್ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾ ನಿಷೇಧ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದ ಬೆನ್ನಲ್ಲೇ ನಿಷೇಧ ಆದೇಶವನ್ನು ನಿನ್ನೆ ರಾತ್ರಿಯೇ ವಾಪಸ್ ಪಡೆದಿದ್ದರೂ, ಹಿಂಸಾಚಾರ ತಣ್ಣಗಾಗಿಲ್ಲ. ಇದನ್ನೂ ಓದಿ: ನೇಪಾಳ ಧಗ ಧಗ – ಉದ್ರಿಕ್ತರಿಂದ ಮನೆಗೆ ಬೆಂಕಿ, ಮಾಜಿ ಪ್ರಧಾನಿ ಪತ್ನಿ ಸಾವು
ನೇಪಾಳದಲ್ಲಿ ದೇಶವ್ಯಾಪಿ ದಂಗೆಯಿಂದಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಪರಿಣಾಮವಾಗಿ 39 ಮಂದಿ ಕನ್ನಡಿಗರು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದಾರೆ. ಕನ್ನಡಿಗರನ್ನ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು