ಕೋಲ್ಕತ್ತಾ: ಆರ್‌ಜಿ ಕಾರ್ ಮೆಡಿಕಲ್ ಕಾಲೇಜ್- ಆಸ್ಪತ್ರೆಯಲ್ಲಿ ತರಬೇತಿ ನಿರತ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ಕೊಡಿಸಲಾಗುವುದು. ಅಗತ್ಯವಿದ್ದರೆ ನಾನು ರಾಜೀನಾಮೆ ನೀಡಲೂ ಸಿದ್ಧ ಎಂದು ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಮತ್ತೊಮ್ಮೆ ಹೇಳಿದ್ದಾರೆ.
ಪ್ರತಿಭಟನಾ ನಿರತ ಕಿರಿಯ ವೈದ್ಯರು ಮತ್ತು ರಾಜ್ಯ ಸರ್ಕಾರದ ನಡುವೆ ಸಂಘರ್ಷ ಮುಂದುವರೆದಿದ್ದು, ಈ ನಡುವೆ ವೈದ್ಯರ ಪ್ರತಿಭಟನೆ ನಡೆಸುತ್ತಿದ್ದ ಸ್ವಾಸ್ಥ್ಯ ಭವನಕ್ಕೆ ಸಿಎಂ ಮಮತಾ ಬ್ಯಾನರ್ಜಿ ಭೇಟಿ ನೀಡಿದರು. ಈ ವೇಳೆ ವೈದ್ಯರು ನಮಗೆ ನ್ಯಾಯ ಬೇಕು ಎಂದು ಘೋಷಣೆ ಕೂಗಿದರು. ವೈದ್ಯರನ್ನು ಭೇಟಿಯಾಗಲು ನಾನು ಸಿಎಂ ಆಗಿ ಅಲ್ಲ. ಬದಲಿಗೆ ಸಹೋದರಿಯಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಇದನ್ನೂ ಓದಿ: ಜೀವನವು ಖಟಾ-ಖಟ್ ಅಲ್ಲ, ಕಠಿಣ ಪರಿಶ್ರಮ ಬೇಕು: ರಾಹುಲ್‌ಗೆ ಜೈಶಂಕರ್ ಟಾಂಗ್
ನಿಮ್ಮ ಬೇಡಿಕೆಗಳನ್ನು ಕೇಳಿದ ಬಳಿಕ ಅಧ್ಯಯನ ನಡೆಸುತ್ತೇನೆ. ನಾನೊಬ್ಬಳೆ ಸರ್ಕಾರ ನಡೆಸುತ್ತಿಲ್ಲ. ಖಂಡಿತಾ ನಿಮ್ಮ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳೊಂದಿಗೆ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುತ್ತೇನೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಖಂಡಿತ ಶಿಕ್ಷೆಯಾಗುತ್ತದೆ. ನಾನು ನಿಮ್ಮಿಂದ ಸ್ವಲ್ಪ ಸಮಯ ಕೇಳುತ್ತಿದ್ದೇನೆ. ನಿಮ್ಮ (ಪ್ರತಿಭಟನಾನಿರತ ವೈದ್ಯರು) ವಿರುದ್ಧ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಕೆಲಸಕ್ಕೆ ಮರಳಲು ನಾನು ನಿಮ್ಮನ್ನು ವಿನಂತಿಸುತ್ತೇನೆ.
ಆಸ್ಪತ್ರೆಯ ಅಭಿವೃದ್ಧಿ, ಮೂಲಸೌಕರ್ಯ, ಭದ್ರತೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳು ಪ್ರಾರಂಭವಾಗಿದ್ದು, ಮುಂದೆಯೂ ಮಾಡಲಾಗುತ್ತದೆ. ಸಿಪಿಐಎಂ ಅಧಿಕಾರದಲ್ಲಿದ್ದಾಗ ನಾನು 26 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದೆ. ನಾನೇ ವಿದ್ಯಾರ್ಥಿ ಚಳವಳಿ ಮೂಲಕ ಮುಂದೆ ಬಂದಿದ್ದೇನೆ. ನನ್ನ ಜೀವನದಲ್ಲಿಯೂ ಸಾಕಷ್ಟು ಹೋರಾಟ ಮಾಡಿದ್ದೇನೆ. ನಿಮ್ಮ ಹೋರಾಟ ನನಗೆ ಅರ್ಥವಾಗಿದೆ. ನನ್ನ ಸ್ಥಾನದ ಬಗ್ಗೆ ನನಗೆ ಚಿಂತೆಯಿಲ್ಲ. ರಾತ್ರಿಯಿಡೀ ಮಳೆ ಸುರಿಯಿತು. ನೀವು ಪ್ರತಿಭಟನೆಗೆ ಕುಳಿತಿದ್ದೀರಿ. ನಾನು ರಾತ್ರಿಯಿಡೀ ಚಿಂತೆ ಮಾಡುತ್ತಿದ್ದೆ. ಇದು ನನ್ನ ಕೊನೆಯ ಪ್ರಯತ್ನವಾಗಿದ್ದು, ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ಭರವಸೆ ನೀಡುತ್ತೇನೆ ಎಂದರು. ಇದನ್ನೂ ಓದಿ: ಜನಸಂಖ್ಯೆ ಇಳಿಕೆ, ಆರ್ಥಿಕ ಸಂಕಷ್ಟ – ಚೀನಾದಲ್ಲಿ ನಿವೃತ್ತಿ ವಯಸ್ಸು ಏರಿಕೆ
ಮಮತಾ ಬ್ಯಾನರ್ಜಿ ಅಲಿಸಿದ ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಲು ನಾವು ಸಿದ್ಧ ಎಂದು ವೈದ್ಯರು ಹೇಳಿದರು. ನಮ್ಮ ಐದು ಬೇಡಿಕೆಗಳ ಬಗ್ಗೆ ಸರ್ಕಾರದೊಂದಿಗೆ ಯಾವುದೇ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದರು. ಇದು ಅಸಮಂಜಸ ಬೇಡಿಕೆಯಲ್ಲ, ನಮ್ಮ ಬೇಡಿಕೆ ನ್ಯಾಯ ಬದ್ಧವಾಗಿವೆ ಎಂದರು.