– ಕಾಂಗ್ರೆಸ್ಸಿನ ಅಭಿಮಾನಿ ಅಧಿಕಾರಿ
– ಕಾಂಗ್ರೆಸ್ಸಿನಲ್ಲೇ ಭವಿಷ್ಯ ರೂಪಿಸಲಿದ್ದಾನೆ ಮಗ
ಜೈಪುರ: ರಾಜಸ್ಥಾನ ಮೂಲದ ದಂಪತಿ ತನ್ನ ಮಗನಿಗೆ ‘ಕಾಂಗ್ರೆಸ್’ ಜೈನ್ ಎಂದು ಹೆಸರಿಟ್ಟು, ಇದೀಗ ಭಾರೀ ಸುದ್ದಿಯಾಗಿದ್ದಾರೆ.
ಹೌದು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಚೇರಿಯಲ್ಲಿ ಮೀಡಿಯಾ ಆಫೀಸರ್ ಆಗಿ ವಿನೋದ್ ಜೈನ್ ಕಾರ್ಯನಿರ್ವಹಿಸುತ್ತಿದ್ದಾರೆ. ವಿನೋದ್ ಅವರಿಗೆ ಕಾಂಗ್ರೆಸ್ ಪಕ್ಷದ ಮೇಲೆ ಒಲವು ಜಾಸ್ತಿ ಇದ್ದು, ಇದೀಗ ತಮ್ಮ ಮಗನಿಗೆ ಕಾಂಗ್ರೆಸ್ ಎಂದೇ ನಾಮರಣ ಮಾಡುವ ಮೂಲಕ ತಮ್ಮ ಅಭಿಮಾನವನ್ನು ಮತ್ತಷ್ಟು ಮೆರೆದಿದ್ದಾರೆ.
ಮಗನ ಬರ್ತ್ ಸರ್ಟಿಫಿಕೆಟ್ ರಿಸೀವ್ ಮಾಡಿಕೊಂಡ ವಿನೋದ್ ಜೈನ್, ತನ್ನ ಮಗನ ಹೆಸರು ಕಾಂಗ್ರೆಸ್ ಜೈನ್ ಎಂದು ಓದಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಇಡೀ ಕುಟುಂಬ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದೆ. ಹೀಗಾಗಿ ನನ್ನ ಮಗ ಕೂಡ ಭವಿಷ್ಯದಲ್ಲಿ ಕಾಂಗ್ರೆಸ್ಸಿನಲ್ಲೇ ಗುರುತಿಸಿಕೊಳ್ಳಲಿ ಎಂಬುದೇ ನನ್ನ ಆಶಯವಾಗಿದೆ. ಹೀಗಾಗಿ ನನ್ನ ಎರಡನೇ ಮಗನಿಗೆ ಪಕ್ಷದ ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.
ಮಗನಿಗೆ ಕಾಂಗ್ರೆಸ್ ಎಂದು ಹೆಸರಿಡುವುದು ಕೆಲವರಿಗೆ ಇಷ್ಟವಿರಲಿಲ್ಲ. ಆದರೆ ನಾನು ನನ್ನ ಮಗನಿಗೆ ಪಕ್ಷದ ಹೆಸರಿಡುವುದಾಗಿ ನಿರ್ಧರಿಸಿದ್ದೇನೆ. ಜುಲೈ ತಿಂಗಳಲ್ಲಿ ನನಗೆ ಮಗ ಹುಟ್ಟಿದ್ದು, ಆದರೆ ಆತನ ಜನನ ಪ್ರಮಾಣ ಪತ್ರ ಸಿಗಲು ಕೆಲ ತಿಂಗಳುಗಳೇ ಕಳೆದಿದ್ದು, ಇಂದು ಅದು ನನಗೆ ಸಿಕ್ಕಿದೆ ಎಂದು ವಿವರಿಸಿದರು.
ನಾನು ಮುಖ್ಯಮಂತ್ರಿಗಳು ಮಾಡುವ ಕೆಲಸಗಳಿಂದ ಸ್ಫೂರ್ತಿಗೊಂಡಿದ್ದೇನೆ. ಹಾಗೆಯೇ ನನ್ನ ಮಗನಿಗೆ 18 ವರ್ಷ ತುಂಬಿ ನಂತರ ಆತ ಕೂಡ ತನ್ನ ರಾಜಕೀಯ ಜೀವನವನ್ನು ಆರಂಭಿಸುತ್ತಾನೆ ಎಂದು ವಿನೋದ್ ತಿಳಿಸಿದ್ದಾರೆ.