ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಕುರಿತು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸಿದ ಬೆನ್ನಲ್ಲೇ ಸಿಎಂ ಅವರು ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದ್ದಾರೆ.
ಬೆಂಗಳೂರು ಹೊರವಲಯದ ದೊಮ್ಮಲೂರಿನಲ್ಲಿರುವ ಜಾರ್ಜ್ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಸಿಎಂ ಅವರು ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ನಾನು ಸಿಎಂ ಸ್ಥಾನ ಬಿಟ್ಟುಕೊಡಲು ರೆಡಿ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ಹೊಸ ಆಫರ್ ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸಿಎಂ ಸ್ಥಾನದ ಬದಲಾವಣೆಯಿಂದ ಸರ್ಕಾರ ಉಳಿಯುತ್ತದೆ ಎನ್ನುವುದಾದರೆ ನಾನು ಈ ಸ್ಥಾನದಿಂದ ಹೊರಬರಲು ನಿರ್ಧಾರ ಮಾಡಿದ್ದೇನೆ. ಜೊತೆಗೆ ನನ್ನ ಸ್ಥಾನವನ್ನು ನೀವು ಇನ್ಯಾರಿಗಾದರೂ ನೀಡಿ. ಅದಕ್ಕೆ ನನ್ನ ಅಭ್ಯಂತರ ಇರುವುದಿಲ್ಲ ಎಂದು ಹೇಳಿದ್ದಾರೆ.
ನನ್ನ ಒಬ್ಬನ ಬದಲಾವಣೆಯಿಂದ ಅತೃಪ್ತ ಶಾಸಕರು ವಾಪಸ್ ಬರುತ್ತಾರಾ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಯಾಕೆಂದರೆ ನಾನು ನಾಳೆ ವಿಶ್ವಾಸ ಮತ ಯಾಚನೆಯನ್ನು ಮಾಡಲೇಬೇಕು. ಹೀಗಾಗಿ ಅವರು ಬಂದ ನಂತರ ಬೇಕಾದರೆ ಸಿಎಂ ಸ್ಥಾನದ ಬದಲಾವಣೆ ಮತ್ತು ಕಾಂಗ್ರೆಸ್ ನಿಂದ ಆ ಸ್ಥಾನಕ್ಕೆ ಯಾರು ಎಂಬುದು ತೀರ್ಮಾನವಾಗಲಿ. ಒಟ್ಟಿನಲ್ಲಿ ಸಿಎಂ ಸ್ಥಾನವನ್ನು ಬಿಟ್ಟು ಕೊಡಲು ನಾನು ತಯಾರಿದ್ದೇನೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಒಟ್ಟಿನಲ್ಲಿ ಸಿಎಂ ಸ್ಥಾನ ಬಿಡಲು ನಾನು ರೆಡಿಯಾಗಿದ್ದೇನೆ ಎಂದು ಹೇಳುವ ಮೂಲಕ ಸಿಎಂ ಅವರು ಸರ್ಕಾರ ಉಳಿಸುವ ಕೊನೆಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.